Advertisement

ಮೈಸೂರು ದಸರಾದಲ್ಲಿ ಗವಿಮಠ ಸ್ತಬ್ಧ ಚಿತ್ರ

12:33 PM Sep 23, 2019 | Suhan S |

ಕೊಪ್ಪಳ: ಉತ್ತರ ಕರ್ನಾಟಕದ ಸಿದ್ಧಗಂಗೆ, ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಕೊಪ್ಪಳದ ಗವಿಮಠವು ಗುರು ಪರಂಪರೆ, ಗತ ವೈಭವದ ಇತಿಹಾಸವು ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಅನಾವರಣಗೊಳ್ಳಲಿದೆ. ಕೊಪ್ಪಳ ಜಿಲ್ಲಾಡಳಿತ ಮಠದ ಸ್ತಬ್ಧ ಚಿತ್ರವನ್ನು ದಸಾರ ಉತ್ಸವದ ಮೆರವಣಿಗೆಯಲ್ಲಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದೆ.

Advertisement

ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಪ್ರತಿ ವರ್ಷದ ಪದ್ಧತಿ ಪ್ರಕಾರ, ಪ್ರತಿಯೊಂದು ಜಿಲ್ಲೆಯಿಂದ ವಿವಿಧ ಕ್ಷೇತ್ರಗಳ ಗಮನ ಸೆಳೆಯುವ ಸ್ಪಬ್ಧ ಚಿತ್ರಗಳು ಸೇರಿ ಜನ ಜಾಗೃತಿ ಸ್ತಬ್ಧ ಚಿತ್ರಣಗಳು ದಸರಾ ಉತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಜಗತ್ತಿನ ಗಮನ ಸೆಳೆಯಲಿವೆ.

ಅದರಂತೆ, ಈ ವರ್ಷ ಕೊಪ್ಪಳ ಜಿಲ್ಲಾಡಳಿತವು ಗವಿಮಠದ ಇತಿಹಾಸದ ಪರಂಪರೆ, ಮಠದಲ್ಲಿನ ಜನ ಜಾಗೃತಿಯ ಆಚರಣೆ, ಭಕ್ತ ಸಮೂಹ, ಅಕ್ಷರ, ಅಧ್ಯಾತ್ಮ, ಜಾತ್ರಾ ಮಹೋತ್ಸವದ ವೈಭವ ಸ್ತಬ್ಧ ಚಿತ್ರದಲ್ಲಿ ಕಂಗೊಳಿಸಲಿದೆ. ಕಳೆದ 2008-19ನೇ ಸಾಲಿನಲ್ಲಿ ಕನಕಗಿರಿಯ ಕನಕಾಚಲಪತಿ ದೇವಸ್ಥಾನ ಹಾಗೂ ಬಾವಿಯ ಸ್ತಬ್ಧ ಚಿತ್ರ, 2017-18ರಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿನ

ಆಡಳಿತ ಕೇಂದ್ರ ಆನೆಗೊಂದಿಯ ರಾಜರ ಅರಮನೆ, ಗಗನ್‌ ಮಹಲ್‌ ಹಾಗೂ 2016-17ನೇ ಸಾಲಿನಲ್ಲಿ ಹೊಸಹಳ್ಳಿ ಸಮೀಪ ಜಿಲ್ಲಾಡಳಿತ ನಿರ್ಮಿಸಿರುವ ಬಹುಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಸ್ವತ್ಛತೆಯ ಕುರಿತಂತೆ ಸ್ತಬ್ಧ ಚಿತ್ರ ಪ್ರದರ್ಶಿಸಲಾಗಿತ್ತು. ಈ ಬಾರಿ ಗವಿಮಠದ ಐತಿಹಾಸಿಕ ವೈಭವ ಅನಾವರಣಕ್ಕೆ ಸಿದ್ಧತೆ ನಡೆಯುತ್ತಿದೆ.

ಮಠಕ್ಕಿದೆ ಗತ ಕಾಲದ ಇತಿಹಾಸ: ಸಾವಿರಾರು ವರ್ಷಗಳ ಹಿಂದೆ ಕಾಶಿಯಿಂದ ಸಂತನೊಬ್ಬ ಹಂಪಿ, ಆನೆಗೊಂದಿ ಮಾರ್ಗವಾಗಿ ಸಂಚರಿಸುತ್ತಾ ಈ ಭಾಗಕ್ಕೆ ಬಂದನಂತೆ. ಇಲ್ಲಿನ ಸೈಸರ್ಗಿಕ ಸೊಬಗು, ಬೆಟ್ಟ ಗುಡ್ಡಗಳ ತಾಣ ನೋಡಿ ಗುಹೆಗಳಲ್ಲಿಯೇ ನೆಲೆಸಿದರಂತೆ. ಗುಹೆಗಳಲ್ಲಿ ಹಲವು ದಿನಗಳ ಕಾಲ ನೆಲೆಸಿದ್ದನ್ನು ಗಮನಿಸಿದ ಈ ಭಾಗದ ಜನತೆ, ದೂರದಿಂದ ಸಂತ ಬಂದಿದ್ದಾನೆಂದು ನೋಡಲು ಬಂದರು. ಆ ಸ್ವಾಮೀಜಿ ನುಡಿದ ಎಲ್ಲ ಭವಿಷ್ಯ ವಾಣಿಗಳು ನಿಜವಾಗುತ್ತಿರುವುದನ್ನು ನೋಡಿ ಇಲ್ಲಿನ ಭಕ್ತ ಸಮೂಹ ಅವರನ್ನೇ ದೇವರೆಂದು ಆರಾಧಿಸಲಾರಂಭಿಸಿದ್ದಾರೆ. ಅಲ್ಲಿಂದ ಆರಂಭವಾದ ಗವಿಮಠ ಇತಿಹಾಸದ ಪರಂಪರೆ, ಈ ವರೆಗೂ 18 ಪೀಠಾ ಧೀಶ್ವರರನ್ನು ಕಂಡಿದೆ. ಪ್ರಸ್ತುತ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಅವರು ಮಠದಲ್ಲಿ ಹಲವು ಜಾಗೃತಿ ಕೈಂಕರ್ಯ ಕೈಗೊಂಡು ಜನತೆಗೆ ಸನ್ಮಾರ್ಗದತ್ತ ನಡೆಯುವ ಸಂದೇಶ ನೀಡುತ್ತಿದ್ದಾರೆ.

