Advertisement

ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ

02:39 PM Sep 08, 2017 | Team Udayavani |

ಬೀದರ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಆಗ್ರಹಿಸಿ ಬಸವ ಸೇವಾ ಪ್ರತಿಷ್ಠಾನ, ನೀಲಮ್ಮನ ಬಳಗ ಮತ್ತು ಲಿಂಗಾಯತ ಬ್ರಿಗೇಡ್‌ ವತಿಯಿಂದ ನಗರದಲ್ಲಿ ಗುರುವಾರ ಮೌನ ಮೆರವಣಿಗೆ ನಡೆಸಲಾಯಿತು.

Advertisement

ಅಕ್ಕ ಅನ್ನಪೂರ್ಣತಾಯಿ ಮತ್ತು ಡಾ| ಗಂಗಾಂಬಿಕೆ ಅಕ್ಕ ನೇತೃತ್ವದಲ್ಲಿ ಬಸವಾನುಯಾಯಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ನಗರದ ಶರಣ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಗೌರಿ ಲಂಕೇಶರನ್ನು ಮನೆಯಲ್ಲೇ ಗುಂಡಿಟ್ಟು ಕೊಲೆ ಮಾಡಿರುವುದು ರಾಜ್ಯವನ್ನೇ ತಲ್ಲಣಗೊಳಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಗೌರಿ ಲಂಕೇಶ ಅವರು ನಿರ್ಭಯ ಮತ್ತು ನಿರ್ಭಿಡೆ ಪತ್ರಕರ್ತರಾಗಿದ್ದರಲ್ಲದೇ ಕೋಮು ಶಕ್ತಿಗಳ ವಿರುದ್ಧದ ಸಮರದಲ್ಲಿ ಮತ್ತು ಮೌಡ್ಯ ಕಂದಾಚಾರಗಳ ವಿರುದ್ಧದ ಆಂದೋಲನದ ಮುಂಚೂಣಿಯಲ್ಲಿದ್ದರು. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲದೆ ಮತ್ತೇನು. 2 ವರ್ಷಗಳ ಹಿಂದೆ ವಿಚಾರವಾದಿ ಡಾ| ಎಂ.ಎಂ. ಕಲಬುರ್ಗಿ ಅವರ
ಮನೆಗೆ ನುಗ್ಗಿ ಇದೇ ರೀತಿ ಕೊಲೆ ಮಾಡಲಾಗಿತ್ತು. ಆದರೆ, ದುಷ್ಕರ್ಮಿಗಳನ್ನು ಸರ್ಕಾರ ಇನ್ನೂ ಪತ್ತೆ ಹಚ್ಚಿಲ್ಲ. 

ದಾಬೋಲ್ಕರ, ಪನ್ಸಾರೆ ಮತ್ತು ಕಲಬುರ್ಗಿ ಅವರ ಕೊಲೆ ಹಿಂದೆಯೇ ಈಗ ಮತ್ತೋರ್ವ ವಿಚಾರವಾದಿ, ಸಾಹಿತಿಯ ಬರ್ಬರ ಹತ್ಯೆ ಆಗಿದೆ. ನಮ್ಮ ನಾಡು ಎತ್ತ ಸಾಗುತ್ತಿದೆ ಎಂದು ಮನವಿಯಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ.

ಬುದ್ಧ, ಬಸವ, ಅಂಬೇಡ್ಕರರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿನುದ್ದಕ್ಕೂ ಪ್ರತಿಪಾದಿಸುತ್ತಾ ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ಗಟ್ಟಿಯಾಗಿ ಪ್ರತಿಭಟಿಸುತ್ತ ಸಮಾನತೆ ನಾಡು ಕಟ್ಟಲು ಶ್ರಮಿಸುತ್ತಿದ್ದವರ ಬರ್ಬರ ಹತ್ಯೆ ಭಾರತೀಯರಲ್ಲೆರಿಗೂ ಅತೀವ ನೋವು ಉಂಟು ಮಾಡಿದೆ. ಈ ಹಿಂದಿನ ವಿಚಾರವಾದಿಗಳ
ಹತ್ಯೆಯ ದುಷ್ಕರ್ಮಿಗಳನ್ನು ಮೊದಲೇ ಬಂಧಿಸಿ ಶಿಕ್ಷಿಸಿದ್ದರೆ ಈ ಕೊಲೆ ನಡೆಯುತ್ತಿರಲಿಲ್ಲ. ಇದು ನಮ್ಮ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆ ಆಗಿದೆ. 

Advertisement

ಸತ್ಯದ ಧ್ವನಿಯನ್ನು ಕೊಲೆಯಿಂದ ದಮನಿಸಲು ಸಾಧ್ಯವೆಂದು ಊಹಿಸಿದರೆ ಅದು ಕೋಮುವಾದಿಗಳ ಮೂರ್ಖತನವಾಗುತ್ತದೆ. ಈ ಕೊಲೆಗಳ ಸರಣಿ ಈಗಲಾದರೂ ನಿಲ್ಲಲ್ಲೆಬೇಕು. ಸರ್ಕಾರ ಹೆಚ್ಚಿನ ಅನಾಹುತಗಳಿಗೆ ಏಡೆಮಾಡಿಕೊಡದೆ ಕೂಡಲೇ ದುಷ್ಕರ್ಮಿಗಳನ್ನು ಮತ್ತು ಕೊಲೆಯ ಹಿಂದಿನ ಸಂಚುಕೋರರನ್ನು ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು. ಈ ಪ್ರಕರಣಗಳನ್ನು ಸಿಬಿಐಗೆ ವಹಿಸಿ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next