Advertisement

ಆರ್ಥಿ”ಕತೆ’ಹೇಳುವ ಜಿಡಿಪಿ!

11:12 AM Sep 17, 2019 | Sriram |

“ಜಿಡಿಪಿ’ ಎನ್ನುವ ಅಂಶವನ್ನು ಇಟ್ಟುಕೊಂಡು ಜನರು, ದೇಶ ಅಭಿವೃದ್ಧಿ ಹೊಂದುತ್ತಿದೆ ಅಂತಲೋ, ಇಲ್ಲವೇ ದೇಶದ ಆರ್ಥಿಕತೆ ಕುಸಿಯುತ್ತಿದೆ ಅಂತಲೋ ಚರ್ಚೆ ಮಾಡುವುದನ್ನು ನೀವು ನೋಡಿರಬಹುದು. ದೇಶದ ಏಳ್ಗೆಯನ್ನೇ ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ಈ “ಜಿಡಿಪಿ’ ಎನ್ನುವ ಮಾಂತ್ರಿಕ ಸಂಖ್ಯೆಯ ಮಾಯೆಯನ್ನು ಲೇಖಕರಿಲ್ಲಿ ವಿವರಿಸಿದ್ದಾರೆ…

Advertisement

ಜಿಡಿಪಿ ಎಂಬುದು, ಆಗಾಗ್ಗೆ ನಮ್ಮ ಕಿವಿಯ ಮೇಲೆ ಬೀಳುವ ಪದ. ಜಿಡಿಪಿ ಬೆಳವಣಿಗೆ ಕಡಿಮೆ ಆಗಿದೆ, ಹೆಚ್ಚಾಗಿದೆ ಎಂದಾಗಲೆಲ್ಲ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಏನೋ ಬದಲಾವಣೆ ಆಗುತ್ತಿದೆ ಎನ್ನುವುದು ಅರಿವಾಗುತ್ತದೆ. ಜಿಡಿಪಿ ಬೆಳವಣಿಗೆ ಇಷ್ಟು ಶೇಕಡಾ ಕುಸಿದಿದೆ, ಅಥವಾ ಹೆಚ್ಚಿದೆ ಎನ್ನುವುದು ಇವತ್ತು ನನ್ನ ಜೇಬಿನ ಮೇಲೆ ಏನು ಪರಿಣಾಮ ಉಂಟುಮಾಡಬಲ್ಲದು ಎನ್ನುವುದನ್ನೂ ಸೂಚಿಸುತ್ತದೆ. ಗ್ರೋಸ್‌ ಡೊಮೆಸ್ಟಿಕ್‌ ಪ್ರಾಡಕr…(Gross Domestic Product) ಅಥವಾ ಒಟ್ಟು ದೇಶಿಯ ಉತ್ಪನ್ನವನ್ನು ಸಂಕ್ಷಿಪ್ತವಾಗಿ ಜಿಡಿಪಿ ಎನ್ನುತ್ತಾರೆ. ಇದರ ಲೆಕ್ಕಾಚಾರದ ಮೇಲೆ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯನ್ನು ನಿರ್ಧರಿಸಲಾಗುತ್ತದೆ. ಅದನ್ನು ವ್ಯಕ್ತಪಡಿಸುವುದು ಶೇಖಡಾದಲ್ಲಿ. ಕಳೆದ ಮೂರು ತಿಂಗಳ ಜಿಡಿಪಿ ಬೆಳವಣಿಗೆ 5%. ಅಂದರೆ, ನಮ್ಮ ದೇಶದ ಒಟ್ಟೂ ದೇಶಿಯ ಉತ್ಪನ್ನ ಮೂರು ತಿಂಗಳಲ್ಲಿ 5% ಹೆಚ್ಚಿದೆ ಎಂದರ್ಥ. ನಮ್ಮ ದೇಶದಲ್ಲಿ ಮಾರಾಟವಾದ ಒಟ್ಟೂ ಸರಕುಗಳು, ಸೇವೆಗಳು ಎಲ್ಲವನ್ನೂ ಒಂದೇ ಕಡೆ ಇಟ್ಟು ಲೆಕ್ಕ ಮಾಡಿದರೆ ಅದರ ಉತ್ತರ ಜಿಡಿಪಿ. ದೇಶ ಒಂದೇ ಅಲ್ಲ, ರಾಜ್ಯ, ತಾಲ್ಲೂಕು ಹೀಗೆ ಒಂದು ನಿರ್ಧಾರಿತ ಗಡಿಯಲ್ಲಿ ಜಿಡಿಪಿ ಅಳೆಯಬಹುದು. ಅದನ್ನು ಪ್ರತಿದಿನವೂ ಅಳೆಯುವುದು ಬಹಳ ಕಷ್ಟ. ಹೀಗಾಗಿ, ಮೂರು ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಅಳೆಯುತ್ತಾರೆ. ಜಿಡಿಪಿಯನ್ನು ಕೇಂದ್ರೀಯ ಸಂಖ್ಯಾಶಾಸ್ತ್ರ ಸಂಸ್ಥೆ ಹೇಳುತ್ತದೆ. ದೇಶದ ಹಲವಾರು ಸಂಘ, ಸಂಸ್ಥೆಗಳ ಜೊತೆ ಸಂಪರ್ಕವನ್ನು ಹೊಂದಿ ಅವರು ಒದಗಿಸುವ ಕಾಗದಪತ್ರಗಳ ಆಧಾರದ ಮೇಲೆ ಜಿಡಿಪಿಯ ಲೆಕ್ಕಾಚಾರ ನಡೆಯುತ್ತದೆ.

