ಜಗಳೂರು: ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯ ಆಗಿಲ್ಲ. ನನ್ನನ್ನು ಬೆಂಬಲಿಸಿ ಗೆಲ್ಲಿಸಿದರೆ ಕ್ಷೇತ್ರದಲ್ಲಿ ಸಮಗ್ರ ನೀರಾವರಿಗೆ ಮೊದಲ ಆದ್ಯತೆ ನೀಡುವೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹೇಳಿದರು.
ಮಂಗಳವಾರ ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ಮತಯಾಚನೆ ಮಾಡಿ ಬಿಳಿಚೋಡಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರದಲ್ಲಿ 27 ಪಕ್ಷಗಳು ಸೇರಿ ಒಕ್ಕೂಟ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ಪ್ರಯತ್ನ ಮಾಡುತ್ತಿವೆ. ಅದು ಎಂದಿಗೂ ಸಾಧ್ಯವಿಲ್ಲ. ಏಕೆಂದರೆ ಅವರಿಗೆ ನಾರಿಶಕ್ತಿಯ ಬೆಂಬಲವಿದೆ ಎಂದರು.
ಕೆಂದ್ರದಲ್ಲಿ 60 ವರ್ಷ ಅಳ್ವಿಕೆ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಸಾಧನೆ ಶೂನ್ಯ. ಪ್ರಧಾನಿಯಾಗಿ ಹತ್ತು ವರ್ಷ ಆಡಳಿತ ನಡೆಸಿರುವ ನರೇಂದ್ರ ಮೋದಿಯವರು ರೈತರ ಖಾತೆಗೆ 2000 ರೂ., ಹೆಣ್ಣುಮಕ್ಕಳ ಸಂತತಿ ರಕ್ಷಣೆಗಾಗಿ ಸುಕನ್ಯಾ ಸಮೃದ್ಧಿ ಯೋಜನೆ, ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ, ಮನೆ ಮನೆಗೆ ಗಂಗೆ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಬಣ್ಣಿಸಿದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಕಾಂಗ್ರೆಸ್ ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಬಹುಮತಕ್ಕೆ 272 ಸ್ಥಾನಗಳ ಅವಶ್ಯಕತೆ ಇದೆ. ಆದರೆ ಕಾಂಗ್ರೆಸ್ 200 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿದೆ. ನಾನು ಶಾಸಕನಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಶ್ರಮಿಸಿದ್ದೇನೆ. ಈಗಿನ ಸರ್ಕಾರ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.
ಮತ್ತೋರ್ವ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ನಾನು ಶಾಸಕನಾಗಿದ್ದಾಗ ಬಿಳಿಚೋಡು ಗ್ರಾಮದಲ್ಲಿ ದ್ವಿಮುಖ ಸಿಸಿ ರಸ್ತೆ ಮಾಡಿಸಿದ್ದೇನೆ. ಒಂದು ಕಡೆ ರಸ್ತೆ ಆಗಿದ್ದು, ಇನ್ನೊಂದು ಭಾಗದಲ್ಲಿ ರಸ್ತೆ ಮಾಡಿಸುವಷ್ಟರಲ್ಲಿ ಚುನಾವಣಾ ನೀತಿಸಂಹಿತೆ ಜಾರಿಗೆ ಬಂತು. ಕಾಂಗ್ರೆಸ್ ಸರ್ಕಾರ ಕಾಮಗಾರಿ ನನೆಗುದಿಗೆ ಬೀಳುವಂತೆ ಮಾಡಿದೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಹಾಗೂ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ. ಹಾಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಮಾತನಾಡಿ, ದೇಶ ಅಭಿವೃದ್ಧಿ ಹೊಂದಬೇಕಾದರೆ ಮೋದಿ ಮತ್ತೆ ಪ್ರಧಾನಮಂತ್ರಿಯಾಗಬೇಕು. ಕೋವಿಡ್ ಸಮಯದಲ್ಲಿ ದೇಶದ ಎಲ್ಲರಿಗೂ ಲಸಿಕೆ ನೀಡಿ ಜೀವ ಉಳಿಸಿದ್ದಾರೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಸಿದ್ದಣ್ಣ, ಜೆಡಿಎಸ್
ಮಹಿಳಾ ಘಟಕದ ಅಧ್ಯಕ್ಷೆ ಸುನಂದಮ್ಮ ಯಲ್ಲಪ್ಪ, ಸಂಸದರ ಪುತ್ರ ಅನಿತ್‌ಕುಮಾರ್, ಜಿಪಂ ಮಾಜಿ ಸದಸ್ಯರಾದ ಸವಿತಾ, ಎಸ್.ಕೆ. ಮಂಜುನಾಥ, ಉಮಾ ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿ ಡಿ.ವಿ. ನಾಗಪ್ಪ, ಮುಖಂಡರಾದ ಶಶಿಧರ, ಮೋಹನ್, ಸುರೇಂದ್ರ, ರಾಜುಕುಮಾರ್, ಪ್ರಸನ್ನ, ಚಂದ್ರ ನಾಯ್ಕ ಮತ್ತಿತರರು ಇದ್ದರು.
ಹಾಲೇಕಲ್ಲು, ಗುತ್ತಿದುರ್ಗ, ಪಲ್ಲಾಗಟ್ಟೆ, ಬಿಸ್ತುವಳ್ಳಿ, ದಿದ್ದಿಗಿ, ಹುಚ್ಚಂಗಿಪುರ, ಆಸಗೋಡು ಗ್ರಾಮಗಳಲ್ಲಿ ಮತಯಾಚನೆ ಮಾಡಲಾಯಿತು.