Advertisement

ಯಾವುದೇ ಪ್ರಶಸ್ತಿಗೂ ಹೆಸರು ಸೂಚಿಸದಿರಿ: ಗವಿಮಠ ಶ್ರೀ

07:43 PM Aug 12, 2021 | Team Udayavani |

ಕೊಪ್ಪಳ: ದೇವನ ಕರುಣೆಯಿಂದ ಮಾನವನಾಗಿ ಜನ್ಮತಾಳಿದ್ದೆ ಒಂದು ದೊಡ್ಡ ಪ್ರಶಸ್ತಿ ಇರುವಾಗ ಉಳಿದ ಪ್ರಶಸ್ತಿಗಳ ಹಂಗೇಕೆ? ಜನರ ಪ್ರೀತಿ, ಅಭಿಮಾನಗಳೇ ಎನಗೆ ದೊಡ್ಡ ಪ್ರಶಸ್ತಿ. ಹಾಗಾಗಿ ಭಕ್ತರು ನನ್ನ ಹೆಸರನ್ನು ಯಾವುದೇ ಪ್ರಶಸ್ತಿಗೆ ಸೂಚಿಸಬಾರದು ಎಂದು ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು ಮನವಿ ಮಾಡಿದ್ದಾರೆ.

Advertisement

ಈ ಕುರಿತು ಸಂಸ್ಥಾನ ಗವಿಮಠದಿಂದ ಪ್ರಕಟಣೆ ಹೊರಡಿಸಿ, ಪ್ರಕೃತಿ ನಮಗೆ ಕೊಟ್ಟಿರುವುದು ಎರಡೇ ಆಯ್ಕೆ. ಒಂದು ಇರುವುದನ್ನು ಪ್ರೇಮದಿಂದ ಕೊಟ್ಟು ಹೋಗಬೇಕು. ಇಲ್ಲವೇ ಅನಿವಾರ್ಯವಾಗಿ ಬಿಟ್ಟು ಹೋಗಬೇಕು. ದೇಹ, ಮನ, ಬುದ್ಧಿಭಾವಗಳನ್ನು ಬೆಳೆಸಿಕೊಂಡು ಸುಂದರವಾದ ದೇವನ ಸೃಷ್ಟಿಯನ್ನು ಮತ್ತಷ್ಟು ಸುಂದರಗೊಳಿಸುವುದಕ್ಕೆ ಈ ಜೀವನವನ್ನೇ ಕೊಡಬೇಕು. ನನ್ನದು ಎನ್ನುವುದು ಏನಿದೆಯೋ ಅದೆಲ್ಲಾ ಇಲ್ಲಿಯೇ ಬಿಟ್ಟು ಹೋಗಬೇಕು. ಇಲ್ಲಿ ನನಗೆ ಉಳಿದ ಆಯ್ಕೆ ಯಾವುದೇ ಫಲಾಪೇಕ್ಷೆಯಿಲ್ಲದೇ ಮಾಡುವ ನಿಷ್ಕಾಮಕರ್ಮ ಮಾತ್ರ. ಪ್ರೇಮ ಮತ್ತು ಸೇವೆ ನನ್ನ ಗುರುಗಳು ಅಪ್ಪಣೆ ಕೊಡಿಸಿದ ಧರ್ಮದ ಎರಡು ಆಯಾಮಗಳು. ಮತ್ತು ಇದೇ ರೀತಿಯಾಗಿ ಬದುಕಲು ಅಪ್ಪಣೆ ಕೊಟ್ಟಿದ್ದಾರೆ.

ಇತ್ತೀಚೆಗೆ ನನ್ನ ಹೆಸರಲ್ಲಿ ಸರ್ಕಾರ ಕೊಡಮಾಡುವ ಪ್ರಶಸ್ತಿಗಾಗಿ ಮತ್ತು ನಾಡಿನ ಪೂಜ್ಯರೊಂದಿಗೆ ಸೇವಾ ಕಾರ್ಯದಲ್ಲಿ ಹೋಲಿಕೆ ಮಾಡಿ ಅಂತರ್ಜಾಲದಲ್ಲಿ ಹರಿಬಿಡುತ್ತಿರುವುದು ನನ್ನ ಮನಸ್ಸಿಗೆ ನೋವಾಗಿದೆ. ನಾಡಿನ ಪೂಜ್ಯರೆಲ್ಲರಲ್ಲೂ ಎನಗೆ ಗುರು ಸ್ವರೂಪರು. ಸೇವಾ ಕಾರ್ಯದಲ್ಲಿ ಅವರೊಂದಿಗೆ ಹೋಲಿಸಿ ಅಂತರ್ಜಾಲದಲ್ಲಿ ಹರಿಬಿಡಬಾರದೆಂದು ಪ್ರಾರ್ಥಿಸುತ್ತೇನೆ. ಎಲ್ಲರೂ ಈ ವಿನಂತಿಯನ್ನು ಗೌರವಿಸುತ್ತಿರೆಂದು ನಂಬಿರುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next