ಜಿಡಿಪಿಯನ್ನು ಹೇಳುವ ಸಮೀಕರಣ ಯಾವುದು?
GDP= Consumption + Investment + Government Spending + (Export&Import)ಇದರಲ್ಲಿ Consumption ಅಂದರೆ ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಅವಶ್ಯಕತೆಗೆ ಎಷ್ಟು ಖರ್ಚು ಮಾಡುತ್ತಾನೆ ಎನ್ನುವುದಾಗಿದೆ. ಊಟ, ತಿಂಡಿ, ಮನೆ ಬಳಕೆಯ ವಸ್ತುಗಳು, ಔಷಧಿ, ಬಾಡಿಗೆ ಇವೆಲ್ಲವೂ ಇದರಲ್ಲಿ ಬರುತ್ತದೆ. ಎಷ್ಟು ಹೆಚ್ಚು ಅಧಿಕೃತ ವ್ಯವಹಾರ ನಡೆಯುತ್ತದೆಯೋ ಅಷ್ಟು ಹೆಚ್ಚು ಮಾಹಿತಿ ಕೇಂದ್ರಕ್ಕೆ ತಲುಪುತ್ತದೆ. ಅದು ಜಿಡಿಪಿಯನ್ನು ಲೆಕ್ಕ ಮಾಡಲು ಅನುಕೂಲ.

Investment ಅಥವಾ ಹೂಡಿಕೆಯ ಭಾಗದಲ್ಲಿ ಒಂದು ವ್ಯಕ್ತಿ ಅಥವಾ ಸಂಸ್ಥೆಯ ಹೂಡಿಕೆಯ ಅಂಕಿಅಂಶಗಳು ಸೇರುತ್ತವೆ. ಅವರು ಕೊಡುವ ತೆರಿಗೆಯೇ ಈ ಮೂಲಕ್ಕೆ ಆಧಾರ.

