ಬೆಂಗಳೂರು: ದೇಶದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, 2025ರ ವೇಳೆಗೆ ಈ ಕ್ಷೇತ್ರದ ಜಿಡಿಪಿ ಬೆಳವಣಿಗೆ ದರ ಶೇ.25ರವರೆಗೆ ಏರಿಕೆಯಾಗುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದರು.
ನಗರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಐಎಂಎಸ್ ಪ್ರತಿಷ್ಠಾನವು ಹಮ್ಮಿಕೊಂಡಿದ್ದ ಭಾರತೀಯ ಉತ್ಪಾದನಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡವರು ಸಂಶೋಧನೆ, ಗುಣಮಟ್ಟ ಹಾಗೂ ಸ್ಪರ್ಧಾತ್ಮಕತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕು.
ಆಗಮಾತ್ರ ಜಾಗತಿಕ ಮಟ್ಟದಲ್ಲಿ ದೇಶೀಯ ಉತ್ಪನ್ನಗಳೂ ಬೇಡಿಕೆ ಗಳಿಸಲು ಸಾಧ್ಯವಾಗಲಿದೆ ಎಂದರು. ನೋಟು ಅಮಾನ್ಯ, ಜಿಎಸ್‌ಟಿ ತೆರಿಗೆ ಪದ್ಧತಿಯಿಂದಾಗಿ ಆರ್ಥಿಕ ವಹಿವಾಟು ಪಾರದರ್ಶಕವಾಗಿದೆ. ಜತೆಗೆ ಉದ್ಯಮಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಅನಗತ್ಯ ಕಿರಿಕುಳವೂ ತಪ್ಪಲಿದ್ದು, ವ್ಯವಸ್ಥೆಯೂ ಸುಧಾರಿಸಲಿದೆ ಎಂದು ತಿಳಿಸಿದರು.
ಇಂಡಿಯನ್ ಮಿಷನ್ ಟೂಲ್ ಮ್ಯಾನುಫ್ಯಾಕ್ಚರ್ ಅಸೋಸಿಯೇಷನ್‌ನ ಅಧ್ಯಕ್ಷ ಪಿ.ರಾಮದಾಸ್ ಮಾತನಾಡಿ, “ಮುಂದಿನ ಒಂದು ದಶಕದಲ್ಲಿ ಉತ್ಪಾದನಾ ವಲಯ ಭಾರಿ ಪ್ರಮಾಣದಲ್ಲಿ ಪ್ರಗತಿ ಸಾಧಿಸುವ ನಿರೀಕ್ಷೆ ಇದೆ. ಆ ಮೂಲಕ ದೇಶ ಸ್ವಾವಲಂಬನೆ ಸಾಧಿಸಿ ಆರ್ಥಿಕ ಪ್ರಗತಿಗೆ ವೇಗ ಮುಟ್ಟಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಭಾರತೀಯ ಸ್ಟೇಟ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಫಾರುಕ್ ಶಹಾಬ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅಗತ್ಯವಿರುವ ಮೂಲ ಸೌಕರ್ಯವನ್ನು ಸರ್ಕಾರ ಒದಗಿಸಬೇಕು ಎಂದರು.