ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ 17ನೇ ಆರೋಪಿ ಕೆ.ಟಿ. ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನಿಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ನವೀನ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಿದ ನ್ಯಾ. ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿತು.
ಗೌರಿ ಹತ್ಯೆ ಪ್ರಕರಣ ಸಂಬಂಧ ಕೆ.ಟಿ.ನವೀನ್ ಕುಮಾರ್ ವಿರುದ್ಧ ಎಸ್‌ಐಟಿ ಸಲ್ಲಿಸಿ ರುವ ದೋಷಾ ರೋಪ ಪಟ್ಟಿಯಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಅಲ್ಲದೇ ದೋಷಾರೋಪ ಹಲವು ದೋಷಗಳಿಂದ ಕೂಡಿದೆ. ಆದ್ದರಿಂದ ಆತನಿಗೆ ಜಾಮೀನು ಮಂಜೂರು ಮಾಡಬೇಕು ಎಂದು ವಿಚಾರಣೆ ವೇಳೆ ನವೀನ್ ಪರ ವಕೀಲರು ವಾದ ಮಂಡಿಸಿದ್ದರು.
ಆದರೆ, ನವೀನ್ ಕುಮಾರ್, ಗೌರಿ ಲಂಕೇಶ್ ಹತ್ಯೆ ಮಾಡಲು ಪ್ರಮುಖ ಆರೋಪಿ ಪ್ರವೀಣ್ ಜೊತೆಗೆ ಬೆಂಗಳೂರಿನ ವಿಜಯನಗರ ಪಾರ್ಕ್‌ನಲ್ಲಿ ಯೋಜನೆ ರೂಪಿಸಿದ್ದರು. ಹಾಗೆಯೇ, ಪ್ರೊ.ಭಗವಾನ್ ಹತ್ಯೆಗೂ ಪಿತೂರಿ ನಡೆಸಿದ್ದ. ಈ ಸಂಬಂಧ ಅಗತ್ಯ ಸಾಕ್ಷ್ಯಾಧಾರಗಳು ಸಿಕ್ಕಿದ್ದು, ಅವುಗಳನ್ನು ದೋಷಾರೋಪ ಪಟ್ಟಿ ಯಲ್ಲಿ ಉಲ್ಲೇಖೀಸಲಾಗಿದೆ.
ಅಲ್ಲದೇ ಆತನ ಮೇಲೆ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ ಜಾಮೀನು ನೀಡಬಾರದು ಎಂದು ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು. ಬೆಂಗಳೂರು ಪ್ರಧಾನ ನ್ಯಾಯಪೀಠದಲ್ಲಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾ. ಕೆ.ಎನ್.ಫಣೀಂದ್ರ ಅವರು, ಶುಕ್ರವಾರ ಕಲಬುರಗಿ ನ್ಯಾಯಪೀಠದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತೀರ್ಪು ಪ್ರಕಟಿಸಿದರು.