ಹೊಸದಿಲ್ಲಿ: ಕಾನೂನಿನ ಕಗ್ಗತ್ತಲೆಯಲ್ಲಿ, ಸಮಾಜದ ಅಂಜಿಕೆಯಲ್ಲಿ ಬೆಳಕಿಗೆ ಬಾರದೆ ಅಡಗಿದ್ದ “ಸಲಿಂಗ ಕಾಮ’ಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ. ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳುಳ್ಳ ಸಾಂವಿಧಾನಿಕ ಪೀಠ, ಗುರುವಾರ ಈ ಕುರಿತು ಐತಿಹಾಸಿಕ ತೀರ್ಪು ಪ್ರಕಟಿಸಿದೆ. “ಸಮ್ಮತಿ ಯುಕ್ತ ಸಲಿಂಗ ಕಾಮ’ ಅಪರಾಧವಲ್ಲ ಎಂದಿದೆ. ಇದರಿಂದಾಗಿ ಪುರುಷರು, ಮಹಿಳೆಯರು, ದ್ವಿಲಿಂಗಿಗಳು, ತೃತೀಯ ಲಿಂಗಿಗಳು, ಕ್ವೀರ್(ಎಲ್‌ಜಿಬಿಟಿ)ಗಳ ನಡುವಿನ ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ನೀಡಿದೆ.
ನ್ಯಾಯಪೀಠದ ಅಭಿಮತ
ಸಲಿಂಗಿಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದ್ದ, ವಸಾಹತು ಸಂಸ್ಕೃತಿಯ ಪ್ರತೀಕವಾಗಿರುವ ಭಾರತೀಯ ದಂಡ ಸಂಹಿತೆ (ಐಪಿಸಿ)ಯ 377ನೇ ಸೆಕ್ಷನ್ ಅನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ನ್ಯಾಯಪೀಠ, “ಭಾರತದ ಸರ್ವ ನಾಗರಿಕರಿಗೆ ಸಂವಿಧಾನ ನೀಡಿರುವ ಹಕ್ಕುಗಳು ಸಲಿಂಗಿಗಳಿಗೂ ಅನ್ವಯವಾಗುತ್ತವೆ. ಲೈಂಗಿಕ ಬಯಕೆಗಳು ಪ್ರತಿಯೊಬ್ಬರಲ್ಲೂ ನೈಸರ್ಗಿಕವಾಗಿ ಅಂತರ್ಗತವಾಗಿರುವ ಭಾವನೆಯಾಗಿದ್ದು, ಇಂಥ ವಾಂಛೆಗಳನ್ನು ಈಡೇರಿಸಿಕೊಳ್ಳಲು ಇಚ್ಛಿಸುವುದು ಪ್ರತಿಯೊಬ್ಬರ ಹಕ್ಕಾಗಿರುತ್ತದೆ.
ಈ ಹಕ್ಕು ಸಲಿಂಗಕಾಮಿಗಳಿಗೂ ಅನ್ವಯಿಸುತ್ತದೆ ಹಾಗೂ ತಮ್ಮದೇ ಆದ ಖಾಸಗಿ ಲೈಂಗಿಕ ಬದುಕಿನೊಂದಿಗೆ ಇತರರಂತೆ ಈ ಸಮಾಜದಲ್ಲಿ ಘನತೆಯಿಂದ ಬದುಕಲು ಅವರಿಗೂ ಹಕ್ಕಿದೆ. ಹೀಗಿರುವಾಗ ಅವರ ಲೈಂಗಿಕ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಂಡಲ್ಲಿ ಅದು ಮೂಲ ಭೂತ ಹಕ್ಕುಗಳಿಗೆ ಚ್ಯುತಿ ತಂದಂತೆ’ ಎಂದಿದೆ. ಇದಲ್ಲದೆ ಖಾಸಗಿಯಾಗಿ, ಪರಸ್ಪರ ಸಮ್ಮತಿಯ ಆಧಾರದ ಮೇಲೆ ನಡೆಯುವ ಸಲಿಂಗ ಲೈಂಗಿಕ ಕ್ರಿಯೆಗಳು ಸಮಾಜಕ್ಕೆ ಯಾವುದೇ ರೀತಿಯಲ್ಲೂ ಮಾರಕವಾಗದು ಅಥವಾ ಅನುಕರಣೀಯವೆನಿಸದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.