Advertisement

ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಗೌರಿ ಲಂಕೇಶ್‌ ಹತ್ಯೆಗೆ ತೀವ್ರ ಖಂಡನೆ

08:40 AM Sep 07, 2017 | Team Udayavani |

ನವದೆಹಲಿ: ಹಿರಿಯ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ ಹತ್ಯೆ ಘಟನೆ ದೇಶಾದ್ಯಂತ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಪತ್ರಕರ್ತೆ ಹತ್ಯೆ ಕುರಿತ ವರದಿಗಳಿಗೆ ಅಂತಾರಾಷ್ಟ್ರೀಯ ಮಾಧ್ಯಮಗಳೂ ಮಹತ್ವ ನೀಡಿದ್ದು, ವಾಷಿಂಗ್ಟನ್‌ ಪೋಸ್ಟ್‌, ನ್ಯೂಯಾರ್ಕ್‌ ಟೈಮ್ಸ್‌, ದಿ ಗಾರ್ಡಿಯನ್‌ ಸೇರಿದಂತೆ ಹಲವು ವಿದೇಶಿ ಮಾಧ್ಯಮಗಳು ಈ ಕುರಿತು ವರದಿ ಪ್ರಕಟಿಸಿವೆ.

Advertisement

ಬಹುತೇಕ ವಿದೇಶಿ ಮಾಧ್ಯಮಗಳಲ್ಲಿ ಗೌರಿ ಲಂಕೇಶ್‌ ಅವರನ್ನು “ಬಲಪಂಥೀಯ ಸಿದ್ಧಾಂತಗಳ ವಿರುದ್ಧದ ದಿಟ್ಟ ಧ್ವನಿ’ ಎಂದೇ ಬಿಂಬಿಸಲಾಗಿದೆ. ಗೌರಿ ಲಂಕೇಶ್‌ ಒಬ್ಬ “ನಿರ್ಭಯ ಮತ್ತು ಖಂಡಿತವಾದಿ ಪತ್ರಕರ್ತೆ’ ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌’ ಬಣ್ಣಿಸಿದ್ದು, “ಧಾರ್ಮಿಕ ನಂಬಿಕೆಗಳು ಹಾಗೂ ಹಿಂದುತ್ವ ರಾಜಕೀಯದ ವಿರುದ್ಧ ಮಾತನಾಡುವವರು ಮತ್ತು ಪತ್ರಕರ್ತರನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ,’ ಎಂದು ಹೇಳಿದೆ.

ಇದರೊಂದಿಗೆ ರಾಯಿಟರ್ ಹಾಗೂ ಅಸೋಸಿಯೇಟೆಡ್‌ ಪ್ರಸ್‌ ರೀತಿಯ ಸುದ್ದಿ ಸಂಸ್ಥೆಗಳ ವರದಿಯನ್ನೇ ಬಿಬಿಸಿ ಹಾಗೂ ಬಹುತೇಕ ವಿದೇಶಿ ಮಾಧ್ಯಮಗಳು ಪ್ರಕಟಿಸಿದ್ದು, ಸಿಎಂ ಸಿದ್ದರಾಮಯ್ಯ, ನಗರ ಪೊಲೀಸ್‌ ಆಯುಕ್ತರ ಹೇಳಿಕೆಗಳನ್ನೂ ವರದಿಗಳು ಒಳಗೊಂಡಿವೆ. ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ನಡೆದ ಎಂ.ಎಂ.ಕಲಬುರಗಿ, ಗೋವಿಂದ್‌ ಪಾನ್ಸರೆ, ನರೇಂದ್ರ ದಾಬೋಲ್ಕರ್‌ ಅವರ ಹತ್ಯೆ ಕುರಿತ ಪ್ರಸ್ತಾಪವಿದೆ. ಮುಖ್ಯವಾಗಿ ಭಾರತದಲ್ಲಿ ಇತ್ತೀಚೆಗೆ ಪತ್ರಕರ್ತರ ಹತ್ಯೆಗಳು ಹೆಚ್ಚಾಗಿವೆ ಎಂಬ ಅಂಶದ ಮೇಲೆ ವಿದೇಶಿ ಮಾಧ್ಯಮಗಳು ಬೆಳಕುಚೆಲ್ಲಿವೆ. ಪತ್ರಕರ್ತೆ ಹತ್ಯೆಯನ್ನು ಅಮೆರಿಕ ಕೂಡ ಖಂಡಿಸಿದೆ.

ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ: ಕರ್ನಾಟಕದಲ್ಲಿ ನಡೆದ ಹಿರಿಯ ಪತ್ರಕರ್ತೆ ಹತ್ಯೆ ಖಂಡಿಸಿ ದೇಶದ ಹಲವು ರಾಜ್ಯಗಳಲ್ಲಿ ಪತ್ರಕರ್ತರು, ವಿಚಾರವಾದಿಗಳು ಹಾಗೂ ಬರಹಗಾರರು ರಸ್ತೆಗಿಳಿದು ಪ್ರತಿಭಟಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮುಂಬೈ ಪ್ರಸ್‌ ಕ್ಲಬ್‌ ಮತ್ತು ಬಾಂಬೆ ಪತ್ರಕರ್ತರ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸದಸ್ಯರು ಮೇಣದ ಬತ್ತಿ ಹಿಡಿದು ಅಹೋರಾತ್ರಿ ಧರಣಿ ನಡೆಸುವ ಮೂಲಕ ಹತ್ಯೆಯನ್ನು ಖಂಡಿಸಲಾಯಿತು. ಘಟನೆ ಕುರಿತು ತೆಲಂಗಾಣ, ದೆಹಲಿ ಮತ್ತು ಮೇಘಾಲಯ ಪತ್ರಕರ್ತರ ಒಕ್ಕೂಟಗಳೂ ಪತ್ರಕರ್ತೆಯ ಹತ್ಯೆಯನ್ನು ಖಂಡಿಸಿವೆ.

ಸುಲಿಗೆಕೋರ ಎಂದ ಸನಾತನ ಸಂಸ್ಥೆ
“ಗೌರಿ ಲಂಕೇಶ್‌ “ಸುಲಿಗೆಕೋರ’ ಮನಸ್ಥಿತಿಯವರಾಗಿದ್ದು, ನಕ್ಸಲರೊಂದಿಗೆ ನಂಟು ಹೊಂದಿದ್ದರು ಎಂದು ಸನಾತನ ಸಂಸ್ಥೆಯ ಅಧಿಕೃತ ವಕ್ತಾರ ಚೇತನ್‌ ರಾಜಹನ್ಸ್‌ ಆರೋಪಿಸಿದ್ದಾರೆ. ಅಲ್ಲದೆ ಗೌರಿ ಲಂಕೇಶ್‌ ಅವರ ಹತ್ಯೆಗೂ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ನ್ಯೂಸ್‌ 18ಗೆ ಪ್ರತಿಕ್ರಿಯಿಸಿರುವ ಚೇತನ್‌, “ಕಮ್ಯುನಿಸ್ಟ್‌ ಸಿದ್ಧಾಂತದೊಂದಿಗೆ ತಳುಕುಹಾಕಿಕೊಂಡ ಯಾವುದೇ ವ್ಯಕ್ತಿ ಹತ್ಯೆ ನಡೆದರೂ ದೊಡ್ಡ ಸುದ್ದಿಯಾಗುತ್ತದೆ. ಆದರೆ ಹಿಂದುತ್ವ ಸಿದ್ಧಾಂತದ ಪ್ರತಿಪಾದಕರ ಹತ್ಯೆಯಾದಾಗ ಅದನ್ನು ಯಾರೂ ಪ್ರಶ್ನಿಸುವುದಿಲ್ಲ,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೆ ನಡೆದ ಕಲಬುರಗಿ, ಪಾನ್ಸರೆ, ದಾಬೋಲ್ಕರ್‌ ಹತ್ಯೆ ಪ್ರಕರಣಗಳಲ್ಲಿ ಸನಾತನ ಸಂಸ್ಥೆ ಹೆಸರು ಕೇಳಿಬಂದಿತ್ತು.

Advertisement

ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ:  ಪತ್ರಿಕಾ ಗಿಲ್ಡ್‌
ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯನ್ನು ಖಂಡಿಸಿರುವ ಭಾರತೀಯ ಸಂಪಾದಕರ ಗಿಲ್ಡ್‌, ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದೆ. “ತಮ್ಮ ಸಂಪಾದಕತ್ವದ “ಗೌರಿ ಲಂಕೇಶ್‌ ಪತ್ರಿಕೆ’ ಮೂಲಕ ಪ್ರಮುಖ ವಿಚಾರಗಳ ಕುರಿತು ದಿಟ್ಟತನದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ಗೌರಿ ಹತ್ಯೆ ಆಘಾತಕಾರಿ ಬೆಳವಣಿಗೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ಬೆಳವಣಿಗೆಯಾಗಿದ್ದು, ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನವಾಗಿರುವ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ,’ ಎಂದು ಗಿಲ್ಡ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next