Advertisement
ಗೇರು ಕೃಷಿ ಕರಾವಳಿಯ ವಾಣಿಜ್ಯ ಬೆಳೆಗಳಲ್ಲಿ ಒಂದು. ಗೇರು ಮರಕ್ಕೂ ಕಾಲ – ಕಾಲಕ್ಕೆ ನೀರು, ಕೋಳಿ ಗೊಬ್ಬರ, ರಸಗೊಬ್ಬರಗಳನ್ನು ನೀಡಿದಲ್ಲಿ, ಉತ್ತಮ ಇಳುವರಿಯನ್ನು ಪಡೆಯಬಹುದು. ಸರಿಯಾದ ರೀತಿಯಲ್ಲಿ ಪೋಷಕಾಂಶಗಳನ್ನು ನೀಡಿದಲ್ಲಿ 1 ಎಕರೆಗೆ 8 ಕ್ವಿಂಟಾಲ್ ಬರುತ್ತಿದ್ದ ಫಸಲು, ದುಪ್ಪಟ್ಟು ಅಂದರೆ 15 ರಿಂದ 16 ಕ್ವಿಂಟಾಲ್‌ವರೆಗೂ ಗಳಿಸಬಹುದು.
Related Articles
ಗೇರು ಗಿಡಗಳನ್ನು ಕಸಿ ಮಾಡಿ, ನೆಟ್ಟರೆ ಅನೇಕ ಪ್ರಯೋಜನಗಳಿವೆ. ಕಸಿ ಕಟ್ಟುವುದರಿಂದ ಉತ್ತಮವಾಗಿ ಬೆಳೆಯುವುದರ ಜತೆಗೆ ಒಳ್ಳೆಯ ಫಸಲನ್ನು ತಂದುಕೊಡುತ್ತದೆ. ಇದರಿಂದ ಎಲ್ಲ ಮರಗಳಿಂದಲೂ ಒಂದೇ ರೀತಿಯ ಇಳುವರಿಯನ್ನು ಪಡೆಯಬಹುದು. ಗಿಡಗಳ ಕಳೆಯನ್ನು ಕೂಡ ಏಕಕಾಲದಲ್ಲಿ ತೆಗೆಯಬಹುದು. ಆಗಾಗ ಬೀಜ ಕೊಯ್ಯುವ ಬದಲು ಒಟ್ಟಿಗೆ ಕೊಯ್ಲು ಆಗುವುದರಿಂದ ಕೆಲಸಗಾರರನ್ನು ಒಮ್ಮೆಯೇ ಕರೆಯಬಹುದು. ಕೀಟ, ರೋಗಕ್ಕೆ ರಾಸಯನಿಕ ದ್ರವಣವನ್ನು ಕೂಡ ಒಮ್ಮೆಲೇ ಸಿಂಪಡಣೆ ಮಾಡಬಹುದು.
Advertisement
ಗೇರು ತೋಟದಲ್ಲಿರುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕು. ಇದರಿಂದ ಮುಖ್ಯವಾಗಿ ಕೀಟ ಹಾಗೂ ಹಲವಾರು ರೋಗಗಳು ಕಾಣಿಸಿಕೊಳ್ಳುವುದು ತಪ್ಪುತ್ತದೆ. ಮಾತ್ರವಲ್ಲದೆ ಬೀಜ ಕೊಯ್ಯಲು ಕೂಡ ಇದರಿಂದ ಅನುಕೂಲವಾಗುತ್ತದೆ. ಇನ್ನು ಹೊಸ ಫಸಲು ಕೊಡುವ ಮರಗಳಿಂದ ಸೆಪ್ಟೆಂಬರ್ – ಅಕ್ಟೋಬರ್‌ನಲ್ಲಿ ಅಂದರೆ ಹೂವು ಬಿಡುವ ಮುನ್ನ ಕಳೆ ತೆಗೆಯಬೇಕು. ಕೀಟನಾಶಕಗಳನ್ನು ಸಿಂಪಡಣೆ ಮಾಡಿದರೆ ಉತ್ತಮ.
