Advertisement

ಗ್ರೆನೇಡ್‌ ಮೂಲಕ್ಕೆ ಕೈ ಹಾಕಿದ ಸಿಸಿಬಿ – NBDC ಮೂಲಕ ಮಾಹಿತಿ ಸಂಗ್ರಹಕ್ಕೆ ಸಜ್ಜು

09:33 PM Jul 22, 2023 | Team Udayavani |

ಬೆಂಗಳೂರು: ಉಗ್ರ ಸಂಘಟನೆ ಲಷ್ಕರ್‌-ಎ-ತಯ್ಯಬಾ ಜತೆ ಸಂಪರ್ಕ ಹೊಂದಿ, ರಾಜ್ಯದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಐವರು ಶಂಕಿತರು ಹೊಂದಿದ್ದ ಗ್ರೆನೇಡ್‌ ಬಗ್ಗೆ ಮಾಹಿತಿ ಸಂಗ್ರಹಿಸಲು ಸಿಸಿಬಿ ಪೊಲೀಸರು ಸಿದ್ದತೆ ನಡೆಸಿದ್ದಾರೆ. ಅದಕ್ಕಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ಜತೆಗೆ ರಾಷ್ಟ್ರೀಯ ಬಾಂಬ್‌ ಡೇಟಾ ಸೆಂಟರ್‌ (ಎನ್‌ಬಿಡಿಸಿ)ಗಳ ಮೊರೆ ಹೋಗಿದ್ದಾರೆ. ಇದೇ ವೇಳೆ ಶಂಕಿತರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆಯಾಗಿರುವ ಹಣದ ಮೂಲ ಪತ್ತೆ ಕಾರ್ಯವೂ ನಡೆಯುತ್ತಿದೆ.

Advertisement

ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ಶಂಕಿತ ಜಾಹೀದ್‌ ತಬ್ರೇಜ್‌ಗೆ ನೆಲಮಂಗಲ ಬಳಿ ಗ್ರೆನೇಡ್‌ ನೀಡಿದ್ದಾನೆ. ಆ ಅಪರಿಚಿತ ವ್ಯಕ್ತಿ ಯಾರೆಂದು ಗೊತ್ತಾಗಿಲ್ಲ. ತಬ್ರೇಜ್‌ ತನ್ನ ಮನೆಯವರಲ್ಲಿ ಪಾರ್ಸೆಲ್‌ ಎಂದು ಸುಳ್ಳು ಹೇಳಿ ಅದನ್ನು ಮನೆಯಲ್ಲಿ ಇಟ್ಟಿದ್ದಾನೆ. ಜಾಹೀದ್‌ ಕೂಡ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ ಕೋರ್ಟ್‌ ಅನುಮತಿ ಪಡೆದು ಗ್ರೆನೇಡ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಹಾಗೆಯೇ ಎನ್‌ಬಿಡಿಸಿಗೂ ಪತ್ರ ಮೂಲಕ ವಿಶ್ಲೇಷಣೆ ಮಾಡಲು ಕೋರಲಾಗುತ್ತದೆ. ಈ ಮಾದರಿಯ ಗ್ರೆನೇಡ್‌ ದೇಶದ ಬೇರೆ ಎಲ್ಲಿಯಾದರೂ ಬಳಕೆ ಆಗಿತ್ತೇ, ಹೊಸ ಮಾದರಿಯ ಗ್ರೆನೇಡ್‌ಗಳೇ ಎಂಬುದನ್ನು ಎನ್‌ಬಿಡಿಸಿ ವಿಶ್ಲೇಷಣೆ ಮಾಡಲಿದೆ. ಆಗ ಯಾವ ರಾಜ್ಯದಲ್ಲಿ ಗ್ರೆನೇಡ್‌ ತಯಾರು ಮಾಡಲಾಗಿದೆ ಎಂಬುದು ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿವೆ.

