Advertisement

ಸಾರ್ವಕಾಲಿಕ ಗರಿಷ್ಠ ಮಾರುಕಟ್ಟೆ ದರದತ್ತ  ಗೇರು ಬೀಜ

11:52 AM Mar 18, 2018 | |

ಪುತ್ತೂರು : ಈ ಬಾರಿ ಸಾಕಷ್ಟು ಫಸಲು ವಿಳಂಬದ ಮಧ್ಯೆಯೂ ‘ಗೇರು ಬೀಜ’ ಸಾರ್ವಕಾಲಿಕ ಗರಿಷ್ಠ ಮಾರುಕಟ್ಟೆ ದರದತ್ತ ಸಾಗುತ್ತಿದೆ. ಈ ತೇಜಿ ಬೆಳವಣಿಗೆ ಹಾಗೂ ಹೂವು ಬಿಟ್ಟ ಗೇರು ಬೆಳೆಗೆ ಪೂರಕ ವೆನಿಸುವಂತೆ ಎರಡು ದಿನಗಳಿಂದ ಸುರಿದ ಮಳೆ ಗೇರು ಬೆಳೆಗಾರರಿಗೆ ಖುಷಿ ನೀಡಿದೆ.

Advertisement

ಗೇರು ಬೀಜ ಬೆಳೆಯುವ ಪ್ರಮಾಣ ಕಡಿಮೆ ಇರುವುದು, ಬೇಡಿಕೆಗೆ ತಕ್ಕಂತೆ ಗೇರು ಬೀಜ ಪೂರೈಕೆ ಇಲ್ಲದಿರುವುದರಿಂದ ಮಾರುಕಟ್ಟೆಯಲ್ಲಿ ಸ್ಥಿರ ಧಾರಣೆಯ ಸಾಧ್ಯತೆಯೊಂದಿಗೆ ಹವಾಮಾನ ಗುಣಾತ್ಮಕವಾಗಿ ಪರಿಣಮಿಸಿದರೆ ಗೇರು ಬೆಳೆಗಾರರಿಗೆ ಈ ಬಾರಿ ಹೆಚ್ಚು ಲಾಭವಾಗುವ ನಿರೀಕ್ಷೆಯಿದೆ. ಹವಾಮಾನದಲ್ಲಿ ಉಂಟಾದ ವೈಪರೀತ್ಯ ಗೇರು ಮರಗಳು ಹೂ ಬಿಡಲು ತಡವಾಗಿದೆ ಎಂಬುದಷ್ಟೇ ಸಮಸ್ಯೆ. 

ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳ ಅಂತ್ಯದಲ್ಲಿ ಹೂ ಬಿಟ್ಟು ಜನವರಿ ತಿಂಗಳಲ್ಲಿ ಫಸಲು ತುಂಬಿಕೊಳ್ಳುವ ಗೇರು ಹಣ್ಣಿನ ಮರಗಳು ಕಳೆದ ವರ್ಷದಂತೆ ಈ ಬಾರಿಯೂ ತಡವಾಗಿ ಹೂ ಬಿಟ್ಟು ಈಗ ನಿಧಾನವಾಗಿ ಫಸಲು ತುಂಬಿಕೊಳ್ಳುತ್ತಿವೆ. ಮೇ ತಿಂಗಳ ಅಂತ್ಯದಲ್ಲಿ ಹತ್ತನಾವಧಿಯ ಸಮಯಕ್ಕೆ ಗೇರು ಫಸಲು ಮುಗಿಯುವುದು ಕ್ರಮ. ಗೇರು ಕೃಷಿಯ ಲಾಭ -ನಷ್ಟ ಮಳೆಯನ್ನು ಅವಲಂಬಿಸಿರುವುದರಿಂದ ಮಾರ್ಚ್‌, ಎಪ್ರಿಲ್‌ ತಿಂಗಳಲ್ಲಿ ಮಳೆ ಬಿರುಸು ಪಡೆದುಕೊಳ್ಳದಿದ್ದರೆ ನಿರೀಕ್ಷಿತ ಗೇರು ಬೀಜ ಫಸಲು ಕೈಗೆ ಸಿಗುವ ಹಾಗೂ ಉತ್ತಮ ದರವೂ ಲಭಿಸುವ ನಿರೀಕ್ಷೆಯಲ್ಲಿ ಗೇರು ಕೃಷಿಕರಿದ್ದಾರೆ.

