Advertisement

Lok Sabha Election: ಮಹಿಳಾ ಸಬಲೀಕರಣದ ಕನಸು ನನಸಾಗಿಸಿ: ಗಾಯತ್ರಿ ಸಿದ್ದೇಶ್ವರ

09:53 AM Apr 01, 2024 | Team Udayavani |

ಜಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಾರಿ ಶಕ್ತಿಗೆ ಮನ್ನಣೆ ನೀಡಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ ಮಹಿಳೆಗೆ ಟಿಕೆಟ್‌
ನೀಡಿದ್ದಾರೆ. ಮಹಿಳೆಯರ ಶಕ್ತಿ ತೋರ್ಪಡಿಸಬೇಕಾದರೆ ಬಿಜೆಪಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮನವಿ ಮಾಡಿದರು.
ತಾಲೂಕಿನ ಅಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಮುತ್ತೇನಹಳ್ಳಿ ಗ್ರಾಮದಲ್ಲಿ ಭಾನುವಾರ ಚುನಾವಣಾ ಪ್ರಚಾರ ಕೈಗೊಂಡು ಅವರು
ಮಾತನಾಡಿದರು.

Advertisement

ಮಹಿಳಾ ಸಬಲಿಕರಣವಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿಯವರು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.
ಉಜ್ವಲ್‌ ಯೋಜನೆಯಡಿ ಉಚಿತವಾಗಿ ಗ್ಯಾಸ್‌ ನೀಡಿ ಮಹಿಳೆಯರು ಕಟ್ಟಿಗೆ ಒಲೆ ಬಳಕೆಯಿಂದ ಶ್ವಾಸಕೋಶದ ಸಮಸ್ಯೆಗೆ ತುತ್ತಾಗುವುದನ್ನು ತಪ್ಪಿಸಿದ್ದಾರೆ. ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣುಮಕ್ಕಳಿಗೆ ಸಂಜೀವಿನಿಯಂತಿದೆ. ಪಿಎಂ ಕಿಸಾನ್‌ ಯೋಜನೆಯಡಿ ಕೇಂದ್ರ ಸರ್ಕಾರ ಒಂದು ವರ್ಷಕ್ಕೆ ಒಬ್ಬ ರೈತನಿಗೆ 6000 ರೂ. ನೀಡುತ್ತಿದೆ. ಆದರೆ ರಾಜ್ಯ ಸರ್ಕಾರ ನೀಡುತ್ತಿದ್ದ 4000 ರೂ. ನಿಲ್ಲಿಸಿದೆ ಎಂದು ದೂರಿದರು.

ಮಾಜಿ ಶಾಸಕ ಎಚ್‌.ಪಿ. ರಾಜೇಶ್‌ ಮಾತನಾಡಿ, ನಾನು ಹಾಗೂ ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ ಜೋಡೆತ್ತುಗಳಂತೆ ಕೆಲಸ ಮಾಡುತ್ತೇವೆ. ನಾವು
ಶಾಸಕರಾಗಿದ್ದಾಗ ಈ ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನುಒದಗಿಸಿದ್ದೇವೆ. ಸಿದ್ದೇಶಣ್ಣ ನಾಲ್ಕು ಬಾರಿ ಸಂಸದರಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.

ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ ಮಾತನಾಡಿ, ಸಂಸದರು ಹಲವಾರು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಭದ್ರಾ ಮೇಲ್ದಂಡೆ
ಯೋಜನೆ ಮತ್ತು 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿದ್ದಾರೆ.

Advertisement

ಪ್ರಧಾನಮಂತ್ರಿ ಮೋದಿಯವರು ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರುವ ಗುರಿ ಇರಿಸಿಕೊಂಡಿದ್ದಾರೆ. ಅದಕ್ಕಾಗಿ ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಿ ಮೋದಿಯವರ ಕೈ ಬಲಪಡಿಸಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ. ನಾಗಪ್ಪ, ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್‌, ಜಿಪಂ ಮಾಜಿ ಸದಸ್ಯರಾದ ಸವಿತಾ, ಶಾಂತಕುಮಾರಿ,
ಮಂಜುನಾಥ್‌, ತಾಪಂ ಮಾಜಿ ಸದಸ್ಯ ಗಡಿಮಾಕುಂಟೆ ಸಿದ್ದೇಶ್‌, ಪಪಂ ಮಾಜಿ ಅಧ್ಯಕ್ಷ ಎನ್‌.ಎಸ್‌. ರಾಜು, ತಿಪ್ಪೇಸ್ವಾಮಿ, ಜೆ.ವಿ. ನಾಗರಾಜ್‌, ಮುಖಂಡರಾದ
ಅನಿತ್‌ಕುಮಾರ್‌, ಬಾಬು, ರವಿಕುಮಾರ್‌, ನಿಜಲಿಂಗಪ್ಪ, ಕಾನನಕಟ್ಟೆ ತಿಪ್ಪೇಸ್ವಾಮಿ, ಕುಬೇಂದ್ರಪ್ಪ ಓಬಳೇಶ್‌ ಮತ್ತಿತರರು ಉಪಸ್ಥಿತರಿದ್ದರು. ಅಣಬೂರು,
ಹನುಮಂತಪುರ, ತೋರಣಗಟ್ಟೆ, ಕಲ್ಲೇದೇವರಪುರ, ಬಿದರಕೆರೆ, ಮುಸ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಾಯತ್ರಿ ಸಿದ್ದೇಶ್ವರ ಮತಯಾಚನೆ ಮಾಡಿದರು.

ಶಾಮನೂರು ಶಿವಶಂಕರಪ್ಪನವರು ನನಗೆ ತಂದೆ ಸಮಾನರು. ಬಿಜೆಪಿ ಆಭ್ಯರ್ಥಿ ಅಡುಗೆ ಮಾಡಲು ಲಾಯಕ್ಕು ಅಂತ ಹೇಳಿದ್ದಾರೆ. ಹುಟ್ಟಿದ ತಕ್ಷಣ ಯಾವ ಮಕ್ಕಳೂ ನಡೆಯುವುದಿಲ್ಲ. ನಾನು ಕಲಿತು ತೋರಿಸಿಕೊಡುತ್ತೇನೆ. ಈಗ ತಾನೇ ಅಡುಗೆ ಮಾಡಿಟ್ಟಿದ್ದು, ಕಾರ್ಯಕರ್ತರ ಸಹಾಯದಿಂದ ಗೆಲ್ಲುವುದು ನಿಶ್ಚಿತ.
– ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next