ಬೆಂಗಳೂರು: ಆರೋಗ್ಯ ಕ್ಷೇತ್ರದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಹಂಚಿಕೆ ಪ್ರಮಾಣವನ್ನು ಶೇ.1.2 ರಿಂದ ಶೇ.2.5ಕ್ಕೆ ಏರಿಸಲಾಗು ವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 23ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದ ಅವರು, ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರಕ್ಕೆ ವ್ಯಯಿಸುತ್ತಿರುವ ವೆಚ್ಚ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ತೀರ್ಮಾನಿಸಿದೆ. ಹೀಗಾಗಿ ಜಿಡಿಪಿ ಹಂಚಿಕೆಯ ಪ್ರಮಾಣದಲ್ಲೂ ಏರಿಸಲಿದೆ ಎಂದು ವಿವರಿಸಿದರು.
ಕೇಂದ್ರ ಪೊಲೀಸ್ ಸೇವೆ ಮತ್ತು ಪ್ಯಾರಾ ಮಿಲಿಟರಿ ಸೇವೆಯಲ್ಲಿ ಒತ್ತಡವಿಲ್ಲದೆ ಕಾರ್ಯ ನಿರ್ವಹಿಸಲು ಬೇಕಾದ ತರಬೇತಿ ಅಥವಾ ಕಾರ್ಯಕ್ರಮ ನಿಮ್ಹಾನ್ಸ್ ಮೂಲಕ ನೀಡುವಂತಾಗಬೇಕು. ಇದರಿಂದ ಪೊಲೀಸ್, ಪ್ಯಾರಾ ಮಿಲಿಟರಿ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಯಾವುದೇ ಸಂದರ್ಭದಲ್ಲೂ ಮಾನಸಿಕ ಒತ್ತಡಕ್ಕೆ ಒಳಗಾಗದೆ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ. ತಮಿಳುನಾಡಿನ ಪೊಲೀಸರ, ಅವರ ಕುಟುಂಬದವರ ಮಾನಸಿಕ ಒತ್ತಡ ನಿವಾರಣೆಯ ನಿಟ್ಟಿನಲ್ಲಿ ನಿಮ್ಹಾನ್ಸ್ ಕೈಗೆತ್ತಿಕೊಂಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಇದೇ ಸೇವೆ, ಕೇಂದ್ರ ಪೊಲೀಸ್ ಪಡೆ ಹಾಗೂ ಪ್ಯಾರಾ ಮಿಲಿಟರಿ ಪಡೆಗೂ ಸಿಗುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಡಿಜಿಟಲ್ ಅಕಾಡೆಮಿ
ನಿಮ್ಹಾನ್ಸ್ ಸಂಸ್ಥೆ ಈಗಾಗಲೇ ಡಿಜಿಟಲ್ ಅಕಾಡೆಮಿ ಆರಂಭಿ ಸಿದ್ದು, 2 ಸಾವಿರ ಪ್ರಾಧ್ಯಾಪಕರು ನೋಂದಣಿ ಮಾಡಿಕೊಂಡಿದ್ದಾರೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ನಿಮ್ಹಾನ್ಸ್ ಆದಷ್ಟು ಬೇಗ ಪೇಪರ್‌ಲೆಸ್ ಸಂಸ್ಥೆಯಾಗಿ ಹೊರಹೊಮ್ಮಬೇಕು ಮತ್ತು ದೇಶಕ್ಕೆ ಮಾದರಿಯಾಗಿರಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.