ಮಳೆಗೆ ಫಲ
ಗೇರು ಮರ ಹೂಬಿಟ್ಟ ಬಳಿಕ ಅಂದರೆ ಫೆಬ್ರವರಿ, ಮಾರ್ಚ್‌ ಹಾಗೂ ಎಪ್ರಿಲ್‌ ತಿಂಗಳಲ್ಲಿ ಒಂದೆರಡು ಸಾಮಾನ್ಯ ಮಳೆಯಾದರೆ ಗೇರು ಬೀಜ ಫಸಲು ಹೆಚ್ಚಾಗುತ್ತದೆ. ಆದರೆ ನಿರಂತರ ಮಳೆ ಸುರಿದರೆ ಅಥವಾ ಮೋಡದ ವಾತಾವರಣ ಹೆಚ್ಚಿದ್ದರೆ ಫಸಲು ಕರಟುವ ಜತೆಗೆ ಒದ್ದೆಯಾದ ಕಚ್ಚಾ ಗೇರು ಬೀಜಕ್ಕೆ ಬೆಲೆಯೂ ಕಡಿಮೆಯಾಗುತ್ತದೆ. ಈಗ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದ ಹಿನ್ನೆಲೆ ಗೇರು ಕೃಷಿಗೆ ಲಾಭವೇ ಆಗಿದೆ.

ಕಳೆದ ವರ್ಷ ಲಾಬಿ
ಕೇರಳ ರಾಜ್ಯದಲ್ಲಿ ಗೇರು ಉತ್ಪನ್ನಗಳ ಸಂಸ್ಕಾರಣ ಘಟಕಗಳು ಹೆಚ್ಚಾಗಿದ್ದು, ಈ ಕಾರಣದಿಂದ ಗಡಿ ಭಾಗಗಳಲ್ಲಿ ಅಂದರೆ ಪುತ್ತೂರು ತಾಲೂಕಿನ ಈಶ್ವರಮಂಗಲ, ಸುಳ್ಯ ಪೇಟೆಯ ಮಾರುಕಟ್ಟೆಗಳಲ್ಲಿ ದರವೂ ಹೆಚ್ಚು ಲಭಿಸುತ್ತದೆ. ಕಳೆದ ಬಾರಿ ಆರಂಭದಲ್ಲಿ ಕೆ.ಜಿ.ಗೆ 150 ರೂ. ಗೆ ಖರೀದಿಯಾಗಿದ್ದ ಗೇರು ಬೀಜ ಕೇರಳ ರಾಜ್ಯದಲ್ಲಿ ಗೇರುಬೆಲೆಗೆ ಬೆಂಬಲ ಬೆಲೆ ಸಹಿತ 135 ರೂ. ಗೆ ಖರೀದಿಸಲು ಆರಂಭಿಸಿದ ಕಾರಣ ಇಲ್ಲಿಯೂ ಬೆಲೆಯಲ್ಲಿ ಇಳಿಕೆಯಾಗಿತ್ತು. ಗೇರುಬೀಜಕ್ಕೆ ಕೇರಳದಲ್ಲಿ ಬೆಲೆ ನಿಗದಿ ಮಾಡಿರುವುದರ ಹಿಂದೆ ಗೇರು ಖರೀದಿ ಹಾಗೂ ಸಂಸ್ಕಾರಣ ಘಟಕಗಳ ಲಾಬಿ ಕೆಲಸ ಮಾಡಿರುವ ಅನುಮಾನವೂ ಇತ್ತು.

Advertisement

ಲಾಬಿ ಹಾಗೂ ಹವಾಮಾನ ವೈಪರಿತ್ಯ ಮುಕ್ತ ವಾತಾವರಣ ಕಂಡುಬಂದಲ್ಲಿ ಗೇರು ಬೀಜಕ್ಕೆ ಕೆ.ಜಿ.ಯೊಂದರ 150ರ ಮೇಲೆ ಧಾರಣೆ ಸ್ಥಿರತೆ ಕಾಯ್ದುಕೊಳ್ಳುವ ನಿರೀಕ್ಷೆ ಬೆಳೆಗಾರರಲ್ಲಿದೆ.

