Advertisement

ಜಿಗಿದ ಜಿಡಿಪಿ ಪ್ರಮಾಣ ಶೇ13.5: ಕೇಂದ್ರ ಸರ್ಕಾರದ ದತ್ತಾಂಶಗಳಲ್ಲಿ ಉಲ್ಲೇಖ

09:28 PM Sep 01, 2022 | Team Udayavani |

ನವದೆಹಲಿ: ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕದಲ್ಲಿ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಶೇ.13.5ಕ್ಕೆ ಏರಿಕೆಯಾಗಿದೆ. ಕಳೆದ ವಿತ್ತೀಯ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ, ಇದು ಗರಿಷ್ಠ ಪ್ರಮಾಣದ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಸೇವಾ ಕ್ಷೇತ್ರದಲ್ಲಿ ಉಂಟಾಗಿರುವ ವಿಸ್ತರಣೆ, ದೇಶೀಯ ಕ್ಷೇತ್ರದಲ್ಲಿ ವಿವಿಧ ಸೇವೆಗಳಿಗೆ ಬೇಡಿಕೆ ಹೆಚ್ಚಾಗಿರುವುದಿಂದ ಈ ಬೆಳವಣಿಗೆ ಉಂಟಾಗಿದೆ.

Advertisement

ಜಗತ್ತಿನ ವಿತ್ತೀಯ ವ್ಯವಸ್ಥೆಗೆ ಹಿಂಜರಿಕೆ ಕಾಡಬಹುದು ಎಂಬ ಭೀತಿಯ ನಡುವೆಯೇ ಇದೊಂದು ಧನಾತ್ಮಕ ಬೆಳವಣಿಗೆಯಾಗಿದೆ. ಜತೆಗೆ ಕಳೆದ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಇದು ಒಂದು ವರ್ಷದ ಅವಧಿಯ ಗರಿಷ್ಠ ಏರಿಕೆಯಾಗಿದೆ.  ಆದರೆ, ಆರ್‌ಬಿಐ ನಿರೀಕ್ಷೆ ಮಾಡಿದ್ದಕ್ಕಿಂತ ಶೇ.2.7 ಕಡಿಮೆಯಾಗಿದೆ. ಜಿಡಿಪಿ ಪ್ರಮಾಣ ಶೇ.16.2ಕ್ಕೆ ಏರಿಕೆಯಾಗಲಿದೆ ಎಂದು ಆರ್‌ಬಿಐ ನಿರೀಕ್ಷೆ ಮಾಡಿತ್ತು.

2020-21ನೇ ವಿತ್ತೀಯ ವರ್ಷದಲ್ಲಿ  ಕೊರೊನಾ ಸೋಂಕು ತಡೆಗೆ ವಿಧಿಸಿದ್ದ ಹಲವು ಪ್ರತಿಬಂಧಕ ಕ್ರಮಗಳಿಂದಾಗಿ ಅರ್ಥ ವ್ಯವಸ್ಥೆ ಶೇ.23.9ರಷ್ಟು ಕುಸಿತ ಕಂಡಿತ್ತು.

ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದ್ದರಿಂದ ಜಗತ್ತಿನ ವ್ಯವಸ್ಥೆಯ ಮೇಲೆ ಹಲವು ರೀತಿಯಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಿದೆ. ಅಮೆರಿಕ ಕೂಡ 40 ವರ್ಷಗಳಲ್ಲಿಯೇ ಅತ್ಯಧಿಕ ಪ್ರಮಾಣದ ಹಣದುಬ್ಬರ ಏರಿಕೆಯನ್ನು ಅನುಭವಿಸುತ್ತಿದೆ. ಕೊರೊನಾ ಕಾರಣದಿಂದ ಚೀನಾದ ಅರ್ಥವ್ಯವಸ್ಥೆ ಇಳಿಮುಖವಾಗಿದೆ. ಏಪ್ರಿಲ್‌-ಜೂನ್‌ ಅವಧಿಯಲ್ಲಿ ಆ ದೇಶದ ಅರ್ಥ ವ್ಯವಸ್ಥೆ ಶೇ.0.4ರಷ್ಟು ಬೆಳವವಣಿಗೆ ಸಾಧಿಸಿತ್ತು.

ನಿರುದ್ಯೋಗ ಪ್ರಮಾಣ ಇಳಿಕೆ:

Advertisement

ಪ್ರಸಕ್ತ ವಿತ್ತೀಯ ವ್ಯವಸ್ಥೆಯ ಮೊದಲ ತ್ತೈಮಾಸಿಕ ಅವಧಿಯಲ್ಲಿ ನಗರ ಪ್ರದೇಶದ ನಿರುದ್ಯೋಗ ಪ್ರಮಾಣ ಶೇ.12.6ರಿಂದ ಶೇ.7.6ಕ್ಕೆ ಇಳಿಕೆಯಾಗಿದೆ. ಈ ಬಗ್ಗೆ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (ಎನ್‌ಎಸ್‌ಎಸ್‌ಒ) ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಹೀಗಾಗಿ, ದೇಶದಲ್ಲಿ ಉದ್ಯೋಗಗಗಳು ಮತ್ತು ಅದಕ್ಕೆ ಬೇಕಾಗಿರುವ ಮಾನವ ಸಂಪನ್ಮೂಲ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ವರ್ಷದ ಜನವರಿಯಿಂದ ಮಾರ್ಚ್‌ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಶೇ.8.2 ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next