Advertisement

ಸಾಣಾಪೂರ:ಗಾಂವಠಾಣಾ ಭೂಮಿ ಒತ್ತುವರಿ ಮಾಡಿ ರೆಸಾರ್ಟ್ ನಿರ್ಮಾಣ; ಅಧಿಕಾರಿಗಳ ನಿರ್ಲಕ್ಷ್ಯ

06:42 PM Jul 20, 2022 | Team Udayavani |

ಗಂಗಾವತಿ: ಜನವಸತಿಗಾಗಿ ಮೀಸಲಿರಿಸಿದ ಗಾಂವಠಾಣಾ ಭೂಮಿ ಜನ ದನ, ಕುರಿ ಪಶುಗಳು ಮೇಯಲು ಮೀಸಲಿರಿಸಿದ್ದ ಭೂಮಿಯನ್ನು ಗೈರಾಣಾ ಎಂದು ಸರಕಾರದ ನಿಯಮವಿದೆ. ಎರಡು ವಿಧದ ಭೂಮಿಯಲ್ಲಿ ಯಾವುದೇ ಸಾಗುವಳಿ ಚೀಟಿ ವಿತರಣೆ ಮಾಡದಂತೆ ನಿಯಮವಿದ್ದರೂ ತಾಲೂಕಿನಲ್ಲಿ ನೂರಾರು ಎಕರೆ ಭೂಮಿಗೆ ಸಾಗುವಳಿ ಚೀಟಿ ನೀಡಲಾಗಿದ್ದು  ಸಾಣಾಪೂರ ಗ್ರಾಮದ 2.35 ಎಕರೆ ಗಾಂವಠಾಣಾ ಭೂಮಿಯನ್ನು ಕೆಲವರು ಒತ್ತುವರಿ ಮಾಡಿ ಅಕ್ರಮವಾಗಿ ರೆಸಾರ್ಟ್ ಗಳನ್ನು ನಿರ್ಮಿಸಿಕೊಂಡಿದ್ದಾರೆ. ಲಕ್ಷಾಂತರ ರೂ. ಬೆಲೆಬಾಳುವ ಜನವಸತಿಗಾಗಿ ಮೀಸಲಿದ್ದ ಭೂಮಿ ಅನ್ಯರ ಪಾಲಾಗಿದ್ದರೂ ಗ್ರಾ.ಪಂ. ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ  ವಹಿಸಿದ್ದಾರೆ.

Advertisement

ಸಾಣಾಪೂರ ಗ್ರಾಮದ ಸರ್ವೇ ನಂಬರ್ 31 ರ ಪೈಕಿ 2.35 ಎಕರೆ ಭೂಮಿಯನ್ನು ಸರಕಾರ ಜನವಸತಿಗಾಗಿ ಗಾಂವಠಾಣಾ ಎಂದು ಗುರುತಿಸಿ ಮೀಸಲಿರಿದ್ದು ಹಲವು ದಶಕಗಳಿಂದ ಕೆಲವರು ಸ್ವಂತ ಭೂಮಿ ಇದ್ದರೂ ಗಾಂವಠಾಣಾ ಭೂಮಿಯನ್ನು  ಒತ್ತುವರಿ ಮಾಡಿಕೊಂಡು ರೆಸಾರ್ಟ್  ಗಳನ್ನು ನಿರ್ಮಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಂತೋಷ್ ಪಾಟೀಲ್‌ ಆತ್ಮಹತ್ಯೆ ಕೇಸ್: ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್

