ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ವಿಶೇಷ ನ್ಯಾಯಾಲಯಕ್ಕೆ 9,235 ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಪ್ರಕರಣದಲ್ಲಿ ಬಂಧನಕ್ಕೊಳಗಾದ ಕೆಲ ಆರೋಪಿಗಳು ಗೋವಾ ಮೂಲದ ಹಿಂದೂ ಪರ ಸಂಘಟನೆ ಜತೆ ನಿಕಟ ಸಂಪರ್ಕ ಹೊಂದಿರುವ ಮಾಹಿತಿ ಸಿಕ್ಕಿದೆ. ಹಾಗೆಯೇ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರಿಯಲಿದೆ ಎಂದು ಎಸ್‌ಐಟಿ ಅಧಿಕಾರಿಗಳು ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಪ್ರಕರಣ ಸಂಬಂಧ 14 ತಿಂಗಳ ಸುದೀರ್ಘ ತನಿಖೆ ನಡೆಸಿದ ವಿಶೇಷ ತನಿಖಾ ತಂಡ, 450ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಿ 18 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಪೈಕಿ 16 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.
ಪ್ರಕರಣದಲ್ಲಿ ಮಹಾರಾಷ್ಟ್ರದ ಅಮೋಲ್ ಕಾಳೆ, ಅಮಿತ್ ದೇಗ್ವೇಕರ್, ವಿಜಯಪುರದ ಮನೋಹರ್ ದುಂಡಪ್ಪ ಯಡವೆ, ಪರಶುರಾಮ್ ವಾಘೊ¾àರೆ, ಶಿವಮೊಗ್ಗ ಶಿಕಾರಿಪುರ ಮೂಲದ ಪ್ರವೀಣ್ ಕುಮಾರ್ ಅಲಿಯಾಸ್ ಸುಜಿತ್ ಕುಮಾರ್, ಮಡಿಕೇರಿಯ ರಾಜೇಶ್ ಬಂಗೇರಾ, ಬೆಂಗಳೂರಿನ ಮೋಹನ್, ಭರತ್ ಕುರ್ನೆ, ಗಣೇಶ್ ಮಿಸ್ಕಿನ್, ಅಮಿತ್ ಬುದ್ದಿ, ಬೆಂಗಳೂರಿನ ಸುರೇಶ್ ಕುಮಾರ್, ಬಿ. ಶ್ರೀಕಾಂತ್, ವಿ. ಸೂರ್ಯವಂಶಿ, ಸುಧನ್ವಾ, ಕೆ. ಶರತ್, ಮಂಡ್ಯದ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಎಂಬುವರನ್ನು ಬಂಧಿಸಲಾಗಿದೆ. ಇತರೆ ಇಬ್ಬರು ಆರೋಪಿಗಳಾದ ಮಹಾರಾಷ್ಟ್ರದ ನಿಹಾಲ್ ಅಲಿಯಾಸ್ ದಾದಾ ಮತ್ತು ಮತ್ತೂಬ್ಬ ಆರೋಪಿ ತಲೆಮರೆಸಿಕೊಂಡಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಪ್ರಕರಣದ ತನಿಖೆ ಕೈಗೊಂಡಿದ್ದ ಎಸ್‌ಐಟಿ 2018ರ ಮೇ 30ರಂದು 650 ಪುಟಗಳ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
2017ರ ಸೆ.5ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ರಾಜರಾಜೇಶ್ವರಿನಗರದ ಅವರ ಮನೆ ಆವರಣದಲ್ಲೇ ಗುಂಡಿನ ದಾಳಿ ನಡೆಸಿ ಹತ್ಯೆಗೈಯಲಾಗಿತ್ತು. ರಾತ್ರಿ 8.15ರ ಸುಮಾರಿಗೆ ದ್ವಿಚಕ್ರ ವಾಹನವೊಂದರಲ್ಲಿ ಬಂದ ಇಬ್ಬರು ಹೆಲ್ಮೆಟ್‌ಧಾರಿಗಳು ಗೌರಿ ಲಂಕೇಶ್ ಅವರ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿ ಹತ್ಯೆಗೈದು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದರು. ಬಳಿಕ ಪ್ರಕರಣದಲ್ಲಿ ಹಿಂದೂಪರ ಸಂಘಟನೆ ಕೈವಾಡ ಶಂಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಈ ತಂಡ ಸುದೀರ್ಘ 14 ತಿಂಗಳ ಕಾಲ ತನಿಖೆ ನಡೆಸಿ ತಾಂತ್ರಿಕ ಹಾಗೂ ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ 16 ಮಂದಿ ಆರೋಪಿಗಳನ್ನು ಬಂಧಿಸಿದೆ.
ಪಿಸ್ತೂಲ್ ರಹಸ್ಯ ನಿಗೂಢ
ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ ಅಧಿಕಾರಿಗಳಿಗೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಪತ್ತೆ ಹಚ್ಚುವುದು ದೊಡ್ಡ ತಲೆನೋವಾಗಿದೆ. ಮಹಾರಾಷ್ಟ್ರದ ಎಸ್‌ಐಟಿ ಅಧಿಕಾರಿಗಳು ಪ್ರಕರಣವೊಂದರಲ್ಲಿ ವಶಕ್ಕೆ ಪಡೆಯಲಾದ ಪಿಸ್ತೂಲ್‌ಗಳ ಪೈಕಿ ಗೌರಿ ಹತ್ಯೆಗೆ ಬಳಕೆಯಾದ ಪಿಸ್ತೂಲ್ ಕೂಡ ಇದೆ ಎಂದು ಹೇಳಲಾಗಿತ್ತು. ಆದರೆ, ಇದುವರೆಗೂ ಪಿಸ್ತೂಲ್ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಆರೋಪಿಗಳು ಕೂಡ ಈ ವಿಚಾರದಲ್ಲಿ ಗೊಂದಲದ ಹೇಳಿಕೆ ನೀಡುತ್ತಿದ್ದಾರೆಂದು ಎಸ್‌ಐಟಿ ಮೂಲಗಳು ಹೇಳಿವೆ.