ಹೊಸದಿಲ್ಲಿ: ಯುವ ಆಟಗಾರರು ತಂಡದ ನಾಯಕ ಸ್ಥಾನದಲ್ಲಿರಬೇಕು ಎಂಬ ಕಾರಣಕ್ಕೆ ದಿಲ್ಲಿ ರಣಜಿ ತಂಡದ ಹಿರಿಯ ಆಟಗಾರ ಗೌತಮ್ ಗಂಭೀರ್ ತಮ್ಮ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ದಿಲ್ಲಿ ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ನ (ಡಿಡಿಸಿಎ) ಅಧಿಕಾರಿಗಳು ಇದನ್ನು ತಿಳಿಸಿದ್ದಾರೆ.
“ಗೌತಮ್ ಗಂಭೀರ್ ಪ್ರಧಾನ ಆಯ್ಕೆರ ಅಮಿತ್ ಭಂಡಾರಿ ಅವರನ್ನು ಭೇಟಿಯಾಗಿ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದರು. ತಂಡವನ್ನು ಯುವ ಆಟಗಾರರು ಮುನ್ನಡೆಸಬೇಕೆಂಬುದು ಅವರ ಆಶಯವಾಗಿದೆ. ನಿತೀಶ್ ರಾಣ ನೂತನ ನಾಯಕನಾಗಿ ಆಯ್ಕೆ ಆಗಿದ್ದು, ಧ್ರುವ್ ಶೋರಿ ಉಪನಾಯಕನಾಗಿದ್ದಾರೆ’ ಎಂದು ಡಿಡಿಸಿಎ ತಿಳಿಸಿದೆ.
ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್ ಆಗಿರುವ ರಾಣ 24 ಪ್ರಥಮ ದರ್ಜೆ ಪಂದ್ಯಗಳಿಂದ 46.26 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಶೋರಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದು, 21 ಪಂದ್ಯಗಳನ್ನು ಆಡಿದ್ದಾರೆ.
“ನಾಯಕತ್ವವನ್ನು ಯುವ ಆಟಗಾರರಿಗೆ ಹಸ್ತಾತರಿಸುವ ಸಮಯ ಬಂದಿದೆ. ಡಿಡಿಸಿಎ ಆಯ್ಕೆಗಾರರಲ್ಲಿ ದಿಲ್ಲಿ ತಂಡದ ನಾಯಕ ಸ್ಥಾನಕ್ಕೆ ನನ್ನನ್ನು ಗಣನೆಗೆ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ಪಂದ್ಯ ಜಯಿಸಲು ಹೊಸ ನಾಯಕನ ಹಿಂದೆ ನಿಂತು ಪ್ರೋತ್ಸಾಹಿಸುತ್ತೇನೆ’ ಎಂದು ಗಂಭೀರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.ದಿಲ್ಲಿ ಪ್ರಸಕ್ತ ಋತುವಿನ ಮೊದಲ ರಣಜಿ ಪಂದ್ಯವನ್ನು ಹಿಮಾಚಲ ಪ್ರದೇಶ ವಿರುದ್ಧ ನ. 12ರಿಂದ ತವರಿನ “ಫಿರೋಜ್ ಶಾ ಕೋಟ್ಲಾ’ದಲ್ಲಿ ಆಡಲಿದೆ.