ಇದೀಗ ಸಾಣಾಪೂರ ಮಧ್ಯೆ ಭಾಗದಲ್ಲಿ ರಾಜ್ಯ ಹೆದ್ದಾರಿ 130 ನ್ನು ಚತುಷ್ಪತ ರಸ್ತೆಯನ್ನಾಗಿ ಮಾಡುವ ಹಂತದಲ್ಲಿ ಯೋಜನೆ ಅನುಷ್ಠಾನ ಮಾಡಲು ಮುಖ್ಯಮಂತ್ರಿಗಳು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಹಿಟ್ನಾಳ-ಗಂಗಾವತಿ ವರೆಗೆ ಚತುಷ್ಪತ ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಸಾಣಾಪೂರದಲ್ಲಿ ನೂರಾರು ಮನೆಗಳು, ಗ್ರಾ.ಪಂ. ಕಟ್ಟಡ, ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳನ್ನು ತೆರವು ಮಾಡಬೇಕಿದ್ದು, ಸಾಣಾಪೂರ ಗ್ರಾಮಕ್ಕೆಂದು ಮೀಸಲಿರುವ ಸರ್ವೇ ನಂಬರ್ 31 ರಲ್ಲಿರುವ 2.35 ಎಕರೆ ಗಾಂವಠಾಣಾ ಭೂಮಿಯಲ್ಲಿ ಅಕ್ರಮವಾಗಿ ಈ ಹಿಂದೆ ಸಾಗುವಳಿ  ಚೀಟಿ ನೀಡಿದ್ದನ್ನು ಸಹಾಯಕ ಆಯುಕ್ತರು ರದ್ದುಗೊಳಿಸಿ ರಸ್ತೆ ನಿರ್ಮಾಣದಲ್ಲಿ ನಿರಾಶ್ರಿತರಾಗುವವರಿಗೆ ಮನೆಯ ನಿವೇಶ ಹಾಗೂ ಸರಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಬಳಕೆ ಮಾಡುವಂತೆ ಸಾಣಾಪೂರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗಾಂವಠಾಣಾ ಭೂಮಿಯನ್ನು ಸಾಗುವಳಿ ಮಾಡಲು ಮಂಜೂರಿ ಮಾಡಲು ಸರಕಾರದ ಹಲವು ನಿಯಮಗಳಿದ್ದರೂ ಅಕ್ರಮ ಸಕ್ರಮ ಕಮಿಟಿಯಲ್ಲಿ ಅರ್ಜಿ ಸಲ್ಲಿಸಿ ಸರ್ವೇನಂಬರ್ 31 ರಲ್ಲಿರುವ 2.35 ಎಕರೆ ಭೂಮಿಗೆ ಸಾಗುವಳಿ ಚೀಟಿ ಪಡೆಯುವ ಜತೆಗೆ ಅಕ್ಕಪಕ್ಕದಲ್ಲಿರುವ ಪಾರಂಪೋಕ್ ಭೂಮಿಯನ್ನು ಸಹ ಒತ್ತುವರಿ ಮಾಡಿಕೊಂಡಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಮೌನ ವಹಿಸಿದ್ದಾರೆ. ಅಕ್ರಮ ಸಕ್ರಮ ಕಮಿಟಿಯ ಮೂಲಕ ಸಾಗುವಳಿ ಚೀಟಿ ಪಡೆದಿರುವವರಿಗೆ ಈ ಮೊದಲು ಸಾಗುವಳಿ ಪಟ್ಟಾ ಭೂಮಿ  ಸಾಣಾಪೂರ ಹಾಗೂ ಇತರೆ ಗ್ರಾಮಗಳಲ್ಲಿದ್ದರೂ ಭೂಮಿ ರಹಿತರೆಂದು ಅಫಿಡವಿಟ್ ಸಲ್ಲಿಸಿ ಸರಕಾರಿ (ಗಾಂವಠಾಣಾ) ಭೂಮಿಯನ್ನು ಪಡೆಯಲಾಗಿದ್ದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಗಾಂವಠಾಣಾ ಭೂಮಿಯ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮ ಕೈಗೊಂಡು ಖಾಲಿ ಮಾಡಿಸಿ ವಸತಿ ರಹಿತರಿಗೆ ನಿವೇಶನ ಹಂಚಬೇಕಿದೆ.

Advertisement

ಸಾಣಾಪೂರ ಗ್ರಾ.ಪಂ. ವ್ಯಾಪ್ತಿಯ ಸರ್ವೇ ನಂಬರ್ 31 ರಲ್ಲಿರುವ ಭೂಮಿಗೆ ಸಂಬಂಧಿಸಿದಂತೆ  ದಾಖಲೆ ಪರಿಶೀಲಿಸಿದಾಗ ಗಾಂವಠಾಣಾ ಎಂದು ದೃಢವಾಗಿದ್ದು ಈಗಾಗಲೇ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಗಾಂವಠಾಣಾ ಭೂಮಿ ದಾಖಲಾತಿ ಪರಿಶೀಲಿಸಿ ಸಾಗುವಳಿ ಚೀಟಿ ರದ್ದುಪಡಿಸುವಂತೆ ತಹಸೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೆ ಪತ್ರ ಬರೆಯಲಾಗುತ್ತದೆ. ನಂತರ ಸರ್ವೇ ಮಾಡಿಸಿ ಗ್ರಾ.ಪಂ. ವಶಕ್ಕೆ ಪಡೆಯಲಾಗುತ್ತದೆ. -ಮಹಾಂತಗೌಡ ಪಾಟೀಲ್ ಇಒ ತಾ.ಪಂ.  

-ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next