ಡಿಜಿಟಲ್‌ ಪೇಮೆಂಟ್‌ ಬಗ್ಗೆ ಮಾಹಿತಿ

ಶಂಕಿತರಿಗೆ ಡಿಜಿಟಲ್‌ ಪೇಮೆಂಟ್‌ ಆಗಿರುವುದು ಪತ್ತೆಯಾಗಿದೆ. ಉಗ್ರ ನಾಸಿರ್‌ ಶಂಕಿತರಿಗೆ ಉಗ್ರ ಸಂಘಟನೆ ಸೇರಲು ಲಕ್ಷಾಂತರ ರೂ. ಆಮಿಷವೊಡ್ಡಿದ್ದಾನೆ. ಹೀಗಾಗಿ ಯಾವ ಖಾತೆಯಿಂದ ಶಂಕಿತರಿಗೆ ಹಣ ಬಂದಿದೆ, ಆ ಹಣ ಬೇರೆ ಯಾರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂಬುದು ತಿಳಿಯಬೇಕಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಒಂದಷ್ಟು ಮೊತ್ತ ಹವಾಲಾ ಮೂಲಕ ಸಂದಾಯವಾಗಿದೆ. ಬಾಕಿ ಡಿಜಿಟಲ್‌ ಪೇಮೆಂಟ್‌ ನಡೆದಿದೆ ಎಂದು ಹೇಳಲಾಗಿದೆ. ಹೀಗಾಗಿ ಆರೋಪಿಗಳ ಬ್ಯಾಂಕ್‌ ಖಾತೆ ವಿವರ ಪಡೆಯಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಮೊಬೈಲ್‌ ಫೋನ್‌ ರಿಟ್ರೀವ್‌

Advertisement

ಶಂಕಿತರ 2 ವರ್ಷಗಳ ಕರೆಗಳ ಮಾಹಿತಿ ಕಲೆ ಹಾಕುತ್ತಿದ್ದು, ಅವರು ಈವರೆಗೆ ಯಾರ ಜತೆ ಸಂಪರ್ಕ ಹೊಂದಿದ್ದರು ಎಂದು ಯುಎಪಿಎ ಸೆಕ್ಷನ್‌ ಅಡಿ ಎರಡು ವರ್ಷಗಳ ಸಿಡಿಆರ್‌ ಪಡೆದು ಪರಿಶೀಲನೆಗೆ ಮುಂದಾಗಿದ್ದಾರೆ. ಕೆಲವರು ಸಿಮ್‌ ಬದಲಿಸಿದ್ದಾರೆ. ಈ ಹೊಸ ಸಿಮ್‌ನಲ್ಲಿ ಯಾರಿಗೆಲ್ಲ ಕರೆ ಮಾಡಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಯಲಿದೆ. ಅಲ್ಲದೆ ಶಂಕಿತರ ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್‌ ಚಾಟಿಂಗ್‌ ಮತ್ತು ಕರೆಗಳು ಪತ್ತೆಯಾಗಿವೆ. ಶಂಕಿತರು ವಾಟ್ಸ್‌ಆ್ಯಪ್‌ ಮೂಲಕ ಹಲವರಿಗೆ ಕರೆ ಮಾಡಿದ್ದು, ಚಾಟಿಂಗ್‌ ಮಾಡಿರುವುದು ಬೆಳಕಿಗೆ ಬಂದಿದೆ. ಕೆಲವರ ಬಳಿ ಆಂಡ್ರಾಯ್ಡ್‌ ಮೊಬೈಲ್‌ ಇದ್ದರೆ ಇನ್ನು ಕೆಲವರ ಬಳಿ ಬೇಸಿಕ್‌ ಮೊಬೈಲ್‌ಗ‌ಳಿವೆ. ಹೀಗಾಗಿ ಕೇಂದ್ರದ ತನಿಖಾ ಸಂಸ್ಥೆಗಳ ಸಹಾಯದಿಂದ ಮೊಬೈಲ್‌ಗ‌ಳನ್ನು ರಿಟ್ರೀವ್‌ ಮಾಡಲಾಗುತ್ತದೆ ಎಂದೂ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next