ಮೈಸೂರು: ಕೇಂದ್ರ ಸರ್ಕಾರದ ನೋಟು ಅಮಾನ್ಯಿಕರಣದಿಂದಾಗಿ ದೇಶದ ಜಿಡಿಪಿ ಗಣನೀಯ ಕುಸಿತ ಕಂಡಿದ್ದು, ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಕಿಡಿಕಾರಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ 6.7 ರಷ್ಟಿದ್ದ ದೇಶದ ಜಿಡಿಪಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 8ಕ್ಕೆ ಏರಿಕೆಯಾಗಿದೆ ಎನ್ನಲಾಗುತ್ತಿದೆ.
ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ 8.5ರಷ್ಟಿದ್ದ ಜಿಡಿಪಿ ಬಿಜೆಪಿ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುವ ಸಂದರ್ಭದಲ್ಲಿ 10.9ಕ್ಕೆ ಏರಿಕೆಯಾಗಿತ್ತು ಎಂದರು. ಆದರೆ ಪ್ರಧಾನಿ ನರೇಂದ್ರ ಮೋದಿ ನೋಟ್‌ಬ್ಯಾನ್ ನಿರ್ಧಾರದ ಬಳಿಕ ದೇಶದ ಜಿಡಿಪಿ ದರ ಗಣನೀಯವಾಗಿ ಇಳಿಕೆಯಾಗಿದ್ದು, ಇದರೊಂದಿಗೆ ದೇಶದ ಆರ್ಥಿಕ ಸ್ಥಿತಿಯೂ ಹದಹೆಟ್ಟಿದೆ. ಇದೇ ಕಾರಣದಿಂದಲೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೋಟ್‌ಬ್ಯಾನ್‌ನಿಂದ ದೇಶದ ಜಿಡಿಪಿ ಕುಸಿಯಲಿದೆ ಎಂದು ಹೇಳಿದ್ದರು.
ಹೀಗಿದ್ದರೂ ಪ್ರಧಾನಿ ಮೋದಿ ಈ ಬಗ್ಗೆ ಯಾವುದೇ ಗಮನವಹಿಸದ ಕಾರಣ ದೇಶದ ಜಿಡಿಪಿ ಕುಸಿತಗೊಂಡಿದೆ ಎಂದು ತಿಳಿಸಿದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ವೇಳೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ಪ್ರಸ್ತುತ ಇರುವ ಉದ್ಯೋಗಗಳನ್ನೇ ಉಳಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ.
ಅಂಬಾನಿ ಟಿಲಿಕಾಂನಲ್ಲಿ ಲಕ್ಷಾಂತರ ಉದ್ಯೋಗ ಕಡಿತಗೊಳ್ಳುವ ಸಾಧ್ಯತೆ ಇದೆ. ಇದರ ಜತೆಗೆ ಐಟಿ ಸೆಕ್ಟರ್‌ನಲ್ಲೂ ಸಾಕಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಸಣ್ಣ ಉದ್ಯಮ ಹಾಗೂ ವ್ಯಾಪಾರ ವಹಿವಾಟಿನಲ್ಲೂ ಕುಸಿತ ಕಾಣುತ್ತಿದೆ. ಇದರ ಪರಿಣಾಮ ಈ ಹಿಂದೆ ವಿಶ್ವದ ಬೃಹತ್ ಆರ್ಥಿಕತೆ ಹೊಂದಿದ ರಾಷ್ಟ್ರಗಳಲ್ಲಿ 4ನೇ ಸ್ಥಾನದಲ್ಲಿದ್ದ ಭಾರತ ಇಂದು ತನ್ನ ಸ್ಥಾನ ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.
ಬಿಎಸ್‌ವೈ ವಿಪಕ್ಷ ನಾಯಕ: ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಷ್ಟು ದಿನಗಳವರೆಗೂ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುತ್ತಿದ್ದರು. ಆದರೆ ಕಳೆದ ನಂಜನಗೂಡು, ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ ನೋಡಿದ ಬಳಿಕ ತಮ್ಮ ಗುರಿ ಬದಲಿಸಿದ್ದು, ಹೈಕಮಾಂಡ್ ವಾಸ್ತವಕ್ಕೆ ಹತ್ತಿರವಾದ ಗುರಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದರಿಂದ ಮಿಷನ್-150 ಬದಲಿಗೆ ಮಿಷನ್-50 ಗುರಿ ಹೊಂದಿದ್ದಾರೆ. ಆದರೆ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಮಾಜಿ ಸಿಎಂ ಯಡಿಯೂರಪ್ಪವಿರೋಧ ಪಕ್ಷದ ನಾಯಕರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಲೇವಡಿ ಮಾಡಿದರು.
ದಲಿತರ ಮೇಲೆ ಪ್ರೇಮ: ಬಿಜೆಪಿಗೆ ಇತ್ತೀಚೆಗೆ ದಲಿತರ ಮೇಲೆ ಪ್ರೀತಿ ಹೆಚ್ಚಾಗುತ್ತಿದ್ದು, ದಲಿತರ ಮನೆಗೆ ತೆರಳಿ ಹೋಟೆಲ್‌ನಿಂದ ತರಿಸಿದ ಆಹಾರವನ್ನು ಸೇವಿಸುವ ಬಿಜೆಪಿ ನಾಯಕರು ಆ ಮೂಲಕ ದಲಿತರಿಗೆ ಅವಮಾನ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ದಲಿತರ ಮೇಲೆ ಪ್ರೀತಿ ಇರುವಂತೆ ನಾಟಕವಾಡುತ್ತಿದ್ದು, ಕೇಂದ್ರದ ಬಜೆಟ್‌ನಲ್ಲಿ ದಲಿತರಿಗೆ ಶೇ.50 ಅನುದಾನ ಕಡಿತಗೊಳಿಸಿದೆ. ಹೀಗಾಗಿ ದಲಿತರ ಬಗ್ಗೆ ಮಾತನಾಡಲು ಬಿಜೆಪಿ ನಾಯಕರಿಗೆ ಯಾವುದೇ ಹಕ್ಕಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ಬಸವರಾಜ್ ನಾಯಕ್, ದಿಲೀಪ್ ರಾಜ್ ಇನ್ನಿತರರು ಹಾಜರಿದ್ದರು.
ಬಿಜೆಪಿಗೆ ಗೆಲ್ಲುವ ಶಕ್ತಿಯಿಲ್ಲ: ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿ ಚುನಾವಣೆಯಲ್ಲಿ ಗೆಲ್ಲುವ ತಂತ್ರ, ಶಕ್ತಿ ಕಳೆದುಕೊಂಡಿದೆ. ಮತದಾರ ಕೇವಲ ಒಂದು ಬಾರಿ ಬಿಜೆಪಿ ಅವರ ತಂತ್ರಗಳಿಗೆ ಮರುಳಾಗಲಿದ್ದು, ಹೀಗಾಗಿ ಪ್ರತಿಬಾರಿಯೂ ಒಂದೇ ತಂತ್ರ ಪಲಿಸುವುದಿಲ್ಲ. ವಿಶ್ವದ ಯಾವುದೋ ದೇಶದಲ್ಲಿ ಬಾಂಬ್ ದಾಳಿ ನಡೆದ ಸಂದರ್ಭದಲ್ಲಿ ಟ್ವಿಟ್ ಮಾಡುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ದೇಶದ ರೈತರು ಸಾವನ್ನಪ್ಪಿದಾಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅಲ್ಲದೆ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸದೆ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.