Advertisement

ಗೇರು ಬೀಜ ಆರಂಭಿಕ ಫಸಲು ಕಡಿಮೆ ಬೆಳೆಗಾರರಲ್ಲಿದೆ ನಿರೀಕ್ಷೆ

10:15 PM Feb 01, 2020 | Sriram |

ಈ ವರ್ಷವೂ ಗೇರು ಮರಗಳು ಹೂ ಬಿಡಲು ತಡವಾಗಿದೆ. ಜತೆಗೆ ಆರಂಭಿಕ ಫಸಲೂ ಕಡಿಮೆಯಾಗಿದೆ. ಗೇರು ಬೀಜ ಬೆಳೆಯುವ ಪ್ರಮಾಣ ಕಡಿಮೆ ಇರುವುದು ಮತ್ತು ಬೇಡಿಕೆ ಇರುವುದರಿಂದ ಮಾರುಕಟ್ಟೆಯಲ್ಲಿ ಸ್ಥಿರ ಧಾರಣೆಯ ಸಾಧ್ಯತೆಯೊಂದಿಗೆ ಹವಾಮಾನ ಗುಣಾತ್ಮಕವಾಗಿ ಪರಿಣಮಿಸಿದರೆ ಗೇರು ಬೆಳೆಗಾರರಿಗೆ ಲಾಭವಾಗುವ ನಿರೀಕ್ಷೆ ಇದೆ.
ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳ ಅಂತ್ಯದಲ್ಲಿ ಹೂ ಬಿಟ್ಟು ಜನವರಿ ತಿಂಗಳಲ್ಲಿ ಫಸಲು ತುಂಬಿಕೊಳ್ಳುವ ಗೇರು ಹಣ್ಣಿನ ಮರಗಳು ಕಳೆದ ವರ್ಷದಂತೆ ಈ ಬಾರಿಯೂ ತಡವಾಗಿ ಹೂಬಿಟ್ಟು ಈಗ ನಿಧಾನವಾಗಿ ಫಸಲು ತುಂಬಿಕೊಳ್ಳುತ್ತಿವೆ. ಈ ಕಾರಣದಿಂದ ಗೇರು ಕೃಷಿಕರಲ್ಲಿ ಒಂದಷ್ಟು ಆತಂಕವಿದ್ದರೂ ಮುಂದೆ ಫಸಲು ಉಳಿದುಕೊಳ್ಳುವ ನಿರೀಕ್ಷೆಯೂ ಇದೆ.

Advertisement

ಸಾಮಾನ್ಯವಾಗಿ ಗೇರು ಕೃಷಿ ಚಳಿಗಾಲ ಹಾಗೂ ಮಳೆಗಾಲದ ಮಧ್ಯೆ ಫಲ ನೀಡುತ್ತದೆ. ಮೇ ತಿಂಗಳ ಅಂತ್ಯದಲ್ಲಿ ಹತ್ತನಾವಧಿಯ ಸಮಯಕ್ಕೆ ಗೇರು ಫಸಲು ಮುಗಿಯುವುದು ಕ್ರಮ. ಗೇರು ಕೃಷಿಯ ಲಾಭ -ನಷ್ಟ ಮಳೆಯನ್ನು ಅವಲಂಭಿಸಿರುವುದರಿಂದ ಮಾರ್ಚ್‌, ಎಪ್ರಿಲ್‌ ತಿಂಗಳಲ್ಲಿ ಮಳೆ ಬಿರುಸು ಪಡೆದುಕೊಳ್ಳಲಿದ್ದರೆ, ನಿರೀಕ್ಷಿತ ಗೇರು ಬೀಜ ಫಸಲು ಕೈಗೆ ಸಿಗುವ ಹಾಗೂ ಉತ್ತಮ ದರ ಲಭಿಸುವ ನಿರೀಕ್ಷೆಯಲ್ಲಿ ಗೇರು ಕೃಷಿಕರಿದ್ದಾರೆ.

ವಾತಾವರಣದ ವ್ಯತ್ಯಾಸ
ಕಳೆದ ವರ್ಷ ಹವಾಮಾನದಲ್ಲಿ ಉಂಟಾದ ವೈಪರೀತ್ಯ, ಡಿಸೆಂಬರ್‌ ತಿಂಗಳವರೆಗೂ ಸುರಿದ ಮಳೆಯಿಂದ ಗೇರು ಮರಗಳು ಹೂ ಬಿಡಲು ತಡವಾಗಿತ್ತು. ಈ ವರ್ಷವೂ ಅದೇ ಸ್ಥಿತಿ ನಿರ್ಮಾಣವಾಗಿದೆ. ಅನಂತರದಲ್ಲಿ ವಾತಾವರಣ ಇನ್ನೂ ಮುಂದುವರಿದಿರುವುದರಿಂದ ಗೇರು ಮರಗಳು ಹೂ ಬಿಡಲು ತಡವಾಗಿದೆ. ಆರಂಭದಲ್ಲಿ ಚಳಿ, ಅನಂತರದಲ್ಲಿ ಸೆಕೆಯ ವಾತಾವರಣ ಗೇರು ಫಸಲಿಗೆ ಪೂರಕ. ಫೆಬ್ರವರಿ ತಿಂಗಳಲ್ಲಿ ವಾತಾವರಣ ಬಿಸಿ ಏರಿದಂತೆ ಗೇರು ಫಸಲು ಕುದುರಿಕೊಳ್ಳುತ್ತದೆ ಎನ್ನುವುದು ಗೇರು ಕೃಷಿ ತಜ್ಞರ ಅಭಿಪ್ರಾಯ.