Advertisement

ಅಧ್ಯಾತ್ಮ, ಅಕ್ಷರ ದಾಸೋಹ: ಗವಿಮಠವು ಪೂರ್ವದಿಂದಲೂ ಅಕ್ಷರ, ಅನ್ನ, ಅಧ್ಯಾತ್ಮಕ್ಕೆ ಹೆಸರಾಗಿದೆ. ಬಡ ಮಕ್ಕಳಿಗೆ ವಸತಿ ವ್ಯವಸ್ಥೆ ಮಾಡುವ ಜೊತೆಗೆ ಅಕ್ಷರ ಜ್ಞಾನ ನೀಡುತ್ತಿದೆ. ನೊಂದು, ಬೆಂದವರಿಗೆ, ಜೀವನದ ಸಾರ ತಿಳಿಯುವ ಅಧ್ಯಾತ್ಮದ ಚಿಂತನೆ ನೀಡುತ್ತಿದೆ. ಹಸಿದವರಿಗೆ ಅನ್ನ ಪ್ರಸಾದ ನೀಡುವ ದಾಸೋಹದ ಪರಂಪರೆ ಮಠದಿಂದ ಬೆಳೆದು ಬಂದಿದೆ. ಪ್ರತಿ ವರ್ಷ ನಡೆಯುವ ಗವಿಸಿದ್ದೇಶ್ವರ ಜಾತ್ರೆಯಲ್ಲಿ 15 ಲಕ್ಷಕ್ಕೂ ಅ ಧಿಕ ಭಕ್ತ ಸಮೂಹ ಪ್ರಸಾದ ಸವಿಯುವುದು ಇಲ್ಲಿ ವಾಡಿಕೆ. ಭಕ್ತರು ತನು, ಮನ, ಧನದಿಂದ ಮಠಕ್ಕೆ ಪ್ರತಿ ವರ್ಷ ಮೆರವಣಿಗೆ ಮಾಡುತ್ತಲೇ, ಧವಸ, ಧಾನ್ಯ ನೀಡುತ್ತಾರೆ.

ಶ್ರೀಗಳ ಸಾಮಾಜಿಕ ಕ್ರಾಂತಿಯ ಕಹಳೆ: ಈ ಹಿಂದಿನ ಶ್ರೀಗಳು ಅಧ್ಯಾತ್ಮ, ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಿದ್ದರೆ, ಈಗಿನ ಅಭಿನವ ಶ್ರೀಗಳು ಸಾಮಾಜಿಕ ಜಾಗೃತಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಬಾಲ್ಯ ವಿವಾಹ ತಡೆ, ಜಲ  ಧೀಕ್ಷೆ, ಜಲ ಜಾಗೃತಿ, ಮಹಾ ರಕ್ತದಾನ, ಹಸಿರೀಕರಣದಂತ ವಿನೂತನ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅದರಲ್ಲೂ ಕೊಪ್ಪಳ ಜಿಲ್ಲೆ ಪದೇ ಪದೆ ಬರಕ್ಕೆ ತುತ್ತಾಗುತ್ತಿರುವುದನ್ನರಿತು 26 ಕಿ.ಮೀ. ಉದ್ದದ ಹಿರೇಹಳ್ಳವನ್ನು ಸ್ವತ್ಛಗೊಳಿಸಿ ಜಲ ಜಾಗೃತಿ ಸಂದೇಶ ನೀಡಿ ರಾಷ್ಟ್ರದ ಗಮನ ಸೆಳೆದಿದ್ದಾರೆ. ಇಂತಹ ಮಹಾನ್‌ ಜಾಗೃತಿ ಹಾಗೂ ಮಠದ ಪರಂಪರೆಯನ್ನರಿತು ಜಿಲ್ಲಾಡಳಿತವು ಈ ಬಾರಿ ಮೈಸೂರು ದಸರಾ ಉತ್ಸವದಲ್ಲಿ ಗವಿಮಠದ ಇತಿಹಾಸ ಸಾರುವ ಸ್ತಬ್ಧ ಚಿತ್ರಣ ಪ್ರದರ್ಶನಕ್ಕೆ ಸಿದ್ದಗೊಂಡಿದೆ.

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next