Advertisement

ಜನರ ಮನಃಸ್ಥಿತಿ ಬದಲಿಸಲು ಐಪಿಎಲ್‌ ಅಗತ್ಯ: ಗಂಭೀರ್‌

08:08 AM May 06, 2020 | Sriram |

ಹೊಸದಿಲ್ಲಿ: ಈ ಬಾರಿಯ ಐಪಿಎಲ್‌ ಪಂದ್ಯಾವಳಿ ಇನ್ನೂ ಅನಿಶ್ಚಿತತೆಯಲ್ಲೇ ಇದೆ. ಕ್ರಿಕೆಟ್‌ ಅಭಿ ಮಾನಿಗಳೇನೋ ಈ ಕೂಟ ನಡೆದೀತೆಂಬ ವಿಶ್ವಾಸದಲ್ಲಿದ್ದಾರೆ. ಆದರೆ ಕೋವಿಡ್‌-19 ಇದಕ್ಕೆ ಆಸ್ಪದ ಕೊಡುವುದು ಅನುಮಾನ ಎಂಬುದು ಸದ್ಯದ ಸ್ಥಿತಿ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್‌ ಗಂಭೀರ್‌, “ದೇಶದ ಜನರ ಮನಸ್ಥಿತಿಯನ್ನು ಬದಲಿಸಲು ಐಪಿಎಲ್‌ ಕೂಟವನ್ನು ನಡೆಸುವುದು ಉತ್ತಮ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

“ಓರ್ವ ರಾಜಕಾರಣಿಯಾಗಿ ಹೇಳುವುದಾದರೆ ನನಗೆ ದೇಶವಾಸಿಗಳ ರಕ್ಷಣೆ ಅತೀ ಮುಖ್ಯ. ಆದರೆ ಜನರ ಮನಸ್ಥಿತಿಯನ್ನು ಕೋವಿಡ್‌-19ದಿಂದ ವಿಮುಖವಾಗಿಸುವ ನಿಟ್ಟಿನಲ್ಲಿ ಐಪಿಎಲ್‌ ಪಂದ್ಯಾವಳಿಯನ್ನು ನಡೆ ಸುವುದು ಒಳ್ಳೆಯದು…’ ಎಂದಿದ್ದಾರೆ ಗೌತಮ್‌ ಗಂಭೀರ್‌.

“ಇದು ತಂಡವೊಂದರ ಸೋಲು- ಗೆಲುವಿನ ಪ್ರಶ್ನೆಯಲ್ಲ. ದೇಶದ ಜನರ ಮನಸ್ಥಿತಿಯನ್ನು ಬದಲಿಸಬೇಕಾದ ತುರ್ತು ಅಗತ್ಯವಿದೆ. ಇದಕ್ಕೆ ಐಪಿಎಲ್‌ ಆಯೋಜನೆ ಸಹಕಾರಿಯಾದೀತು ಎಂಬುದು ನನ್ನ ಭಾವನೆ’ ಎಂಬುದಾಗಿ ಗೌತಮ್‌ ಗಂಭೀರ್‌ “ಸ್ಪೊರ್ಟ್ಸ್ ಟಾಕ್‌’ ಕಾರ್ಯಕ್ರಮದ ವೇಳೆ ಹೇಳಿದರು.

ದೇಶಕ್ಕೊಂದು ಸ್ಫೂರ್ತಿ
“ನಿಮಗೆ ಐಪಿಎಲ್‌ ಕೂಟವೇ ಮುಖ್ಯ ಎಂದು ಬಹಳಷ್ಟು ಮಂದಿ ಹೇಳುತ್ತಾರೆಂದು ಗೊತ್ತು. ಆದರೆ ವೈಯಕ್ತಿಕವಾಗಿ ಹೇಳುವುದಾರದೆ, ಈ ವರ್ಷ ಐಪಿಎಲ್‌ ನಡೆದದ್ದೇ ಆದಲ್ಲಿ ಯಾವ ಫ್ರಾಂಚೈಸಿ ಕೂಡ ಸೋಲು-ಗೆಲುವಿನ ಬಗ್ಗೆ ಚಿಂತಿಸುವುದಿಲ್ಲ. ಇವರೆಲ್ಲ ದೇಶಕ್ಕೊಂದು ಸ್ಫೂರ್ತಿ ಕೊಡಲಿದ್ದಾರೆ…’ ಎಂದರು.

ವಾತಾವರಣ ಬದಲಾದೀತು
“ಸದ್ಯ ಜಗತ್ತು ಋಣಾತ್ಮಕವಾಗಿ ಗೋಚರಿಸುತ್ತಿದೆ. ಇಂಥ ಸ್ಥಿತಿಯಲ್ಲಿ ಜನರು ಐಪಿಎಲ್‌ ವೀಕ್ಷಿಸಿದರೆ ವಾತಾವರಣ ಬದಲಾಗಬಹುದು. ಹೀಗಾಗಿ ಕಳೆದ 12 ವರ್ಷಗಳ ಐಪಿಎಲ್‌ಗಿಂತ ಇದು ಬಹಳ ವಿಶೇಷವೆನಿಸಲಿದೆ. ವಿದೇಶಿ ಆಟಗಾರರ ಗೈರಲ್ಲಿ, ಖಾಲಿ ಸ್ಟೇಡಿಯಂಗಳಲ್ಲಿ ಪಂದ್ಯ ನಡೆದರೂ ಚಿಂತೆ ಇಲ್ಲ. ಏನೇ ಆದರೂ ದೇಶವೇ ಗೆಲ್ಲುತ್ತದೆ’ ಎಂದು ಗೌತಮ್‌ ಗಂಭೀರ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪರ ಬ್ಯಾಟ್‌ ಬೀಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next