ಆಮದು ಹಾಗೂ ರಫ್ತಿನ ಬಗ್ಗೆ ಹೇಳಬೇಕಿಲ್ಲ. ನಮ್ಮ ದೇಶದ ಜಿಡಿಪಿ ಹೆಚ್ಚಾಗಲು ರಫ್ತು ಹೆಚ್ಚಾಗಬೇಕು, ಆಮದು ಕಡಿಮೆಯಾಗಬೇಕು. ಮೇಲೆ ಹೇಳಿದ ವಿವಿಧ ಮಾನದಂಡಗಳಲ್ಲಿ ಅತ್ಯಧಿಕ ಪರಿಣಾಮ ಬೀರುವುದು ಬೇಡಿಕೆ. ದೇಶಿಯ ಬೇಡಿಕೆ ಹೆಚ್ಚಾದಂತೆ ಜಿಡಿಪಿ ಹೆಚ್ಚಾಗುತ್ತಾ ಹೋಗುತ್ತದೆ, ದೇಶದ ಎಕನಾಮಿ ಕೂಡ!

Advertisement

ಜಿಡಿಪಿ ಯಾಕೆ ಬೇಕು?
ದೇಶದ ಆರ್ಥಿಕತೆಯ ಹೆಲ್ತ… ಚೆಕ್‌ ಅಪ್‌ ಅಂದರೆ ಮೊದಲು ಜಿಡಿಪಿ. ಡಾಕ್ಟರ್‌ ಹತ್ತಿರ ಹೋದಾಗ ಮೊದಲು ನಾಡಿ ನೋಡಿ ಆರೋಗ್ಯದ ಬಗ್ಗೆ ಹೇಳುತ್ತಾರೆ ಅಲ್ಲವೆ? ಹಾಗೆಯೇ ಇದು. ಜಿಡಿಪಿ ಬೆಳವಣಿಗೆ ಪಾಸಿಟಿವ್‌ ಇದೆ ಅಂದರೆ ದೇಶದ ಆರ್ಥಿಕ ಪರಿಸ್ಥಿತಿ ಸುಸ್ಥಿರವಾಗಿದೆ ಎಂದರ್ಥ. ನೆಗೆಟಿವ್‌ ಆದರೆ ಆರ್ಥಿಕತೆಯು ಕುಸಿಯುತ್ತಿದೆ ಎನ್ನುವುದರ ಸೂಚಕ ಅದನ್ನು ರಿಸೆಷನ್‌ ಎನ್ನುತ್ತಾರೆ. ಸತತವಾಗಿ ನೆಗೆಟಿವ್‌ ಬಂದರೆ ರಿಸೆಷನ್‌ನಿಂದ ದೇಶದ ಆರ್ಥಿಕ ಪರಿಸ್ಥಿತಿ ಡಿಪ್ರಶನ್‌ಗೆ ಹೋಗುತ್ತದೆ. 1929ರ ಅಮೇರಿಕಾದ ಗ್ರೇಟ್‌ ಡಿಪ್ರಶನ್‌ ಇದಕ್ಕೆ ಉದಾಹರಣೆ. ಆಗ, ಅಮೇರಿಕಾದ ಕಾಲು ಭಾಗ ಜನರು ಉದ್ಯೋಗ ಕಳೆದುಕೊಂಡಿದ್ದರು. ಹಾಗಿದ್ದರೆ ಜಿಡಿಪಿ ಪಾಸಿಟಿವ್‌ ಆಗಿದ್ದರೆ ಒಳ್ಳೆಯದೇ? ಹೌದು, ಆದರೆ ಒಂದು ರಹಸ್ಯವಿದೆ. ತೀರಾ ಹೆಚ್ಚು ಪಾಸಿಟಿವ್‌ ಆದರೂ ಕಷ್ಟ. ಅದರಿಂದ ಹಣದುಬ್ಬರ ಹೆಚ್ಚುತ್ತದೆ. ಹೀಗಾಗಿ ಜಿಡಿಪಿಯ ಬೆಳವಣಿಗೆಯಲ್ಲಿ ಸಮತೋಲನ ಇರಬೇಕು. ಭಾರತಕ್ಕೆ ಇಂದು ಆರೋಗ್ಯಕರ ಬೆಳವಣಿಗೆ ಅಂದರೆ 8-9%.
ಎಂಟು ದಿಕ್ಕುಗಳಿದ್ದಂತೆ ಆರ್ಥಿಕತೆಯನ್ನು ಸೂಚಿಸಲೂ ಎಂಟು ಮುಖ್ಯ ಅಂಶಗಳಿವೆ.
1. ಕೃಷಿ
2. ಗಣಿಗಾರಿಕೆ
3. ಕೈಗಾರಿಕೆ
4. ಎಲೆಕ್ಟ್ರಿಸಿಟಿ, ಗ್ಯಾಸ್‌ ಪೂರೈಕೆ, ನೀರಿನ ಸರಬರಾಜು, ಇತ್ಯಾದಿ
5. ನಿರ್ಮಾಣ ಕಾರ್ಯ
6. ವ್ಯಾಪಾರ, ಹೋಟೆಲ್‌, ಸಾರಿಗೆ, ಟೆಲಿಕಾಂ, ಇತ್ಯಾದಿ
7. ನಾಗರೀಕ ಸೇವೆ ಹಾಗೂ ಡಿಫೆನ್ಸ… ಸೇವೆ
8. ಹಣಕಾಸಿನ ಸೇವೆಗಳು, ವಿಮೆ, ವೃತ್ತಿಪರ ಸೇವೆಗಳು, ಇತ್ಯಾದಿ