ಚಹಾ ಸೊಳ್ಳೆಗೆ ಔಷಧಿ
ಗೇರು ಕೃಷಿಗೆ ಚಹಾ ಸೊಳ್ಳೆಯ ಕಾಟ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಔಷಧಿಯಾಗಿ ಬಳಕೆಯಾಗುತ್ತಿದ್ದ ಮೊನೋಪೊಟಸ್‌ಗಿಂತಲೂ ಕರಾಟೆ ಎಂಬ ಔಷಧ ಬಳಕೆಗೆ ಗೇರು ಕೃಷಿಕರು ಇಂದು ಆಸಕ್ತಿ ತೋರುತ್ತಿದ್ದಾರೆ.

100 ಲೀ. ನೀರಿಗೆ 125 ಮಿಲಿ ಕರಾಟೆ ಔಷಧದ ಬಳಕೆ ಹಾಗೂ ಇದರ ಜತೆಗೆ 15; 15; 15 ಎನ್ನುವ ಔಷಧಿಯನ್ನು 100 ಲೀ. ಗೆ ಅರ್ಧ ಕೆ.ಜಿ.ಯಂತೆ ಬಳಕೆ ಮಾಡಿದರೆ ಚಹಾ ಸೊಳ್ಳೆಯ ಕಾಟದ ವಿರುದ್ಧ ಪರಿಣಾಮಗಾರಿ ಎನ್ನುವುದು ಬೆಳೆಗಾರರ ಅಭಿಪ್ರಾಯ.

Advertisement

ಏರಿಕೆಯ ಬೆಲೆ
2015ನೇ ಸಾಲಿನಲ್ಲಿ ಕೆ.ಜಿ.ಗೆ 80ರಿಂದ 90 ರೂ.ಗೆ ಖರೀದಿಯಾಗಿದ್ದ ಗೇರುಬೀಜ 2016ನೇ ಸಾಲಿನಲ್ಲಿ ಗರಿಷ್ಠ 120-130 ರೂ., 2017ರಿಂದ 2019ರ ತನಕದ ಸಾಲಿನಲ್ಲಿ ಸಾಲಿನಲ್ಲಿ 130-150 ರೂ. ತನಕ ಮಾರುಕಟ್ಟೆಯಲ್ಲಿ ಖರೀದಿಯಾಗಿದೆ ಮತ್ತು ಧಾರಣೆಯಲ್ಲಿ ಸ್ಥಿರತೆಯನ್ನೂ ಉಳಿಸಿಕೊಂಡಿತ್ತು. ಕಳೆದ ಕೆಲವು ವರ್ಷಗಳಿಂದ 50 ರೂ. ಗಡಿ ದಾಟಲು ಆರಂಭವಾಗಿದ್ದ ಗೇರು ಬೀಜದ ದರ 150 ರೂ. ಮೀರಿ ದಾಖಲೆಯೊಂದಿಗೆ ರಬ್ಬರ್‌, ಅಡಿಕೆಯ ಮಧ್ಯೆ ಅಳಿದುಳಿದ ಗೇರು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ. ಬೇಡಿಕೆ ಏರುತ್ತಿರುವುದು ಮತ್ತು ಇಳುವರಿಯಲ್ಲಿ ಇಳಿಕೆಯಾಗುತ್ತಿರುವುದರಿಂದ ಈ ಬಾರಿಯೂ 150 ರೂ. ತನಕ ಧಾರಣೆ ಲಭಿಸುವ ನಿರೀಕ್ಷೆ ಇದೆ.

ಮಳೆಗೆ ಫಲ
ಗೇರು ಮರ ಹೂಬಿಟ್ಟ ಬಳಿಕ ಅಂದರೆ ಮಾರ್ಚ್‌ ಹಾಗೂ ಎಪ್ರಿಲ್‌ ತಿಂಗಳಲ್ಲಿ ಒಂದೆರಡು ಸಾಮಾನ್ಯ ಮಳೆಯಾದರೆ ಗೇರು ಬೀಜ ಫಸಲು ಹೆಚ್ಚಾಗುತ್ತದೆ. ಆದರೆ ನಿರಂತರ ಮಳೆ ಸುರಿದರೆ ಅಥವಾ ಮಂಜಿನ ವಾತಾವರಣ ಹೆಚ್ಚಿದ್ದರೆ ಮಾತ್ರ ಫಸಲು ಕರಟುವ ಜತೆಗೆ ಒದ್ದೆಯಾದ ಗೇರು ಬೀಜಕ್ಕೆ ಬೆಲೆಯೂ ಕಡಿಮೆಯಾಗುತ್ತದೆ.

-ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next