Advertisement

ದೇವರನಾಡಿನ ರೋಡಿಗೆ ಗಾಜಾ ಸ್ಟ್ರೀಟ್‌ ನಾಮಕರಣ!

10:15 AM Jun 20, 2017 | Team Udayavani |

ತಿರುವನಂತಪುರ: ಕಾಸರಗೋಡು ಪುರಸಭೆಯ ತುರುತಿ ವಾರ್ಡಿನಲ್ಲಿರುವ ರಸ್ತೆಯೊಂದು ಈಗ ದೇಶದ ಗಮನ ಸೆಳೆದಿದೆ. ಇದಕ್ಕೆ ಕಾರಣ, ಈ ರಸ್ತೆಗೆ ಇತ್ತೀಚೆಗೆ “ಗಾಜಾ’ ಎಂದು ಮರು ನಾಮಕರಣ ಮಾಡಿರುವುದು. ಗಾಜಾ ಇಸ್ರೇಲ್‌ ಮತ್ತು ಈಜಿಪ್ಟ್ ನಡುವಿರುವ ಪ್ಯಾಲೆಸ್ತೀನ್‌ ಆಡಳಿತಕ್ಕೊಳಪಟ್ಟ ನಗರವಾಗಿದ್ದು, ಮೂರು ದೇಶಗಳ ನಡುವಿನ ವಿವಾದದ ಕೇಂದ್ರವಾಗಿದೆ. ಹೀಗಾಗಿ ಈ ಹೆಸರು ಎನ್‌ಐಎ ಮತ್ತು ಗುಪ್ತಚರ ಪಡೆಯ ಗಮನ ಸೆಳೆದಿದೆ.

Advertisement

ಐಸಿಸ್‌ ಉಗ್ರ ಸಂಘಟನೆಗೆ ಸೇರಿದ 21 ಮಂದಿಯ ಊರಾಗಿರುವ ಪಡನ್ನದ ಪಕ್ಕದಲ್ಲೇ ಇದೆ ತುರುತಿ. ಹೀಗಾಗಿ ರಸ್ತೆಯ ಹೆಸರು ಬದಲಾವಣೆಯ ಹಿಂದೆ ಮತಾಂಧ ಶಕ್ತಿಗಳ ಪಿತೂರಿ ಇರುವ ಅನುಮಾನ ಹುಟ್ಟಿಕೊಂಡಿದೆ. ತುರುತಿ ಜುಮಾ ಮಸೀದಿಗೆ ಹೋಗುವ ರಸ್ತೆಗೆ ಕಳೆದ ತಿಂಗಳು ಗಾಜಾ ಎಂದು ಹೆಸರಿಡಲಾಗಿದೆ ಹಾಗೂ ಜಿಲ್ಲಾ ಪಂಚಾಯತ್‌ ಅಧ್ಯಕ್ಷ
ಎಜಿಸಿ ಬಶೀರ್‌ ಅವರೇ ನಾಮಫ‌ಲಕವನ್ನು ಅನಾವರಣಗೊಳಿಸಿದ್ದಾರೆ ಎನ್ನುತ್ತಿವೆ ವರದಿಗಳು. ರಸ್ತೆ ನಾಮಫ‌ಲಕವನ್ನು ತಾವೇ ಅನಾವರಣ ಗೊಳಿಸಿರುವುದನ್ನು ಸ್ವತಃ ಬಶೀರ್‌ ಒಪ್ಪಿಕೊಂಡಿದ್ದಾರೆ.

