ನಟಿ ಗೌತಮಿ “ಬಿಗ್‌ಬಾಸ್’ ಮನೆಯಿಂದ ಹೊರಬಂದಿದ್ದೇ ತಡ, ಒಂದಷ್ಟು ಅವಕಾಶಗಳು ಹುಡುಕಿ ಬಂದಿದ್ದು ಸುಳ್ಳಲ್ಲ. ಬಿಗ್‌ಬಾಸ್ ಮನೆಗೆ ಹೋಗಿಬಂದ ಗೌತಮಿ, ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದುಂಟು. ಆದರೆ, ಕೆಲ ಚಿತ್ರಗಳನ್ನು ಹೊರತುಪಡಿಸಿದರೆ, ಗೌತಮಿ ಮತ್ತೆಲ್ಲೂ ಸುದ್ದಿಯಾಗಲಿಲ್ಲ. ಈಗ ಗೌತಮಿ “ಪೂರ್ಣ ಸತ್ಯ’ ಹೇಳ್ತೀನಿ ಅಂತ ಬಂದಿದ್ದಾರೆ.
ಅಂದರೆ, ಗೌತಮಿ “ಪೂರ್ಣ ಸತ್ಯ’ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಹೌದು, ಈ ಹಿಂದೆ ನಟ ಯತಿರಾಜ್ ಅವರು ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಅವರ ಚೊಚ್ಚಲ ಚಿತ್ರಕ್ಕೆ “ಪೂರ್ಣ ಸತ್ಯ’ ಎಂದು ನಾಮಕರಣ ಮಾಡಿದ್ದಾರೆ ಅಂತ ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಆಗ ಆ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿರಲಿಲ್ಲ. ಈಗ “ಪೂರ್ಣ ಸತ್ಯ’ ಚಿತ್ರದಲ್ಲಿ ಗೌತಮಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಕನ್ನಡದಲ್ಲಿ 135 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ಯತಿರಾಜ್, ಈ ಹಿಂದೆ ನಿರ್ದೇಶನ ಮಾಡುವುದಾಗಿ ಹೇಳಿದ್ದರು. ಆದರೆ, ಅದಕ್ಕೆ ಕಾಲ ಕೂಡಿಬಂದಿರಲಿಲ್ಲ. ಸೋಮವಾರ (ಇಂದು) “ಪೂರ್ಣ ಸತ್ಯ’ ಚಿತ್ರಕ್ಕೆ ಚಾಲನೆ ಸಿಗುತ್ತಿದೆ. ಯತಿರಾಜ್‌ಗೆ ಇದು ಮೊದಲ ಚಿತ್ರವಾಗಿದ್ದರೂ, ಅವರು ಈ ಹಿಂದೆ ನೆನಪಿರಲಿ ಪ್ರೇಮ್ ಅಭಿನಯದ “ಫೇರ್ ಅಂಡ್ ಲವ್ಲಿ’ ಚಿತ್ರಕ್ಕೆ ಕಥೆ ಬರೆದಿದ್ದರು.
ಒಂದಷ್ಟು ಕಥೆಗಳನ್ನು ಮಾಡಿಟ್ಟುಕೊಂಡಿದ್ದ ಯತಿ ಈಗ “ಪೂರ್ಣ ಸತ್ಯ’ ಚಿತ್ರಕ್ಕೂ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಹೊಣೆ ಹೊತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆಗೆ “ದಿ ಮಿರರ್’ ಎಂಬ ಅಡಿಬರಹವೂ ಇದೆ. ಇಲ್ಲಿ ಯತಿರಾಜ್ ನಿರ್ದೇಶನದ ಜತೆಯಲ್ಲಿ ಲೀಡ್ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ, ನಟ, ನಿರ್ದೇಶಕ ಎಂ.ಡಿ.ಕೌಶಿಕ್ ಅವರಿಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
“ಪೂರ್ಣಸತ್ಯ’ ಸಮಾಗಮ ಕ್ರಿಯೇಷನ್ಸ್ ಬ್ಯಾನರ್‌ನಡಿ ತಯರಾಗುತ್ತಿದೆ. “ಇದೊಂದು ಹೊಸಬಗೆಯ ಚಿತ್ರವಾಗಿದ್ದು, ರೆಗ್ಯುಲರ್ ಪ್ಯಾಟ್ರನ್ ಸಿನಿಮಾಗಳಿಗಿಂತಲೂ ಹೊಸತನದಿಂದ ಕೂಡಿರುತ್ತೆ. ಇನ್ನು “ಪೂರ್ಣ ಸತ್ಯ’ ಕಥೆ ಬಗ್ಗೆ ಹೇಳುವುದಾದರೆ, ಇಲ್ಲಿ ಮೂರು ಪ್ರಮುಖ ಪಾತ್ರಗಳೇ ಹೈಲೈಟ್. ನಮ್ಮನ್ನು ನಾವು ನೋಡಿಕೊಳ್ಳುವ ಪ್ರಯತ್ನ ಇಲ್ಲಿದೆ. ಅವರು ಸರಿ ಇಲ್ಲ, ಇವರು ಸರಿ ಇದ್ದಾರೆ, ನಾವೇ ಶ್ರೇಷ್ಠ ಅಂತ ಅಂದುಕೊಳ್ಳುತ್ತೇವೆ.
ನಮ್ಮ ಅನುಕೂಲಕ್ಕೆ ತಕ್ಕಂತೆಯೇ ನಾವು ಬದಲಾಗುತ್ತೀವಿ. ಆಸ್ಪತ್ರೆಗೆ ಹೋದರೆ, ಬದುಕಿನ ಬಗ್ಗೆ ಕಾಳಜಿ ಬರುತ್ತೆ, ಸ್ಮಶಾನ ಕಡೆ ಹೋದರೆ, ಬದುಕು ಇಷ್ಟೇನಾ ಎಂಬ ವೈರಾಗ್ಯ ಬರುತ್ತೆ, ವಾಸ್ತವತೆಯ ಮಗ್ಗಲು ಬದಲಿಸಿದಾಗ ಮಾತ್ರ ಸತ್ಯದ ಅರಿವಾಗುತ್ತೆ. ಇವೆಲ್ಲವೂ ಈ ಚಿತ್ರದಲ್ಲಿರುತ್ತೆ. ಈ ವಿಷಯ ಇಟ್ಟುಕೊಂಡು ಹೊಸದೇನನ್ನೋ ಹೇಳುವ ಪ್ರಯತ್ನ ಮಾಡುತ್ತೇನೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಯತಿರಾಜ್.
ಚಿತ್ರಕ್ಕೆ ಯತಿರಾಜ ಜೊತೆಗೆ ಶ್ರೀಕಾಂತ್ ಎಂಬುವವರು ಮಾತುಗಳನ್ನು ಪೋಣಿಸುತ್ತಿದ್ದಾರೆ. ಅರುಣ್ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿ.ಎಲ್.ಬಾಬು ಕ್ಯಾಮೆರಾ ಹಿಡಿದರೆ, ಮಾರುತಿ ಮೀರಜ್‌ಕರ್ ಎರಡು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ತೀರ್ಥಹಳ್ಳಿ, ಸಕಲೇಶಪುರ ಸುತ್ತಮುತ್ತ ಸುಮಾರು 25 ದಿನಗಳ ಕಾಲ ಚಿತ್ರೀಕರಿಸುವ ಯೋಜನೆ ನಿರ್ದೇಶಕರಿಗಿದೆ.