ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಒಪ್ಪಿಕೊಳ್ಳಲು ಕುಟುಂಬದವರಿಗೆ 25 ಲಕ್ಷ ರೂ. ನೀಡುತ್ತೇವೆ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ಎಸ್‌ಐಟಿ ಅಧಿಕಾರಿಗಳ ವಿರುದ್ಧ ಆರೋಪಿ ಪರಶುರಾಮ್ ವಾಗ್ಮೋರೆ ಗಂಭೀರ ಆರೋಪ ಮಾಡಿದ್ದಾನೆ. ಪ್ರಕರಣ ಸಂಬಂಧ ಶನಿವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಕರೆತಂದಿದ್ದ ವೇಳೆ ಪರುಶುರಾಮ್ ವಾಗ್ಮೋರೆ ಮಾಧ್ಯಮಗಳ ಮುಂದೆ ಈ ಆರೋಪ ಮಾಡಿದ್ದಾನೆ.
ನ್ಯಾಯಾಲಯದಿಂದ ಕರೆದೊಯ್ಯುವ ವೇಳೆ ಪೊಲೀಸ್ ವಾಹನದಲ್ಲಿ ಕುಳಿತ್ತಿದ್ದ ವಾಗ್ಮೋರೆ ಪ್ರತಿಕ್ರಿಯಿಸಿ, ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ಟಾರ್ಗೆಟ್ ಮಾಡಿ ಕರೆ ತಂದು ಕೇಸ್‌ನಲ್ಲಿ ಸಿಲುಕಿಸಲಾಗುತ್ತಿದೆ ಎಂದು ದೂರಿದ್ದಾನೆ.
ಎಸ್‌ಐಟಿ ಅಧಿಕಾರಿಗಳು ಹೊಡೆಯುವವರು ಕೆಲವರಾದರೆ, ಇನ್ನೂ ಕೆಲವರು ನಿಮ್ಮ ಕುಟುಂಬಕ್ಕೆ 25 ಲಕ್ಷ ರೂ. 30 ಲಕ್ಷ ರೂ. ನೀಡುತ್ತೇವೆ, ಒಪ್ಪಿಕೊಳ್ಳಿ ಎಂದು ಒತ್ತಡ ಹೇರುತ್ತಿದ್ದಾರೆ. ಮತ್ತೂಬ್ಬರು ನಿಮ್ಮ ಅಣ್ಣ, ತಮ್ಮ, ಸ್ನೇಹಿತರನ್ನು ಕರೆತಂದು ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ಹೆದರಿಸಿ ಟಾರ್ಚ್‌ರ್ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾನೆ.
ಜತೆಗೆ, ಖಾಲಿ ಪತ್ರಗಳ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ. ಅವರೇ ಹೇಳಿಕೊಟ್ಟ ಹಾಗೆ ಹೇಳಿಸಿಕೊಂಡು ವಿಡಿಯೋ ಮಾಡಿಕೊಂಡಿದ್ದಾರೆ. ಬಂಧಿತರಾಗಿರುವ ಇತರರನ್ನು ನಾನು ನೋಡಿಯೇ ಇರಲಿಲ್ಲ. ಇಲ್ಲಿಗೆ ಬಂದ ಮೇಲೆ ನೋಡಿದ್ದೇನೆ. ಏನು ನಡೀತಿದೆ ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.m ಸೆ.5ರಂದು ನಡೆದ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಕಾಶ್ ವಾಗ್ಮೋರೆಯೇ ಗೌರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂಬ ಆಪಾದಿಸಲಾಗಿದೆ.