ಪಲ್ಲೆಕೆಲೆ: ಭಾರತ ಪುರುಷರ ಕ್ರಿಕೆಟ್ ತಂಡವು ಶನಿವಾರದಿಂದ ಶ್ರೀಲಂಕಾ (Sri Lanka) ವಿರುದ್ದದ ಟಿ20 ಸರಣಿಗೆ ಸಜ್ಜಾಗುತ್ತಿದೆ. ಮೂರು ಪಂದ್ಯಗಳ ಟಿ20 ಸರಣಿಯು ಪಲ್ಲೆಕೆಲೆಯಲ್ಲಿ ನಡೆಯಲಿದೆ. ಭಾರತವು ಹೊಸ ನಾಯಕ ಮತ್ತು ಹೊಸ ಕೋಚ್ ನೊಂದಿಗೆ ನವ ಹುರುಪಿನಲ್ಲಿ ಆಡಲಿಳಿಯಲಿದೆ.
ನೂತನ ಕೋಚ್ ಗೌತಮ್ ಗಂಭೀರ್ (Gautam Gambhir) ಅವರಿಗೆ ಇದು ಮೊದಲ ಸರಣಿ. ಐಪಿಎಲ್ ನಲ್ಲಿ ನಾಯಕನಾಗಿ ಹಲವು ಪ್ರಯೋಗಗಳನ್ನು ಮಾಡಿ ಯಶಸ್ಸು ಸಾಧಿಸಿದ್ದ ಗೌತಮ್ ಇದೀಗ ಟೀಂ ಇಂಡಿಯಾದಲ್ಲೂ ಪ್ರಯೋಗಕ್ಕೆ ಮುಂದಾಗಿದ್ದಾರೆ. ಐಪಿಎಲ್ ನಲ್ಲಿ ಬೌಲರ್ ಆಗಿದ್ದ ಸುನಿಲ್ ನರೈನ್ ಅವರನ್ನು ಆರಂಭಿಕ ಆಟಗಾರನನ್ನಾಗಿ ಆಡಿಸಿ ಭರ್ಜರಿ ಯಶಸ್ಸು ಕಂಡಿದ್ದರು.
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ವೇಗದ ಬೌಲರ್ ಆಗಿ ತಂಡದಲ್ಲಿ ಐದನೇ ಬೌಲರ್ ಆಗಿ ಮಿಂಚುತ್ತಿದ್ದವರು. ಆದರೆ ಲಂಕಾ ವಿರುದ್ದದ ಟಿ20 ಸರಣಿಯ ಮೊದಲ ಪಂದ್ಯಕ್ಕೂ ಮೊದಲು ಅಭ್ಯಾಸ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಲೆಗ್ ಸ್ಪಿನ್ ಮಾಡುವುದು ಕಂಡು ಬಂತು. ಅಲ್ಲದೆ ಇದೇ ವೇಳೆ ಸೂರ್ಯಕುಮಾರ್ ಯಾದವ್ ಅವರು ವೇಗದ ಬೌಲಿಂಗ್ ಮಾಡುವುದು ಕಂಡು ಬಂದಿದೆ.
ಟಿ20 ವಿಶ್ವಕಪ್ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮಾ ಅವರು ಟಿ20 ಕ್ರಿಕೆಟ್ ಗೆ ರಾಜೀನಾಮೆ ನೀಡಿದ್ದರು. ಅಲ್ಲಿಯವರೆಗೆ ಉಪ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರೇ ಮುಂದಿನ ನಾಯಕ ಎನ್ನಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಸ್ಪೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ಮುಂದಿನ ನಾಯಕರನ್ನಾಗಿ ನೇಮಿಸಲಾಗಿದೆ.
ಶ್ರೀಲಂಕಾ ತಂಡದಲ್ಲಿಯೂ ಬದಲಾವಣೆಯಾಗಿದೆ. ನಾಯಕರಾಗಿದ್ದ ವಾನಿಂದು ಹಸರಂಗ ಅವರು ರಾಜೀನಾಮೆ ನೀಡಿದ ಕಾರಣಕ್ಕೆ ಮಿಡಲ್ ಆರ್ಡರ್ ಬ್ಯಾಟರ್ ಚರಿತ್ ಅಸಲಂಕಾ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ.