ಪಿರಿಯಾಪಟ್ಟಣ: ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಒಂದು ತಿಂಗಳ ಕಾಲ ಮಾತ್ರ ಪೂಜಿಸಲ್ಪಡುವ ಗೌರಿದೇವಿ ಮೂರ್ತಿಯನ್ನು ಬುಧವಾರ ಮಧ್ಯಾಹ್ನ ಕೆಲ್ಲೂರು ಗ್ರಾಮದ ಅಮ್ಮನಕಟ್ಟೆ ಕೆರೆಯಲ್ಲಿ ಅದ್ಧೂರಿಯಾಗಿ ವಿಸರ್ಜನೆ ಮಾಡಲಾಯಿತು.
ವಿಜೃಂಭಣೆಯ ಮೆರವಣಿಗೆ: ಮಹಾಲಯ ಅಮಾವಾಸ್ಯೆಯಂದು ಮಂಗಳವಾರ ರಾತ್ರಿ ದೇವಾಲಯದಿಂದ ಗೌರಿ ಮೂರ್ತಿಯನ್ನು ಹೊರತಂದು ಉಯ್ನಾಲೆ ಉತ್ಸವ ನಡೆಸಲಾಯಿತು. ಈ ವೇಳೆ ನೂರಾರು ಮಂದಿ ಮಹಿಳಾ ಭಕ್ತರು ಬಾಗಿನ ಅರ್ಪಿಸಿದರು. ತದ ನಂತರ ಸಂಪೂರ್ಣ ಹೂಗಳಿಂದ ಅಲಕೃತಗೊಂಡಿದ್ದ ತೇರಿನಲ್ಲಿ ಪ್ರತಿಷ್ಠಾಪಿಸಿ ರಾತಿ ಇಡೀ ಊರ ತುಂಬೆಲ್ಲಾ ಮೆರವಣಿಗೆ ನಡೆಸಲಾಯಿತು. ಇನ್ನು ಸಕಲೇಶಪುರ ಹಿಟ್ಸ್ ಕಲಾತಂಡದವರು ರಸಸಂಜೆ ನಡೆಸಿದರು. ದೇವರ ಭಕ್ತಿಗೀತೆ, ಚಲನಚಿತ್ರಗೀತೆ, ನೃತ್ಯ ಪ್ರದರ್ಶನ ಹೀಗೆ ಸಾವಿರಾರು ಮಂದಿ ರಸಮಂಜರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ದಾಸೋಹಕ್ಕೆ ತೆರೆ: ವರ್ಷದಲ್ಲಿ ಒಂದು ತಿಂಗಳು ಮಾತ್ರ ತೆರೆದಿರುವ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಕಳೆದ 2 ವರ್ಷಗಳಿಂದ ದಾಸೋಹ ನೀಡಲಾಗುತ್ತಿದ್ದು. ಈ ಬಾರಿ ಬೆಳಗಿನ ತಿಂಡಿ ಮಧ್ಯಾಹ್ನದ ಊಟ ನೀಡಲಾಯಿತು. ಹೀಗೆ ಒಂದು ತಿಂಗಳು ಗ್ರಾಮದವರೆಲ್ಲಾ ಸೇರಿ ನಡೆಸಿದ ದಾಸೋಹಕ್ಕೆ ತೆರೆಬಿದ್ದಿತು.
ಗೌರಿದೇವಿ ವಿಸರ್ಜನೆ: ರಾತ್ರಿ ಪೂರ್ತಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಗೌರಿದೇವಿಯನ್ನು ಊರಿನ ಅಮ್ಮನ ಕಟ್ಟೆ ಬಳಿ ತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಕೆರೆಗೆ ವಿಸರ್ಜನೆ ಮಾಡಲಾಯಿತು. ಕಳೆದ 3ವರ್ಷದಿಂದ ಮಳೆಯಾದ ಕಾರಣ ಕರಡಿಲಕ್ಕನ ಕೆರೆ ಯೋಜನೆಯಿಂದ ನೀರು ತುಂಬಿಸಲಾಗುತ್ತಿತ್ತು. ಈಬಾರಿ ಉತ್ತಮ ಮಳೆಯಾದ ಕಾರಣ ಕೆರೆಯಲ್ಲಿ ನೀರು ತುಂಬಿರುವುದು ಜನರಲ್ಲಿ ಸಂತೋಷ ಮೂಡಿಸಿತ್ತು. ಜಾತ್ರಾ ಮಹೋತ್ಸವದಲ್ಲಿ ಸರ್ಕಲ್‌ಇನ್ಸ್‌ಪೆಕ್ಟರ್ ಎಚ್.ಎನ್.ಸಿದ್ದಯ್ಯ ನೇತೃತ್ವದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಒದಗಿಸಲಾಗಿತ್ತು.
ಕಣ್ಮನ ಸೆಳೆದ ಜಾನಪದ ಕಲಾತಂಡಗಳು: ಗೌರಿದೇವಿ ವಿಸರ್ಜನೆ ಮೆರವಣಿಗೆಯಲ್ಲಿ ಜನಪದ ಕಲಾತಂಡಗಳಾದ ನಂದಿಧ್ವಜ ಕುಣಿತ, ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಬೀಸುಕಂಸಾಳೆ, ತಮಟೆವಾದ್ಯ, ಪೂಜಾಕುಣಿತ, ಮಂಗಳವಾದ್ಯ ಸೇರಿದಂತೆ ವಿವಿಧ ಪ್ರಕಾರದ ಜಾನಪದ ಕಲಾತಂಡಗಳು ಭಾಗವಹಿಸಿದ್ದು ಮೆರವಣಿಗೆಗೆ ಮೆರಗು ತಂದವು. ಈ ವೇಳೆ ಸಿಡಿಮದ್ದುಗಳ ಪ್ರದರ್ಶನ ನೊಡುಗರ ಮೈನವಿರೇಳಿಸಿತು.