ಎಕರೆಗೆ ಎಷ್ಟು ಗಿಡ?ಒಂದು ಎಕರೆ ಪ್ರದೇಶದಲ್ಲಿ 100 ರಿಂದ 106 ಗೇರು ಗಿಡಗಳನ್ನು ನೆಡಬಹುದು. ಆದರೆ 1 ಮರದಿಂದ ಮತ್ತೂಂದು ಮರಕ್ಕೆ 16 ಅಡಿ ಅಂತರವಿಟ್ಟರೆ ಎಕರೆಗೆ 160 ರ ವರೆಗೆ ಗಿಡಗಳನ್ನು ನೆಡಬಹುದು. ಒಂದು ಎಕರೆಗೆ ಕ್ರಮಬದ್ಧವಾಗಿ ಬೆಳೆಸಿದರೆ 15 ರಿಂದ 16 ಕ್ವಿಂಟಾಲ್‌ವರೆಗೂ ಇಳುವರಿ ಗಳಿಸಬಹುದು. ಗೊಬ್ಬರ ಹೇಗೆ? ಎಷ್ಟು?
ಒಂದು ಗೇರು ಮರಕ್ಕೆ ಕನಿಷ್ಠ ವರ್ಷಕ್ಕೆ 10 ರಿಂದ 15 ಕೆ.ಜಿ. ಹಟ್ಟಿ ಗೊಬ್ಬರ ಅಥವಾ 5 ರಿಂದ 10 ಕೆ.ಜಿ.ವರೆಗೆ ಕೋಳಿ ಗೊಬ್ಬರ ಹಾಕಬೇಕು. ಇದರ ಜತೆಗೆ ಎನ್‌ಪಿಕೆ ರಸಗೊಬ್ಬರವನ್ನು ಕೂಡ ಹಾಕಬೇಕು. ಇದರ ಜತೆಗೆ ವರ್ಷದಲ್ಲಿ 1 ಸಲ ಅಥವಾ ಕನಿಷ್ಠ 2 ವರ್ಷಕ್ಕೆ ಒಮ್ಮೆಯಾದರೂ ಮರಗಳಿಗೆ ಸುಣ್ಣ ಹಾಕಬೇಕು. ಇದರಿಂದ ಮಣ್ಣಿನಲ್ಲಿರುವ ಹುಳಿಯ ಅಂಶವನ್ನು ಕಡಿಮೆ ಮಾಡಿ, ಗೊಬ್ಬರವನ್ನು ಸುಲಭವಾಗಿ ಹೀರಿಕೊಳ್ಳಲು ಅನುಕೂಲವಾಗುತ್ತದೆ. ಸುಣ್ಣ ಅಡಿಕೆ, ತೆಂಗು ಮರಗಳಿಗೂ ಹಾಕಿದರೆ ಉತ್ತಮ. ಯಾವ ತಳಿ ಸೂಕ್ತ?
