ಮುಂಬಯಿ : ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವುದನ್ನು ಅಮಾನವೀಯತೆಯ ಪರಮಾವಧಿ ಎಂದು ಶಿವಸೇನೆ ಖಂಡಿಸಿದೆ.
ಸೈದ್ಧಾಂತಿಕವಾಗಿ ಭಿನ್ನ ವಿಚಾರಧಾರೆ ಗಳನ್ನು ಹೊಂದಿದವರನ್ನು ಮೌನವಾಗಿಸುವಲ್ಲಿ ಕೆಲವು ಕಾಣದ ಶಕ್ತಿಗಳು ತೆರೆಯ ಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಮಾನಗಳನ್ನು ಪಕ್ಷ ಇದೇ ವೇಳೆ ವ್ಯಕ್ತಪಡಿಸಿದೆ.
ಗೌರಿ ಅವರ ಚಿಂತನೆಗಳು ಮತ್ತು ವಿಚಾರಧಾರೆಗಳನ್ನು ಪಕ್ಷ ಎಂದೂ ಒಪ್ಪಲಾರದು. ಆದರೆ ದೇಶದ ಗೂಂಡಾಗಳು ಮತ್ತು ಭೂಗತ ಪಾತಕಿಗಳು ಮಹಿಳೆಯೋರ್ವರನ್ನು ಈ ತೆರನಾಗಿ ಹತ್ಯೆಗೈ ಯ್ಯುವುದನ್ನೂ ಶಿವಸೇನೆ ಸಮ್ಮತಿಸದು ಎಂದು ಶಿವಸೇನೆಯ ಮುಖವಾಣಿ “ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಲಾಗಿದೆ.
ತಮ್ಮ ವಿರುದ್ಧದ ದನಿಗಳನ್ನು ಮೌನವಾಗಿಸುವ ಶಕ್ತಿಗಳಿಗೆ ದೇಶದ ಆಡಳಿತಾರೂಢ ಪಕ್ಷದ ನಾಯಕರು ಮಣಿದಿದ್ದಾರೆ ಎನ್ನುವ ಮೂಲಕ ಸಂಪಾದಕೀಯದಲ್ಲಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಲಾಗಿದೆ.
ಒಂದೆಡೆಯಿಂದ ಮೋದಿ ಅವರು ದೇಶದ ರಕ್ಷಣಾ ಸಚಿವ ಹುದ್ದೆ ಮಹಿಳೆಗೆ ನೀಡಿದರೆ ಮತ್ತೂಂದೆಡೆಯಿಂದ ತ್ರಿವಳಿ ತಲಾಖ್‌ನಿಂದ ಮುಸ್ಲಿಂ ಮಹಿಳೆಗೆ ಕಾನೂನಿನ ರಕ್ಷಣೆ ನೀಡಲು ಮುಂದಾಗಿದ್ದಾರೆ. ಆದರೆ ಗೌರಿ ಲಂಕೇಶ್ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿ ರಸ್ತೆಯಲ್ಲಿ ಬಿದ್ದಿದ್ದಾರೆ ಎಂದು ಸಂಪಾದಕೀಯದಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
ಆಕೆಯ ಬರಹಗಳ ಬಗೆಗೆ ಸಮ್ಮತಿ ಇಲ್ಲ ಎಂಬ ಏಕೈಕ ಕಾರಣಕ್ಕಾಗಿ ಆಕೆಯನ್ನು ಹತ್ಯೆಗೈಯ್ಯಲಾಗಿರುವುದು ದೇಶಕ್ಕೆ ಬಲುದೊಡ್ಡ ಹೊಡೆತ ಮಾತ್ರವಲ್ಲದೆ ಅಮಾನವೀಯ ಕೃತ್ಯವಾಗಿದೆ. ಕೇಂದ್ರದಲ್ಲಿ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರೋರ್ವರು ಗೋಮಾಂಸ ಸೇವನೆಯನ್ನು ಬೆಂಬಲಿಸಿ ಹೇಳಿಕೆ ನೀಡಿದಾಗ ಯಾವುದೇ ಮುನಿಗಳಾಗಲೀ ಗೋರಕ್ಷಕರಾಗಲೀ ಸೊಲ್ಲೆತ್ತಲಿಲ್ಲ. ಆದರೆ ಬೆಂಗಳೂರಿನ ರಸ್ತೆಯಲ್ಲಿ ಗೌರಿ ಅವರ ಹೆಣ ರಕ್ತದ ಮಡುವಿನಲ್ಲಿ ಬಿದ್ದಿತ್ತು ಎಂದು ಸಂಪಾದಕೀಯದಲ್ಲಿ ಕಿಡಿಕಾರಲಾಗಿದೆ.