ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿರುವ ನಾಲ್ವರು ಆರೋಪಿಗಳನ್ನು ಒಂದನೇ ಎಸಿಎಂಎಂ ನ್ಯಾಯಾಲಯ ಗುರುವಾರ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತು.
ಕಸ್ಟಡಿ ಅವಧಿ ಮುಗಿದಿದ್ದರಿಂದ ಗುರುವಾರ ಎಸ್‌ಐಟಿ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗಳಾದ ಪ್ರವೀಣ್, ಅಮೋಲ್ ಕಾಳೆ, ಅಮಿತ್ ದೇಗ್ವೇಕರ್ ಮತ್ತು ಮನೋಹರ್ ಯವಡೆಗೆ ಜೂ.27ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತು.
ಆರೋಪಿಗಳ ಪರ ವಕೀಲ ಅಮೃತೇಶ್‌ವಾದ ಮಂಡಿಸಿ, ಆರೋಪಿಗಳನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗಿದೆ. ಪೊಲೀಸರು ಮನಸೋ ಇಚ್ಚೆ ಥಳಿಸಿದ್ದಾರೆ. ಪ್ರಕರಣದ 3ನೇ ಆರೋಪಿ ಅಮಿತ್ ದೇಗ್ವೇಕರ್ ಮೇಲೆ ವಿಚಾರಣೆ ನೆಪದಲ್ಲಿ ಹಲ್ಲೆ ನಡೆಸಿದ್ದಾರೆ. ದೈಹಿಕ ಹಿಂಸೆ ಕೊಟ್ಟು ತಮಗೆ ಬೇಕಾದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹೀಗಾಗಿ ಅವರ ಮೇಲಿನ ಗಾಯಗಳನ್ನು ಕೋರ್ಟ್‌ನಲ್ಲೇ ಪರಿಶೀಲಿ ಸಬೇಕು. ಕೂಡಲೇ ಎಲ್ಲ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸ ಬೇಕು. ಆರೋಪಿಯ ಹೇಳಿಕೆ ಹಾಗೂ ವೈದ್ಯಕೀಯ ವರದಿಯನ್ನಾಧರಿಸಿ ಎಸ್‌ಐಟಿಅಧಿಕಾರಿಗಳ ವಿರುದಟಛಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ವಾದಿಸಿದರು.
ಇದಕ್ಕೆ ಸಮ್ಮತಿಸಿದ ನ್ಯಾಯಾಧೀಶರು, ಕೋರ್ಟ್ ಆವರಣದಲ್ಲೇ ಹಲ್ಲೆ ಕುರಿತು ಆರೋಪಿ ಅಮಿತ್ ದೇಗ್ವೇಕರ್‌ನಿಂದ ಹೇಳಿಕೆ ದಾಖಲಿಸಿಕೊಂಡರು. ಈ ವೇಳೆ, ಆತ, ವಿಚಾರಣೆ ಹೆಸರಿನಲ್ಲಿ ಅಧಿಕಾರಿಗಳು ಕಾಲಿನಿಂದ ಒದ್ದಿದ್ದಾರೆ. ಮುಖದ ಮೇಲೆ ಪಂಚ್ ಕೊಟ್ಟಿದ್ದು, ಎಡ ಕಣ್ಣಿನ ಕೆಳ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ.ಎಡಗಾಲಿಗೆ ಗಾಯವಾಗಿದೆ. ಕಾಲಿನ ಪಾದ ಮತ್ತು ಎಡಗೈ ಹಸ್ತದಲ್ಲಿಯೂ ಗಾಯಗಳಾಗಿವೆ ಎಂದು ಆರೋಪಿಸಿದ.
ಈ ಹೇಳಿಕೆಯಿಂದ ಅಸಮಾಧಾನಗೊಂಡ ನ್ಯಾಯಾಧೀಶರು, ಎಸ್‌ಐಟಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಪ್ರಕರಣ ಸಂಬಂಧ ಆರೋಪಿಯನ್ನು ಬೆಳಗಾವಿಯ ಸ್ಥಳವೊಂದಕ್ಕೆ ಕರೆದೊಯ್ದು ವಾಪಸ್ ಕರೆತರುವಾಗ ಪ್ರಕರಣದ ಮತ್ತೂಬ್ಬ ಆರೋಪಿ ಪರಶುರಾಮ್ ವಾಗ್ಮೋರೆ ಬಂಧನವಾದ ವಿಚಾರ ತಿಳಿಯಿತು. ಇದನ್ನು ಕೇಳಿದ ಆರೋಪಿ ತನ್ನಷ್ಟಕ್ಕೆ ತಾನೇ ತಲೆ ಚಚ್ಚಿಕೊಳ್ಳಲು ಆರಂಭಿಸಿದ್ದ. ಈ ವೇಳೆ ಕೆಲ ಸಣ್ಣ-ಪುಟ್ಟ ಗಾಯಗಳಾಗಿವೆ. ಹಲ್ಲೆ ನಡೆಸಿಲ್ಲ ಎಂದು ಸಮಜಾಯಿಸಿ ನೀಡಿದರು.
ಇದಕ್ಕೆ ಆಕ್ಷೇಪಿಸಿ ವಕೀಲ ಅಮೃತೇಶ್, ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆಗೆ ಅನುಮತಿ ನೀಡುವಂತೆ ಮನವಿ ಮಾಡಿದರು.3ನೇ ಎಸಿಎಂಎಂ ನ್ಯಾಯಾಧೀಶರು ರಜೆಯಿದ್ದು, ಉಸ್ತುವಾರಿಯಾಗಿ ವಿಚಾರಣೆ ನಡೆಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆ ನಡೆಸ ಬೇಕೇ, ಬೇಡವೇ ಎಂಬ ಬಗ್ಗೆ ಶುಕ್ರವಾರ ಮೆಮೋ ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿದರು.