ಹುಣಸೂರು: ಪ್ರವಾಹದಿಂದ ತಾಲೂಕಿನ ಗಾವಡಗೆರೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಬ್ಯಾರನ್, ವಾಸದ ಮನೆಗಳು ಕುಸಿದು ಬಿದ್ದು, ತಂಬಾಕು ಬೆಳೆ ಕೊಳೆಯುವುದರೊಂದಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.
ಹರೀಕ್ಯಾತನಹಳ್ಳಿಯಲ್ಲಿ ನಾಗೇಗೌಡರ ತಂಬಾಕು ಬ್ಯಾರನ್ ಗೋಡೆ ಕುಸಿದಿದೆ. ಪಾಪನಾಯ್ಕರ ವಾಸದ ಮನೆ ಬಾಗಶಃ ಬಿದ್ದು ಹೋಗಿದ್ದರೆ, ಈ ಭಾಗದಲ್ಲಿ ಹೆಚ್ಚು ತಂಬಾಕು ಬೆಳೆಯುವ ರೈತರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಮೀನಿನಲ್ಲಿ ತೇವಾಂಶ ಹೆಚ್ಚಾಗಿ ಬೆಳೆ ಕೊಳೆಯುವ ಭೀತಿ ಇದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಂಬಾಕು ಎಲೆ ಮುರಿಯುವ ಕೆಲಸಕ್ಕೂ ಕಲ್ಲು ಬಿದ್ದಂತಾಗಿದ್ದು, ಕಳೆದ ವರ್ಷ ಈ ಭಾಗದಲ್ಲಿ ಬರ, ಇದೀಗ ಪ್ರವಾಹದಿಂದ ಭಾರೀ ಹಾನಿ ಸಂಭವಿಸಿದೆ.
ಇದೇ ಭಾಗದ ವಿವಿಧ ಗ್ರಾಮಗಳಲ್ಲಿ ಬೆಳೆದಿದ್ದ ಹೂಕೋಸು, ಶುಂಠಿ, ಬಾಳೆ, ಅವರೆ, ಕಲ್ಲಂಗಡಿ ಹೊಲಗಳಲ್ಲಿ ನೀರು ತುಂಬಿ ಅಪಾರ ನಷ್ಟ ಉಂಟಾಗಿದೆ. ಜೊತೆಗೆ ಜಾನುವಾರುಗಳನ್ನು ತಮ್ಮ ಕೊಟ್ಟಿಗೆಯಲ್ಲೇ ಕಟ್ಟಿರುವುದರಿಂದ ಮೇವು ಇಲ್ಲದಂತಾಗಿದೆ. ಇನ್ನು ಮೇಕೆ ಕುರಿಗಳಿಗೂ ಇದೇ ಸ್ಥಿತಿ ಇದೆ.
ಉಕ್ಕಿದ ಅಣೆಕಟ್ಟೆ: ಸಮೀಪದ ಕಟ್ಟೆಮಳಲವಾಡಿಯಲ್ಲಿ ಲಕ್ಷ್ಮಣ ತೀರ್ಥ ಅಣೆಕಟ್ಟೆ ಮೇಲೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಇದನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಧಾವಿಸುತ್ತಿದ್ದಾರೆ. ಯುವಕರು ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ. ಅಣೆಕಟ್ಟೆಗೆ ಪ್ರವಾಹದಲ್ಲಿ ತೇಲಿ ಬಂದಿರುವ ದೊಡ್ಡ ಗಾತ್ರದ ಮೀನು ಹಿಡಿಯುತ್ತಿರುವ ಬೆಸ್ತರು ಭಾರೀ ವ್ಯಾಪಾರ ನಡೆಸುತ್ತಿದ್ದಾರೆ.
ಹಲವರು ಪೊಲೀಸ್ ಕಣ್ಗಾವಲು ತಪ್ಪಿಸಿ ನದಿಯಲ್ಲಿ ತೇಲಿಬರುವ ಬೃಹತ್ ಗಾತ್ರದ ಮರದ ದಿಮ್ಮಿಗಳು ತೆಂಗಿನಕಾಯಿಗಳನ್ನು ತೆಗೆದುಕೊಳ್ಳಲು ಹರ ಸಾಹಸಪಟ್ಟರು. ಇನ್ನು ತೊಂಡಾಳು, ಅಗ್ರಹಾರ ಸುತ್ತಮುತ್ತಲಿನ ಗ್ರಾಮದ ಹೊಳೆಯಂಚಿನ ರೈತರ ಜಮೀನಿಗೆ ಭಾರೀ ಗಾತ್ರದ ಮರಗಳು ಪ್ರವಾಹದಲ್ಲಿ ತೇಲಿ ಬಂದಿವೆ.