Advertisement

ಗೌರಿ ಹತ್ಯೆ ಪ್ರಕರಣ: ದೊರೆಸ್ವಾಮಿ ಹೇಳಿಕೆ ದಾಖಲು

07:31 AM Sep 24, 2017 | Team Udayavani |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರಿಂದ ಎಸ್‌ಐಟಿ ಅಧಿಕಾರಿಗಳು ಶನಿವಾರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

Advertisement

ಶನಿವಾರ ಮಧ್ಯಾಹ್ನ ಜಯನಗರದ 4ನೇ ಬ್ಲಾಕ್‌ ನಲ್ಲಿರುವ ದೊರೆಸ್ವಾಮಿ ಅವರ ಮನೆಗೆ ತೆರಳಿದ ಎಸ್‌ಐಟಿ ಅಧಿಕಾರಿಗಳ ತಂಡ ಒಂದು ಗಂಟೆಗೂ ಅಧಿಕ ಕಾಲ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಂಡಿದೆ. ಪತ್ರಕರ್ತೆ ಗೌರಿ ಯಾವಾಗ ಪರಿಚಯವಾದರು, ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಸಮಿತಿಯಲ್ಲಿ ತಮ್ಮ ಸ್ಥಾನವೇನು? ನಕ್ಸಲರನ್ನು ಬಿಡಿಸುವ ಸಂದರ್ಭ ಹೇಗೆ ಬಂತು? ಗೌರಿ ಹತ್ಯೆ ಕುರಿತು ಯಾರ ಮೇಲಾದರೂ ಅನುಮಾನವಿದೆಯೇ ಎಂಬುದು ಸೇರಿ ಹತ್ತಾರು ಪ್ರಶ್ನೆಗಳನ್ನು ದೊರೆಸ್ವಾಮಿ ಅವರಿಗೆ ಕೇಳಲಾಯಿತು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಇದಕ್ಕೆ ಉತ್ತರಿಸಿರುವ ದೊರೆಸ್ವಾಮಿ ಅವರು, ನಕ್ಸಲ್‌ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯಲ್ಲಿ ನಾನು, ಸುಬ್ಬಯ್ಯ ಹಾಗೂ ಗೌರಿ ಲಂಕೇಶ್‌ ಸದಸ್ಯರಾಗಿದ್ದೇವೆ. ಸರ್ಕಾರ ಮತ್ತು ನಕ್ಸಲರ ನಡುವೆ ಮಧ್ಯವರ್ತಿಗಳಾಗಿ ಸಮಿತಿ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಇದೇ ವೇಳೆ ಈಗಾಗಲೇ ಮುಖ್ಯವಾಹಿನಿಗೆ ಬಂದಿರುವ ನೂರ್‌ ಶ್ರೀಧರ್‌ ಮತ್ತು ಸಿರಿಮನೆ ನಾಗರಾಜ್‌ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಇಬ್ಬರು ಮುಖ್ಯವಾಹಿನಿಗೆ ಬರುವಾಗಲೇ ನಮಗೆ ನಕ್ಸಲ್‌ ಪ್ಯಾಕೇಜ್‌ ಬೇಡ ಎಂದು ಬರೆದು ಕೊಟ್ಟಿದ್ದು, ಸಾರ್ವಜನಿಕ
ಜೀವನದಲ್ಲಿ ಇದ್ದುಕೊಂಡೇ ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗಿ ಸಂಘಟನೆ ಮಾಡುತ್ತೇವೆ ಎಂದಿದ್ದರು. ಬಳಿಕ ಅವರನ್ನು ಚಿಕ್ಕಮಗಳೂರಿನಲ್ಲಿ ಮುಖ್ಯವಾಹಿನಿಗೆ ಕರೆ ತರಲಾಯಿತು ಎಂದು ತಿಳಿಸಿದ್ದಾರೆ.

ಗೌರಿ ಕಳುಹಿಸುತ್ತಿದ್ದರು: ಶರಣಾಗಲು ಬಯಸುವ ಕೆಲ ನಕ್ಸಲರು ಗೌರಿ ಅವರನ್ನು ಸಂಪರ್ಕಿಸುತ್ತಿದ್ದರು. ಬಳಿಕ ಗೌರಿ ಈ ನಕ್ಸಲರ ಬಗ್ಗೆ ತಿಳಿದುಕೊಳ್ಳುವಂತೆ ನನ್ನ ಬಳಿ ಕಳುಹಿಸುತ್ತಿದ್ದರು. ಆಗ ಅವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವ ಪ್ರಯತ್ನವನ್ನು ನಾನು ಮಾಡುತ್ತಿದ್ದೆ. ಬಳಿಕ ಸರ್ಕಾರದ ಮುಖ್ಯಕಾರ್ಯದರ್ಶಿಗಳು ನಡೆಸುತ್ತಿದ್ದ ಸಭೆಯಲ್ಲಿ ಪಾಲ್ಗೊಂಡು ಈ ಬಗ್ಗೆ ಪ್ರಸ್ತಾಪ ಮಾಡಿ, ಪ್ಯಾಕೇಜ್‌ಗಳ ಬಗ್ಗೆ ಚರ್ಚಿಸುತ್ತಿದ್ದೆವು ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಬ್ಬರು ನಕ್ಸಲರು ಬಂದಿದ್ದರು: ವರ್ಷಗಳ ಹಿಂದೆ ಇಬ್ಬರು ವ್ಯಕ್ತಿಗಳು ನಮ್ಮ ಮನೆಗೆ ಬಂದಿದ್ದರು. ಅವರು ನಕ್ಸಲ್‌ ನಾಯಕರಲ್ಲ. ನಕ್ಸಲ್‌ ಪಡೆಯಿಂದ ಮುಖ್ಯವಾಹಿನಿಗೆ ಬರಲು ಇಚ್ಛಿಸಿದವರು. ಅವರು ಬಂದಿದ್ದು ನಕ್ಸಲ್‌ ಪ್ಯಾಕೇಜ್‌ ವಿಚಾರ ಕುರಿತು ಚರ್ಚಿಸಲು ಅಂತ ಮಾತ್ರ ನೆನಪಿದೆ. ಆದರೆ, ಅವರ ಬಗ್ಗೆ ಸಂಪೂರ್ಣ ವಿವರ ಇಲ್ಲ. ಸುಬ್ಬಯ್ಯ ಅವರ ಬಳಿ ಕೇಳಿ ಅವರ್ಯಾರು ಎಂದು ತಿಳಿಸುತ್ತೇನೆ ಎಂದಿದ್ದಾರೆ.

Advertisement

ಗೌರಿ ಹತ್ಯೆಗೈದ ವ್ಯಕ್ತಿಗಳ ಕುರಿತು ಖಚಿತವಾಗಿ ಅನುಮಾನವಿಲ್ಲ. ಸೈದ್ಧಾಂತಿಕ ವಿಚಾರವಾಗಿ ಗೌರಿಯನ್ನು ಹತ್ಯೆಗೈದಿದ್ದಾರೆ. ಇದು ರಾಜಕೀಯ ಅಥವಾ ಸಾಮಾಜಿಕ ಹಗೆತನವಿರಬಹುದು. ಹೀಗಾಗಿ ತೀವ್ರ ರೀತಿಯಲ್ಲಿ ವಿಚಾರಣೆ ನಡೆಸುವಂತೆ ತನಿಖಾಧಿಕಾರಿಗಳಿಗೇ ದೊರೆಸ್ವಾಮಿ ಅವರು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next