ಜಿಡಿಪಿ ಹೆಚ್ಚಿಸುವುದು ಹೇಗೆ?
ಯಾವುದೇ ದೇಶದ ಆರ್ಥಿಕ ಪರಿಸ್ಥಿತಿ ಎರಡು ವಿಷಯದ ಮೇಲೆ ಅವಲಂಬಿತವಾಗಿರುತ್ತದೆ- ಬೇಡಿಕೆ ಮತ್ತು ಪೂರೈಕೆ. ಬೇಡಿಕೆ ಹೆಚ್ಚಿದಂತೆ ಸರಕಿನ ಬೆಲೆ ಕೂಡಾ ಹೆಚ್ಚುತ್ತದೆ. ಹೆಚ್ಚು ಬೆಲೆಗೆ ಮಾರಿದರೆ ಲಾಭ ಹೆಚ್ಚು, ಹೆಚ್ಚು ಲಾಭ ಗಳಿಸುವ ಉದ್ದೇಶದಿಂದ ಹೆಚ್ಚು ಹೆಚ್ಚು ಸರಕಿನ ಪೂರೈಕೆಯಾಗುತ್ತದೆ. ಬೇಡಿಕೆಗಿಂತ ಪೂರೈಕೆ ಹೆಚ್ಚಾದಾಗ ಬೆಲೆ ಇಳಿಯುತ್ತದೆ. ಬೆಲೆ ಇಳಿದರೆ ಜಿಡಿಪಿ ಬೆಳವಣಿಗೆ ಕುಸಿಯುತ್ತದೆ. ಹೀಗಾಗಿ, ಜಿಡಿಪಿ ಬೆಳವಣಿಗೆ ಹಾಗೂ ಬೇಡಿಕೆ ನೇರ ಸಂಬಂಧ ಹೊಂದಿದೆ. ಹೀಗಾಗಿ ಜಿಡಿಪಿ ಏರಿಕೆಗೆ ಬೇಡಿಕೆ ಹೆಚ್ಚಿಸುವುದೇ ಒಳ್ಳೆಯ ಮದ್ದು. ಅದನ್ನು ಸರಕಾರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೂಡಿಕೆ ಮಾಡುವುದರಿಂದ, ಸಾಧಿಸಬಹುದು. ಆದರೆ ಯಾವತ್ತೂ ಬೇಡಿಕೆ ಹಾಗೂ ಪೂರೈಕೆಯ ಸಮತೋಲನ ಕಾಪಾಡಿಕೊಂಡು ಬರಬೇಕು! ಜಿಡಿಪಿ ಹೆಚ್ಚಿಸುವ ಇನ್ನು ಕೆಲ ಮಾರ್ಗಗಳು ಇಂತಿವೆ-
1. ಸಾಲದ ಬಡ್ಡಿದರ ಇಳಿಸಬೇಕು- ಇದರಿಂದಾಗಿ ಸಾಲ ಪಡೆಯುವವರ ಸಂಖ್ಯೆ ಹೆಚ್ಚುತ್ತದೆ. ಹೂಡಿಕೆ ಹೆಚ್ಚಾಗುತ್ತದೆ
2. ಅದಾಯದ ಹೆಚ್ಚಳ- ಇದರಿಂದ ವೆಚ್ಚವೂ ಹೆಚ್ಚುತ್ತದೆ
3. ಆಸ್ತಿಯ ಬೆಲೆ ಹೆಚ್ಚಿಸುವುದು
4. ಅಪಮೌಲಿÂàಕರಣ- ರಫ್ತಿನ ಬೆಲೆ ಕಡಿಮೆ ಮಾಡಿ, ಆಮದಿನ ಬೆಲೆ ಹೆಚ್ಚು ಮಾಡುವುದು. ಇದರಿಂದಾಗಿ ದೇಶಿಯ ಬೇಡಿಕೆ ಹೆಚ್ಚುತ್ತದೆ.