ಕರಾವಳಿಯ ಭಾಗದ ಕುಂದಾಪುರ, ಉಡುಪಿ, ಕಾರ್ಕಳ, ಪುತ್ತೂರು, ಬೆಳ್ತಂಗಡಿಯಂತಹ ಪ್ರದೇಶಗಳಲ್ಲಿ ಈಗ ಉಳ್ಳಾಲ -1 ತಳಿಯ ಗೇರು ಗಿಡಗಳನ್ನು ಬೆಳೆಯಲಾಗುತ್ತಿದೆ. ಇದರ ಜತೆಗೆ ಉತ್ತಮ ಇಳುವರಿ ಬರುವ ತಳಿಗಳಾದ ಉಳ್ಳಾಲ-2, ಉಳ್ಳಾಲ -3, ಭಾಸ್ಕರ, ವೆಂಗೂರ್ಲಾ 7, ವೆಂಗೂರ್ಲಾ -8, ವಿಆರ್‌ಐ-1, ವಿಆರ್‌ಐ-2, ವಿಆರ್‌ಐ-3, ಹೈಬ್ರಿಡ್ ತಳಿಗಳಾದ ಕೇರಳದ ಧನ, ಕನಕ, ಪ್ರಿಯಾಂಕ, ಅಮೃತ್, ಸುಲಭ ಉತ್ತಮ ಫಸಲನ್ನು ತಂದು ಕೊಡುತ್ತದೆ. ಇದಲ್ಲದೆ ಆಂಧ್ರ ಪ್ರದೇಶದ ಬಿಪಿಸಿ-8, ಭುವನೇಶ್ವರ್-1 ತಳಿಯೂ ಕೂಡ ಇಲ್ಲಿನ ಹವಾಗುಣ ಹಾಗೂ ಮಣ್ಣಿನ ತೇವಾಂಶದಲ್ಲಿ ಉತ್ತಮ ಇಳುವರಿಯನ್ನು ಕೊಡುತ್ತದೆ. ಗೇರು ಕೃಷಿಯಿಂದಲೂ ಆದಾಯ ಗಳಿಸಬಹುದು. ನಾನು ವಾರ್ಷಿಕ 1 ಎಕರೆಗೆ 15 ರಿಂದ 16 ಕ್ವಿಂಟಾಲ್ ಇಳುವರಿಯನ್ನು ಪಡೆಯುತ್ತಿದ್ದೇನೆ. ಆದರೆ ಮುಖ್ಯವಾಗಿ ಗೇರು ತೋಟದಲ್ಲಿ ಉತ್ತಮ ತೇವಾಂಶ, ಉತ್ತಮ ಪೋಷಕಾಂಶ ಸಿಗುವಂತೆ ನೋಡಿ ಕೊಳ್ಳಬೇಕು. ಅಡಿಕೆ ಅಥವಾ ತೆಂಗಿನ ಮರಕ್ಕೆ ನೀಡುವ ಕನಿಷ್ಠ ಶೇ.10 ರಷ್ಟು ಪೋಷಣೆ ಗೇರು ಮರಕ್ಕೆ ಮಾಡಿದರೆ ಒಳ್ಳೆಯ ಆದಾಯ ಗಳಿಸಬಹುದು.
-ಚಂದ್ರಶೇಖರ ಉಡುಪ ಕೆಂಚನೂರು,ಗೇರು ಕೃಷಿಕರು ಉಪ ಬೆಳೆ ಬೆಳೆಸಬಹುದು
ಗಿಡಗಳ ಮಧ್ಯೆ ಆರಂಭದ 2 ರಿಂದ 3 ವರ್ಷದವರೆಗೆ ಅಂದರೆ ಫಸಲು ಬರುವವರೆಗೆ ಕುಂಬಳ, ಸೌತೆ, ಹೀರೆಕಾಯಿ, ಹಾಗಲಕಾಯಿ, ಸುವರ್ಣಗೆಡ್ಡೆ, ಮತ್ತಿತರ ತರಕಾರಿ ಬೆಳೆ, ಶುಂಠಿ, ಅರಿಶಿನವನ್ನು ಬೆಳೆಸಬಹುದು. ಇದಕ್ಕೆ ಹಾಕುವ ಗೊಬ್ಬರದಿಂದ ಗೇರು ಮರಗಳಿಗೂ ಲಾಭವಿದೆ. ನೀರಿನ ಸೌಕರ್ಯವಿದ್ದರೆ ಮರಗಳು ದೊಡ್ಡದಾದ ಅನಂತರ ಕಾಳು ಮೆಣಸನ್ನು ಕೂಡ ಮಾಡಬಹುದು. ಔಷಧೀಯ ಸಸ್ಯಗಳನ್ನು ಕೂಡ ಬೆಳೆಸಲು ಅವಕಾಶವಿದೆ. -ಪ್ರಶಾಂತ್ ಪಾದೆ