ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಕುರಿತು ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದ ನಿರ್ದೇಶಕ ಎ.ಎಂ.ಆರ್. ರಮೇಶ್ ಅವರಿಗೆ ಗೌರಿ ಅವರ ತಾಯಿ ಇದೀಗ ಸಿನಿಮಾ ಮಾಡದಂತೆ ನೋಟಿಸ್ ಕಳುಹಿಸಿದ್ದಾರೆ. ಹೌದು, ರಮೇಶ್ ಅವರು ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ಒಂದಷ್ಟು ವಿಷಯವನ್ನು ಕೆಲಹಾಕಿ, ಆ ಕುರಿತು ಸಿನಿಮಾ ಮಾಡುವ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು.
ಈಗ ನೋಡಿದರೆ, ಗೌರಿ ಅವರ ತಾಯಿ ರಮೇಶ್ ಅವರಿಗೆ ಯಾವುದೇ ಕಾರಣಕ್ಕೂ ಗೌರಿ ಹತ್ಯೆ ಕುರಿತು ಸಿನಿಮಾ ಮಾಡಬಾರದು ಎಂದು ನೋಟಿಸ್ ಕಳುಹಿಸಿದ್ದಾರೆ. ಆಷ್ಟೇ ಅಲ್ಲ, ಸಿನಿಮಾ ಮಾಡಲು ಹೊರಟರೆ 10 ಕೋಟಿ ರುಪಾಯಿಗಳ ಮಾನನಷ್ಟ ಮೊಕದ್ದಮೆ ಹಾಕುವುದಾಗಿಯೂ ಹೇಳಿದ್ದಾರೆ. ಗೌರಿ ಹತ್ಯೆ ಆದ ಕೆಲ ದಿನಗಳ ಬಳಿಕ ಗಾಂಧಿನಗರದಲ್ಲೂ ಸಹ, ಈ ಕುರಿತು ಯಾರಾದರೂ ಸಿನಿಮಾ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಗೌರಿ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆಗಳು ನಡೆಯುತ್ತಿರುವ ವೇಳೆಯೇ, ರಮೇಶ್ ಅವರು, ಕೆಲ ಮಾಹಿತಿಗಳನ್ನು ಕಲೆಹಾಕುವಲ್ಲಿ ನಿರತರಾದರು. ಅಷ್ಟೇ ಅಲ್ಲ, ಗೌರಿ ಹತ್ಯೆಗೆ ಸಂಬಂಧಿಸಿದಂತೆ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಅದರ ತಯಾರಿಯಲ್ಲಿರುವಾಗಲೇ, ಗೌರಿ ಅವರ ತಾಯಿ ಈಗ ರಮೇಶ್ ಅವರಿಗೆ ಗೌರಿ ಹತ್ಯೆ ಕುರಿತು ಸಿನಿಮಾ ಮಾಡಬಾರದು, ಮಾಡಲು ಹೊರಟರೆ, ಹತ್ತು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ನೋಟಿಸ್ ಕಳುಹಿಸಿದ್ದಾರೆ.
ಆದರೆ, ಈ ಕುರಿತು
“ಉದಯವಾಣಿ’ ಜತೆ ಮಾತನಾಡಿದ ನಿರ್ದೇಶಕ ಎ.ಎಮ್.ಆರ್ ರಮೇಶ್, ಗೌರಿ ಹತ್ಯೆ ಕುರಿತು ಸಿನಿಮಾ ಮಾಡೋದು ಸತ್ಯ ಎಂದು ಹೇಳಿಕೊಂಡಿದ್ದಾರೆ. “ನಾನು ಈ ಪ್ರಕರಣ ಕುರಿತು ಸಿನಿಮಾ ಮಾಡೋದಂತೂ ಸತ್ಯ. ಇಷ್ಟಕ್ಕೂ ನಾನೇನು ಮಾಡುತ್ತಿದ್ದೀನಿ ಅಂತ ಅವರಿಗೇನು ಗೊತ್ತು? ಈ ವಿಷಯ ಇದೀಗ ಸಾರ್ವಜನಿಕ ವಲಯಕ್ಕೆ ಬಂದಿದೆ.
ಹಾಗಾಗಿ ಯಾರು ಬೇಕಾದರೂ ಮಾಡಬಹುದು. ಮೇಲಾಗಿ ನಾನು ನಾಳೇನೇ ಸಿನಿಮಾ ಮಾಡುತ್ತೀನಿ ಅಂತ ಹೇಳಿಲ್ಲ ಅಥವಾ ಯಾವುದೋ ಒಂದು ಆ್ಯಂಗಲ್‌ನಲ್ಲಷ್ಟೇ ಹೇಳುತ್ತೀನಿ ಅಂತಲೂ ಇಲ್ಲ. ಸದ್ಯಕ್ಕೆ ತನಿಖೆ ನಡೆಯುತ್ತಿದೆ. ಸಮಗ್ರವಾಗಿ ತನಿಖೆಯಾಗಲಿ. ಆಮೇಲಷ್ಟೇ ಸಿನಿಮಾ ಮಾಡುತ್ತೀನಿ. ತಡವಾದರೂ ನನಗೇನೂ ತೊಂದರೆ ಇಲ್ಲ’ ಎನ್ನುತ್ತಾರೆ ರಮೇಶ್.