ಜಿಡಿಪಿ ವೈಪರೀತ್ಯದಿಂದ ಏನಾಗುತ್ತೆ?
ಜಿಡಿಪಿಯು ಜನರ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. 2018-19ರಲ್ಲಿ ಜನರ ತಿಂಗಳ ತಲಾ ಆದಾಯ 10,534 ಇತ್ತು. ಜಿಡಿಪಿ ಬೆಳವಣಿಗೆ 5% ಹೆಚ್ಚಿದೆ ಅಂದರೆ ತಲಾ ಆದಾಯ 500 ರೂಪಾಯಿ ಹೆಚ್ಚಾಗಿದೆ ಎಂದರ್ಥ. ಆದರೆ ಅಂದಾಜಿನ ಪ್ರಕಾರ ಜಿಡಿಪಿ ಬೆಳವಣಿಗೆ 7.2% ಏರಬೇಕಿತ್ತು. ಹೀಗಾಗಿ ತಲಾ ಆದಾಯದ ಮೇಲೆ ತಿಂಗಳಿಗೆ 200 ರೂಪಾಯಿಗಳ ನಷ್ಟ. ವರ್ಷಕ್ಕೆ 2400 ರೂಪಾಯಿ ನಷ್ಟವಾಗಿದೆ. ಇದು ನಿಮ್ಮ ಅನುಭವಕ್ಕೆ ಬರಲಿಲ್ಲ ಅಂದರೆ, ಅದಕ್ಕೆ ಕಾರಣವೇ ಬೇರೆ. ಮತ್ತೆ ಜಿಡಿಪಿ ಕುಸಿಯುತ್ತಾ ಹೋದರೆ ಕೋಟಿಗಟ್ಟಲೆ ಜನರು ಉದ್ಯೋಗ ಕಳೆದುಕೊಳ್ಳಬಹುದು. ಹೀಗೆ ಆದಾಗ, ಬಡತನದ ರೇಖೆಗಿಂತ ಕೆಳಗೆ ಹೋಗುವವರ ಸಂಖ್ಯೆ ಹೆಚ್ಚುತ್ತದೆ. ವಿದೇಶಿ ಬಂಡವಾಳ ಕಡಿಮೆ ಆಗುತ್ತದೆ, ಖಾಸಗಿ ಕಂಪನಿಗಳು ಹೂಡಿಕೆ ಮಾಡುವಾಗ ಯೋಚಿಸುತ್ತವೆ.