ನಿಜವಾಗಿಯೂ, ನಾನು ಅನಾವರಣಗೊಳಿಸುವ ಅತಿಥಿಯಾಗಿರಲಿಲ್ಲ. ಆದರೆ ಕೊನೇ ಕ್ಷಣದಲ್ಲಿ ನನಗೆ ಆಹ್ವಾನ ಬಂದ ಕಾರಣ ಹೋಗಿದ್ದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಆಕ್ಷೇಪ: ರಸ್ತೆಗೆ ಗಾಜಾ ಎಂದು ಹೆಸರಿಟ್ಟಿರುವುದನ್ನು ಬಲವಾಗಿ ಆಕ್ಷೇಪಿಸಿರುವ ಬಿಜೆಪಿ, ಕಾಸರಗೋಡಿನ ವಿವಿಧ ಪ್ರದೇಶಗಳ ಹೆಸರನ್ನು ಬದಲಾಯಿಸುವ ಉದ್ದೇಶ ಪೂರ್ವಕ ಪ್ರಯತ್ನಗಳಾಗುತ್ತಿವೆ ಎಂದು ಆರೋಪಿಸಿದೆ.
ಪುರಸಭೆಯಲ್ಲಿ ಚರ್ಚೆಯಾಗಿ ಅಂಗೀಕಾರಗೊಳ್ಳದೆ ರಸ್ತೆ ಅಥವಾ ಬಡಾವಣೆಯ ಹೆಸರು ಬದಲಾಯಿಸುವಂತಿಲ್ಲ.
ಆದರೆ ಗಾಜಾ ಹೆಸರಿನ ಕುರಿತು ಯಾವುದೇ ಚರ್ಚೆಯಾಗಿಲ್ಲ. ಕೆಲವೊಮ್ಮೆ ಪುರಸಭೆಯಲ್ಲಿ ತಿರಸ್ಕೃತವಾಗುವ ಭೀತಿಯಲ್ಲಿ ವಿವಾದಾತ್ಮಕ ಹೆಸರುಗಳ ಪ್ರಸ್ತಾವ ಮಂಡಿಸದೆ ಹಾಗೆಯೇ ಇಟ್ಟು ಬಿಡುತ್ತಾರೆ ಎಂದು ಪುರಸಭೆಯ ವಿಪಕ್ಷ ನಾಯಕ ಪಿ. ರಮೇಶ್‌ ಹೇಳಿದ್ದಾರೆ. ಆದರೆ, ಮುಸ್ಲಿಂ ಲೀಗ್‌ ನಾಯಕರು, “ಇದು ಸ್ಥಳೀಯ ಯುವಕರು ಇಟ್ಟಿರುವ ಹೆಸರು. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ’ ಎನ್ನುವ ಮೂಲಕ ವಿವಾದದಿಂದ ಕೈತೊಳೆಯುವ ಪ್ರಯತ್ನ
ಮಾಡಿದ್ದಾರೆ.

ಐಸಿಸ್‌ ಉಗ್ರ ಸಂಘಟನೆಯು ಕಾಸರಗೋಡಿನಲ್ಲಿ ತಳವೂರುವ ಪ್ರಯತ್ನದಲ್ಲಿದ್ದು, ಮತೀಯ ಸೌಹಾರ್ದ ಕದಡುತ್ತಿದೆ. ಮತೀಯವಾದಿಗಳು ಸಮಾಜದಲ್ಲಿ ಒಡಕುಂಟು ಮಾಡುವ ಪ್ರಯತ್ನದಲ್ಲಿದ್ದಾರೆ. ಇದೇ ವೇಳೆ, ಕಾಸರಗೋಡಿನ ಪೊಲೀಸ್‌ ಅಧಿಕಾರಿಯೊಬ್ಬರು ಗಾಜಾ ಹೆಸರು ನಮ್ಮ ಗಮನಕ್ಕೆ ಬರದಿದ್ದರೂ ಕೇಂದ್ರೀಯ ಪಡೆಗಳು ಪತ್ತೆ ಹಚ್ಚಿವೆ ಎಂದಿದ್ದಾರೆ.

Advertisement

ಎಲ್ಲಿದೆ ತುರುತಿ?
ಕಾಸರಗೋಡು ನಗರ ಕೇಂದ್ರದಿಂದ ಸುಮಾರು 2.5 ಕಿ. ಮೀ. ದೂರದಲ್ಲಿದೆ ತುರುತಿ ವಾರ್ಡ್‌. ಅಣಂಗೂರಿನಿಂದ
ಬಲಕ್ಕೆ ತಿರುಗಿ ಹೋಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next