ಸಿದ್ದಾಪುರ: ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಗ್ರಾಮದಲ್ಲಿ ರವಿವಾರ ಬೆಳಗ್ಗೆ ಮೂರನೇ ದಿನದ ಸದ್ಭಾವನಾ ಪಾದಯಾತ್ರೆ ಕೈಗೊಂಡರು. ಶ್ರೀಗಳು ಬಸ್‌ನಿಲ್ದಾಣದ ಬಳಿ ಆಗಮಿಸುತ್ತಿದ್ದಂತೆ ಪುಟಾಣಿ ಮಕ್ಕಳು ಶ್ರೀಗಳಿಗೆ ಹೂವುಗಳನ್ನು ನೀಡಿ ಸ್ವಾಗತಿಸಿದರು.
ಗ್ರಾಮದ ಗಂಗಾವತಿ-ರಾಯಚೂರು ಮುಖ್ಯರಸ್ತೆಯ ಬಸ್‌ನಿಲ್ದಾಣದಿಂದ ಆರಂಭಗೊಂಡಶ್ರೀಗಳ ಸದ್ಭಾವನಾ ಪಾದಯಾತ್ರೆ ಗ್ರಾಮದೇವತೆ ದುಗಲಮ್ಮದೇವಿ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಭೋವಿ ಓಣಿ, ಛಲವಾದಿ ಓಣಿ, ಹರಿಜನ ಕೆರಿ, ಕುರುಬರ ಓಣಿ, ವಿರುಪಯ್ಯತಾತನ ದೇವಸ್ಥಾನ, ಮರಕುಂಬಿ ವಿರುಪಣ್ಣ ರಸ್ತೆ, ಪಾಟೀಲ ಮತ್ತು ತಿಮ್ಮನಗೌಡ ರಸ್ತೆ, ಎದುರು ಬಸವಣ್ಣ ರಸ್ತೆ, ಗೂಳಿ ಬಸವೇಶ್ವರ ವೃತ್ತ, ಮಲ್ಲಿಕಾರ್ಜುನ ನಗರದ ಆಂಜನೇಯ ದೇವಸ್ಥಾನದ ಮೂಲಕ ಬಸವರಾಜ ಭಾವಿ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾದಯಾತ್ರೆಯನ್ನು ಸಮಾಪ್ತಿಗೊಳಿಸಿದರು.
ಸ್ಥಳೀಯರು ಶ್ರೀಗಳನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಮುಖ್ಯರಸ್ತೆಯ ತುಂಬಾ ಮತ್ತು ಮನೆಗಳ ಎದುರು ರಂಗೋಲಿ ಹಾಕಿ, ತೆಂಗಿನ ಗರಿ, ಬಾಳೆದಿಂಡು ಸೇರಿದಂತೆ ತಳಿರು ತೋರಣಗಳಿಂದ ಶೃಂಗರಿಸಿದ್ದರು. ಪಾದಯಾತ್ರೆಯಲ್ಲಿ ಬಳಗಾನೂರಿನ ಚಿಕೇನಕೊಪ್ಪ ಚನ್ನವೀರ ಶರಣರ ಮಠದ ಶಿವಶಾಂತವೀರ ಶರಣರ ವಚನಗಾಯನ ನೆರೆದವರನ್ನು ಮಂತ್ರಮುಗ್ಧರನ್ನಾಗಿಸಿತು.
ಸೌಹಾರ್ದತೆಗೆ ಸಾಕ್ಷಿ: ಸಿದ್ದಾಪುರ ಗ್ರಾಮದಲ್ಲಿ ಕೊಪ್ಪಳ ಶ್ರೀಗವಿಸಿದ್ದೇಶ್ವರ ಸ್ವಾಮಿಗಳು ನಡೆಸಿದ 3ನೇ ದಿನದ ಸದ್ಭಾವನ ಯಾತ್ರೆ ಹಿಂದೂ-ಮುಸ್ಲಿಮರ ಸೌಹಾರ್ದತೆಗೆ ಸಾಕ್ಷಿಯಾಯಿತು. ಗ್ರಾಮದ ಬಸ್‌ನಿಲ್ದಾಣದ ಬಳಿ ಅಪಾರಸಂಖ್ಯೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ನೆರೆದಿದ್ದರು. ಮುಸ್ಲಿಂ ಸಮುದಾಯದವರು ಹಿಂದೂಗಳಿಗೆ ಟೋಪಿ ತೊಡಿಸಿದರೆ, ಹಿಂದೂಗಳು ಮುಸ್ಲಿಂ ಸಮುದಾಯದವರಿಗೆ ಕೊರಳಲ್ಲಿ ಲಿಂಗದವಸ್ತ್ರ ಹಾಕಿ ಶ್ರೀಗಳ ಸಂದೇಶ ಮತ್ತು ಆಶಯದಂತೆ ಸೌಹಾರ್ದತೆಮೆರೆದರು. ಶ್ರೀಗಳ ಸದ್ಭಾವನಾ ಪಾದಯಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಶ್ರೀಗೂಳಿ ಬಸವೇಶ್ವರ ಸಮಿತಿ ಸದಸ್ಯರು ಬಾದಾಮಿ ಹಾಲಿನ ವ್ಯವಸ್ಥೆ ಮಾಡಿದ್ದರು. ಪಾದಯಾತ್ರೆ ವೇಳೆ ಗವಿ ಶ್ರೀಗಳು ವೃದ್ಧರು, ಮಹಿಳೆಯರು, ಮಕ್ಕಳನ್ನು ಆಶೀರ್ವದಿಸಿದರು.
ಪಾದಯಾತ್ರೆಯಲ್ಲಿ ಕಾರಟಗಿ, ಶ್ರೀರಾಮನಗರ, ಈಳಿಗನೂರು, ಉಳೇನೂರು, ಕೊಕ್ಲೃಕಲ್, ಬರಗೂರು, ಗುಂಡೂರು, ಕಕ್ಕರಗೋಳ, ನಂದಿಹಳ್ಳಿ, ಸಿಂಧನೂರು ತಾಲೂಕಿನ ಜಾಲಿಹಾಳ, ಸಿದ್ರಾಂಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ಹೂವಿನಹಡಗಲಿಯ ಗವಿಸಿದ್ದೇಶ್ವರ ಶಾಖಾಮಠದ ಹಿರೇಶಾಂತವೀರ ಸ್ವಾಮೀಜಿ, ಗ್ರಾಮದ ಹಿರೇಮಠದ ಶಿವಕುಮಾರ ಸ್ವಾಮಿ, ಉಮೇಶ ತಾತ, ಜಿಪಂ ಅಧ್ಯಕ್ಷ ವಿಶ್ವನಾಥರೆಡ್ಡಿ ಹೊಸಮನಿ, ಕನಕಗಿರಿ ಶಾಸಕ ಬಸವರಾಜ ದಢೇಸುಗೂರು, ವಿಶೇಷ ಎಪಿಎಂಸಿ ಅಧ್ಯಕ್ಷ ಶರಣಪ್ಪ ಭಾವಿ, ಜಿಪಂ ಮಾಜಿ ಉಪಾಧ್ಯಕ್ಷ ಬಿ. ಬಸವರಾಜಪ್ಪ, ತಾಪಂ ಸದಸ್ಯ ಪ್ರಕಾಶ ಭಾವಿ, ತಾಪಂ ಮಾಜಿ ಸದಸ್ಯ ನೀರಗಂಟಿ ಬಸವರಾಜ, ಡಾ| ಕೆ.ಎನ್. ಪಾಟಿಲ, ಚನ್ನನಗೌಡ ಪೊಲೀಸ್ ಪಾಟೀಲ, ಶಿವಲಿಂಗಪ್ಪ ಮಿರಾಲಿ, ಎಂ.ಡಿ. ಸಿರಾಜ್, ಮಹೆಬೂಬ್ ಮುಲ್ಲಾ, ಚುನಾಯಿತ ಜನಪ್ರತಿನಿ ಧಿಗಳು, ವಿವಿಧ ಸಮಾಜದ ಮುಖಂಡರು, ಸ್ತ್ರೀಶಕ್ತಿ ಗುಂಪಿನ ಸದಸ್ಯೆಯರು, ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.