ಕೆ.ಆರ್.ಪೇಟೆ: ಪುರಾಣ ಪ್ರಸಿದ್ಧ ಗೋವುಗಳ ರಕ್ಷಕ ಬಿಲ್ಲೇನಹಳ್ಳಿ ಶ್ರೀ ಗವಿರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.
ರಥೋತ್ಸವ ಕಣ್ತುಂಬಿಕೊಳ್ಳಲು ಮುಂಬೈ, ದೆಹಲಿ, ಕೋಲ್ಕತ್ತಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಇನ್ನು ಸ್ಥಳೀಯ ಗ್ರಾಮಗಳ ಸಾವಿರಾರು ಭಕ್ತಾದಿಗಳು, ನವ ದಂಪತಿ ಉತ್ಸಾಹದಿಂದ ಜಾತ್ರೆಗೆ ಆಗಮಿಸಿದ್ದರು. ಜೊತೆಗೆ ರೈತರು ತಮ್ಮ ಜಾನುವಾರುಗಳಿಗೆ ಅಲಂಕಾರ ಮಾಡಿಕೊಂಡು ಮೆರವಣಿಗೆ ಮೂಲಕ ಕರೆತಂದರು. ಗವಿರಂಗನಾಥನಿಗೆ ಪೂಜೆ ಸಲ್ಲಿಸಿ ನಂತರ ರಥೋತ್ಸವದಲ್ಲಿ ಭಾಗವಹಿಸಿ ಕೃತಾರ್ಥರಾದರು.
ರಥೋತ್ಸವ, ಜಾತ್ರೆ ಸಂಸ್ಕೃತಿ ಪ್ರತಿಬಿಂಬ: ರಥೋತ್ಸವದ ನಂತರ ನಡೆದ ಜಾನಪದ ಕಲಾ ತಂಡಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ನಾರಾಯಣಗೌಡ, ಜಾತ್ರೆ ರಥೋತ್ಸವಗಳು ನಮ್ಮ ಸಂಸ್ಕೃತಿ ಪ್ರತಿಬಿಂಬ. ಜಾತ್ರೆ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸಿ ದೇವರ ದರ್ಶನ ಮಾಡಿ ಶ್ರೀರಥದ ಕಳಸಕ್ಕೆ ಹಣ್ಣು ದವನ ಸಮರ್ಪಿಸಿದಾಗ ದೇವರ ಕೃಪೆಗೆ ಪಾತ್ರರಾಗಬೇಕು. ರಥೋತ್ಸವದ ಸಂಭ್ರಮದಲ್ಲಿ ಜಾತಿ, ಮತ, ಪಂಥ ಮರೆತು ಒಂದಾಗಿ ಭಾಗವಹಿಸುವುದರಿಂದ ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಉತ್ಸವ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ಗವಿರಂಗನಾಥಸ್ವಾಮಿ ಕ್ಷೇತ್ರದ ಸುತ್ತಲೂ ಪ್ರದಕ್ಷಿಣೆ ಹಾಕಿದ ಶಾಸಕ ನಾರಾಯಣಗೌಡ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಶ್, ಕುಮಾರ್, ತಹಶೀಲ್ದಾರ್ ಶಿವಮೂರ್ತಿ ಜಾತ್ರೆಗೆ ಚಾಲನೆ ನೀಡಿದರು. ಗವಿರಂಗನಾಥಸ್ವಾಮಿ ಕ್ಷೇತ್ರದ ಪ್ರದಾನ ಅರ್ಚಕರಾದ ಸಂಪತ್ತಾಚಾರ್‌ರ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆ, ಹೋಮ ಹವನ ನಡೆಯಿತು. ಉಘೇ ಗವಿರಂಗನಾಥಸ್ವಾಮಿ ಉಘೇ..ಗೋವಿಂದ.. ಉಘೇ ರಂಗನಾಥ ಎಂಬ ಜಯಘೋಷ ಮೊಳಗಿದವು. ಉಪತಹಶೀಲ್ದಾರ್ ಜಯಲಕ್ಷ್ಮೀ, ರಾಮಚಂದ್ರಪ್ಪ, ತಾಪಂ ಸದಸ್ಯ ದಿನೇಶ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ,
ಸಮಾಜ ಸೇವಕ ಕೊಡಗಳ್ಳಿ ವೆಂಕಟೇಶ್, ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.