Advertisement

ಕಾಂಗ್ರೆಸ್‌ ಗ್ಯಾರಂಟಿ ವಂಚನೆ, ತುಷ್ಟೀಕರಣ: ಗೌರವ್‌

12:49 AM Apr 11, 2023 | Team Udayavani |

ಮಂಗಳೂರು: ಕಾಂಗ್ರೆಸ್‌ನದ್ದು ಒಂದೇ ಗ್ಯಾರಂಟಿ ಎಂದರೆ ವಂಚನೆ, ತುಷ್ಟೀಕರಣ, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ಟೀಕಿಸಿದರು.

Advertisement

ಪಕ್ಷದ ಮಂಗಳೂರು ವಿಭಾಗದ ನೂತನ ಮಾಧ್ಯಮ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ, ಛತ್ತೀಸ್‌ಗಢ, ರಾಜಸ್ಥಾನ ಮುಂತಾದೆಡೆ ನೀಡಿದ ಯಾವುದೇ ಭರವಸೆಯನ್ನೂ ಕಾಂಗ್ರೆಸ್‌ ಈಡೇರಿಸಿಲ್ಲ ಎಂದರು.

ಪಿಎಫ್‌ಐ ನಿಷೇಧ
ಕಾಂಗ್ರೆಸ್‌ನ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಮಾಜ ಘಾತುಕ ಸಂಘಟನೆಗಳಾದ ಪಿಎಫ್‌ಐ ಮತ್ತು ಎಸ್‌ಡಿಪಿಐ ಕುರಿತು ಮೃದು ನಿಲುವು ತಳೆದು ದುಷ್ಕರ್ಮಿಗಳ ವಿರುದ್ಧದ 1,700 ಪ್ರಕರಣಗಳನ್ನು ರದ್ದುಪಡಿಸಿದ್ದರು. ಆದರೆ ಪ್ರಧಾನಿ ಮೋದಿ ದಿಟ್ಟ ನಿರ್ಧಾರ ಕೈಗೊಂಡು ಪಿಎಫ್‌ಐ ನಿಷೇಧಿಸಿದರು ಎಂದು ಹೇಳಿದರು.

ಹಣದುಬ್ಬರ ಹಾಗೂ ಎಲ್‌ಪಿಜಿ ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿ, 2014ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಬಂದ ಬಳಿಕ ಕೈಗೊಂಡ ಹಲವು ಆರ್ಥಿಕ ಬಿಗಿ ಕ್ರಮಗಳಿಂದ ಹಣದುಬ್ಬರ ಪ್ರಸ್ತುತ ಸರಾಸರಿ ಶೇ. 4-5ರ ಆಸುಪಾಸಿನಲ್ಲಿದೆ. ಆದರೆ ಕಾಂಗ್ರೆಸ್‌ ಸರಕಾರವಿದ್ದಾಗ ಇದು ಶೇ. 12-13ರಷ್ಟಿತ್ತು ಎಂದರು.

ನಂದಿನಿ ಕರ್ನಾಟಕದ ಅಸ್ಮಿತೆ
ನಂದಿನಿ ಕರ್ನಾಟಕದ ಅಸ್ಮಿತೆ. ನಂದಿನಿ ಹಾಗೂ ರಾಜ್ಯದ ಜನರ ಹಿತವನ್ನು ಗಮನದಲ್ಲಿ ಇರಿಸಿ ಕೊಂಡೇ ಯವುದೇ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದ ಅವರು, 2018ರಲ್ಲಿ ಕಾಂಗ್ರೆಸ್‌ ಸರಕಾರವಿದ್ದಾಗ ನಂದಿನಿ ಉತ್ಪನ್ನಗಳ ಒಟ್ಟಾರೆ ವಹಿವಾಟು 14.500 ಕೋಟಿ ರೂ. ಇತ್ತು. 2021-22ರ ಬಿಜೆಪಿ ಸರಕಾರದ ಅವಧಿಯಲ್ಲಿ 15 ಸಾವಿರ ಕೋಟಿ ರೂ. ಆಗಿದೆ. ಇದರ ಬಗ್ಗೆ ತಿಳಿಯದೆ ಕಾಂಗ್ರೆಸ್‌ ಲಘುವಾಗಿ ಮಾತನಾಡುತ್ತಿದೆ ಎಂದರು.

Advertisement

ರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್‌ ಎಂ., ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಬಿಜೆಪಿಯ ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಮತ್ತು ದ.ಕ. ಜಿಲ್ಲಾ ಬಿಜೆಪಿ ಮುಖ್ಯ ವಕ್ತಾರ ರವಿಶಂಕರ ಮಿಜಾರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next