ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರಗತಿಪರ ಸಂಘಟನೆಗಳು ಗುರುವಾರ ದೆಹಲಿಯ ಜಂತರ್‌ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿವೆ. ದೆಹಲಿಯ ಮಂಡಿಹೌಸ್‌ನಿಂದ ಆರಂಭವಾಗಲಿರುವ “ಪ್ರಜಾ ತಂತ್ರ ನಡಿಗೆ’ ಘೋಷ ವಾಕ್ಯದೊಂದಿಗೆ ಗುರುವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ಬಳಿಕ ಜಂತರ್‌ಮಂತರ್‌ನಲ್ಲಿ ಪ್ರತಿಭಟನಾ ಧರಣಿ ನಡೆಯಲಿದ್ದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು, ಸುಪ್ರೀಂಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್, ರಾಜ್‌ದೀಪ್ ಸರ್ದೇಸಾಯಿ, ಪಿ. ಸಾಯಿನಾಥ್, ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಸೇರಿ ಸಾಹಿತಿಗಳು, ವಿಶ್ವವಿದ್ಯಾಲಯಗಳ ನಿವೃತ್ತ ಕುಲಪತಿಗಳು
ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕದಿಂದಲೂ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳಿದ್ದಾರೆ. ಜತೆಗೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿ ಉತ್ತರಭಾರತ ರಾಜ್ಯಗಳಲ್ಲಿಯೂ ಕೆಲ ಸಂಘಟನೆಗಳು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.