ಬೆಲೆ ಏರಿಕೆ ಹಾದಿ
2015ನೇ ಸಾಲಿನಲ್ಲಿ 80ರಿಂದ 90 ರೂ.ಗೆ ಖರೀದಿಯಾಗಿದ್ದ ಗೇರುಬೀಜ 2016ನೇ ಸಾಲಿನಲ್ಲಿ ಗರಿಷ್ಠ 120 -130 ರೂ. ತನಕ, 2017ನೇ ಸಾಲಿನಲ್ಲಿ ಆರಂಭ ದಲ್ಲೇ ಮಾರುಕಟ್ಟೆಯಲ್ಲಿ 150 ರೂ.ಗೆ ಖರೀದಿಯಾಗಿ ಅನಂತರ ಸ್ವಲ್ಪ ಇಳಿಕೆ ಯಾಗಿತ್ತು. ಗೇರು ಫಸಲು ಮಾರುಕಟ್ಟೆಗೆ ಸಣ್ಣ ಪ್ರಮಾಣದಲ್ಲಿ ಅವಕವಾಗುತ್ತಿರುವ ಈ ಸಂದರ್ಭದಲ್ಲಿ ಮುಖ್ಯ ಮಾರುಕಟ್ಟೆಯಲ್ಲಿ 150-155 ರೂ. ತನಕ ಖರೀದಿಯಾಗುತ್ತಿದೆ. ಸಣ್ಣ ಮಟ್ಟದ ಖರೀದಿದಾರರು 145-150 ರೂ.ಗೆ ಖರೀದಿಸುತ್ತಿದ್ದಾರೆ.

ಬೆಲೆ ಏರಿಕೆ ಏಕೆ?
ಗೇರು ಬೀಜ ಬೆಳೆಯುವ ಪ್ರಮಾಣ ಕಡಿಮೆ ಇದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲ. ಹೀಗಾಗಿ, ಮಾರುಕಟ್ಟೆಯಲ್ಲಿ ಸ್ಥಿರ ಧಾರಣೆಯ ಸಾಧ್ಯತೆ ಜತೆಗೆ ಹವಾಮಾನ ಗುಣಾತ್ಮಕವಾಗಿ ಪರಿಣಮಿಸಿದರೆ ಗೇರು ಬೆಳೆಗಾರರಿಗೆ ಈ ಬಾರಿ ಹೆಚ್ಚು ಲಾಭವಾಗುವ ನಿರೀಕ್ಷೆ ಯಿದೆ. ಹವಾಮಾನ ವೈಪರೀತ್ಯ ಗೇರು ಮರಗಳು ಹೂವು ಬಿಡಲು ತಡವಾಗಿದೆ ಎಂಬುದಷ್ಟೇ ಸಮಸ್ಯೆ.

ಲಾಭವಾಗುವ ನಿರೀಕ್ಷೆ.
4 ವರ್ಷಗಳ ಹಿಂದೆ ಗೇರು ಬೀಜಕ್ಕೆ ಇದ್ದ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎನ್ನುವುದೇ ಖುಷಿ. ಈ ವರ್ಷ ಫಸಲು ತುಂಬಾ ತಡವಾಗಿದೆ. ಕೆಲವು ತಳಿಗಳಲ್ಲಿ ಈಗಷ್ಟೇ ಹೂವು ಬಿಡುತ್ತಿದೆ. ಫಸಲು ಲಭಿಸಿ ಎಪ್ರಿಲ್‌, ಮೇ ತಿಂಗಳಲ್ಲಿ ಮಳೆ ಬಾರದಿದ್ದರೆ ಲಾಭವಾಗುವ ನಿರೀಕ್ಷೆ ಇದೆ.
– ಕುಂಞಣ್ಣ ನಾಯ್ಕ್ 
ಗೇರು ಕೃಷಿಕರು, ಪುಣಚ

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next