ರಾಮನು ಅಂಗಡಿಗೆ ಹೋದ
ಉದಾಹರಣೆಗೆ, ರಾಮನಿಗೆ ಸರಕಾರದಿಂದ ಆದಾಯದ ರೂಪದಲ್ಲಿ 500 ರೂಪಾಯಿ ಸಿಕ್ಕಿತು ಅಂದುಕೊಳ್ಳೋಣ. ಆ 500 ರೂಪಾಯಿಯನ್ನು ಆತ ಬ್ಯಾಂಕಿನಲ್ಲಿ ಇಡಬಹುದು ಅಥವಾ ಪಕ್ಕದ ರಸ್ತೆಯ ಟೈಲರ್‌ ಹತ್ತಿರ ಹೋಗಿ ಹೊಸ ಶರ್ಟ್‌ ಹಾಗೂ ಪ್ಯಾಂಟ್‌ ಹೊಲಿಸಿಕೊಳ್ಳಬಹುದು. ರಾಮ ಬ್ಯಾಂಕ್‌ನಲ್ಲಿ ಇಡದೆ ಟೈಲರ್‌ ಬಳಿ ಹೋಗಿ, 500 ರೂಪಾಯಿ ಕೊಟ್ಟು ಶರ್ಟ್‌ ಹಾಗೂ ಪ್ಯಾಂಟ್‌ ಹೊಲಿಸುತ್ತಾನೆ. ಆ ಟೈಲರ್‌ ತನಗೆ ಸಿಕ್ಕ 500 ರೂಪಾಯಿಯಿಂದ ಮಗನಿಗೆ ಶೂ ಖರೀದಿಸಿದ. ಶೂ ಅಂಗಡಿಯವ ಆ ಹಣದಿಂದ ತನ್ನ ಪರಿವಾರದ ಜೊತೆ ಸಿನೇಮಾ ನೋಡಿದ. ಸಿನೆಮಾ ಮಂದಿರದ ಮಾಲೀಕ ಆ 500 ರೂಪಾಯಿ ಕೊಟ್ಟು ಮನೆಗೆ ಬೇಕಾದ ಸಾಮಾನು ಕೊಂಡ, ಕಿರಾಣಿ ಅಂಗಡಿಯವನು ತನಗೆ ಸಿಕ್ಕ ಐನೂರು ರೂಪಾಯಿಯಲ್ಲಿ ಮೊಬೈಲ್‌ ರೀಚಾರ್ಜ್‌ ಮಾಡಿಸಿದ. ಹೀಗೆ ಆ ಐನೂರು ರೂಪಾಯಿ ಆರು ಸಲ ಚಲಾವಣೆಯಾಯಿತು. ಅಂದರೆ, ಒಟ್ಟೂ ಚಲಾವಣೆಯಾದ ಹಣ 3000 ರೂಪಾಯಿಗಳು. ಮೊದಲ 500 ರೂಪಾಯಿ, 3000 ರೂಪಾಯಿಗಳ ಆರ್ಥಿಕ ಚಟುವಟಿಗೆ ಮಾಡಿತು. ಇದರಿಂದಾಗಿ ದೇಶದ ಜಿಡಿಪಿಗೆ 3000 ಸೇರಿತು. ಒಂದು ವೇಳೆ, ರಾಮ 500 ರೂಪಾಯಿಯನ್ನು ಬ್ಯಾಂಕಿನಲ್ಲಿ ಇಟ್ಟಿದ್ದರೆ ದೇಶದ ಜಿಡಿಪಿಗೆ 500 ಮಾತ್ರೆ ಸೇರುತ್ತಿತ್ತು, 3000 ಅಲ್ಲ! ಜಿಡಿಪಿಯು ದೇಶದಲ್ಲಿ ಹಣದ ಸಂಚಲನದ ಬಗ್ಗೆ ಮಾಹಿತಿ ನೀಡುತ್ತದೆ. ನಿಖರವಾಗಿ ಅಲ್ಲದೇ ಹೋದರೂ ಅಜಮಾಸು ದೇಶದ ಹಣಕಾಸಿನ ವ್ಯವಸ್ಥೆ ಹೇಗಿದೆ ಎನ್ನುವುದಂತೂ ಗೊತ್ತಾಗುತ್ತದೆ.

– ವಿಕ್ರಮ್‌ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next