Advertisement

ನಡುರಾತ್ರಿ ಕಾಡುಕೋಣಗಳ ವಾಕಿಂಗ್‌!

05:59 PM Mar 30, 2019 | pallavi |

ಸಾಗರ: ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸುವ ಖಯಾಲಿಯನ್ನು ಸಾಗರ ತಾಲೂಕಿನ ಗ್ರಾಮೀಣ ಅರಣ್ಯಗಳಲ್ಲಿರುವ ಕಾಡುಕೋಣಗಳು ಪ್ರತಿ ಎರಡು ವರ್ಷಕ್ಕೊಮ್ಮೆ ಚಾಲ್ತಿಗೆ ತರುವ ಸಂಪ್ರದಾಯವನ್ನು
ಮಾಡಿಕೊಂಡಿವೆ ಎಂಬ ಅನುಮಾನ ವ್ಯಕ್ತವಾಗುವಂತೆ ಗುರುವಾರ ನಡುರಾತ್ರಿಯಲ್ಲಿ ನಗರದ ಎಸ್‌ ಎನ್‌ ನಗರ ಭಾಗದಲ್ಲಿ ಎರಡು ಕಾಡುಕೋಣಗಳು ರಸ್ತೆಯಲ್ಲಿಯೇ ಸಂಚರಿಸಿರುವ ವಿಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

Advertisement

ಎಸ್‌ಎನ್‌ ನಗರದ ದುರ್ಗಾ ಲಾಡ್ಜ್ ಎದುರಿನ ಸಾಗರ ಸಿಗಂದೂರು ರಸ್ತೆಯಲ್ಲಿ ಇವು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಲಾರಿ, ಕಾರು, ಬೈಕ್‌ ಸವಾರರು ದೂರದಿಂದಲೇ ಅವುಗಳ ದರ್ಶನ ಪಡೆದರೇ ವಿನಃ ಅವುಗಳನ್ನು ದಾಟಿ ರಸ್ತೆಯಲ್ಲಿ ಸಾಗುವ ಧೈರ್ಯ ಮಾಡಲಿಲ್ಲ. ಕಾಡುಕೋಣಗಳು ರಸ್ತೆಯಲ್ಲಿರುವ ಮಾಹಿತಿ ಗೊತ್ತಿಲ್ಲದೆ ಸಾಗಿದ ಪೊಲೀಸರು ಕೂಡ ಬೆದರಿ ಬೈಕ್‌ ಹಿಂದಕ್ಕೆ ತಿರುಗಿಸಿದ ದೃಶ್ಯಗಳು
ಈಗ ಎಲ್ಲರ ಮೊಬೈಲ್‌ನಲ್ಲಿ ಹರಿದಾಡುತ್ತಿವೆ.

ಎರಡು ವರ್ಷಗಳ ಹಿಂದೆ 2017ರ ಮಾ. 23ರಂದು ನಗರದ ಪ್ರಮುಖ ಜೆಸಿ ರಸ್ತೆಯಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿತ್ತು. ಜೈಲ್‌ ಪಕ್ಕದ ಭಾಗದಿಂದ ಆಗಮಿಸಿದ ಕಾಡುಕೋಣ ಜೆಸಿ ರಸ್ತೆಯ ಮಾರ್ಗವಾಗಿ ನಗರ ಠಾಣೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ವಿನೋಬಾನಗರ ಮುಂತಾದ ಕಡೆಗಳಲ್ಲಿ ಸಂಚರಿಸಿ ನಂತರ ಶಿರವಾಳದ ಮಾರ್ಗ ಹಿಡಿದು ಮಾಯವಾಗಿತ್ತು.

ಚಾಮರಾಜಪೇಟೆ ವಾಕಿಂಗ್‌ ನಂತರ ಅದೇ ವರ್ಷದ ಡಿಸೆಂಬರ್‌ ಮೂರರಂದು ಒಂಟಿ ಕಾಡುಕೋಣ
ವಾಯುವಿಹಾರವನ್ನು ನಗರದ ಭೀಮನಕೋಣೆ ರಸ್ತೆಯ ಪಕ್ಕದ ವಿಜಯನಗರ ಬಡಾವಣೆಯ ಉದ್ಯಾನವನದಲ್ಲಿ ನಡೆಸಿತ್ತು.

ವಿಜಯನಗರದ ಎರಡನೇ ಬಡಾವಣೆಯ ರಸ್ತೆಗಳಲ್ಲಿ ಕಾಡುಕೋಣ ಸಂಚಾರ ಮಾಡುತ್ತಿದ್ದ ಕಾರಣ ಹಲವರ ಬೆಳಗಿನ ವಾಕಿಂಗ್‌ ಸ್ಥಗಿತಗೊಳಿಸಿ ಮನೆಯೊಳಗೇ ಪ್ರತಿಷ್ಠಾಪಿತರಾಗುವ ಸ್ಥಿತಿ ನಿರ್ಮಾಣವಾಗಿತ್ತು. ಈ ಎರಡು ಘಟನೆ ನಡೆದ ಸುಮಾರು ಒಂದೂವರೆ ವರ್ಷದ ಅವ ಧಿಯಲ್ಲಿ ಕಾಡುಕೋಣ ನಗರದತ್ತ ಬಂದಿರುವ ಮಾಹಿತಿ ಇರಲಿಲ್ಲ.

Advertisement

ಈ ನಡುವೆ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಕಾಡುಕೋಣಗಳ ಉಪಟಳ ವಿಪರೀತವಾಗಿದ್ದು, ಮತ್ತಿಕೊಪ್ಪ, ಹಿಂಡೂಮನೆ, ಮಾವಿನಸರ, ಹುಲಿಮನೆ ಮೊದಲಾದೆಡೆ ಕಾಡುಕೋಣಗಳು ತೋಟಗಳಲ್ಲಿ ಅಡಕೆ ಸಸಿಗಳನ್ನು ಮುರಿದು ತೋಟಗಳನ್ನೇ ಧ್ವಂಸ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಕೃಷಿಕರು ಬೇಲಿಯ ಮೇಲೆ ಹಳೆಯ ಸೀರೆಗಳ ಕರ್ಟನ್‌ಗಳನ್ನು ತೂಗುಹಾಕಿ ಕಾಡುಕೋಣಗಳಿಂದ ತೋಟಗಳನ್ನು ರಕ್ಷಿಸುವ ಪ್ರಯತ್ನ ನಡೆಸುತ್ತಿರುವುದನ್ನು ಕಾಣಬಹುದು.

Advertisement

Udayavani is now on Telegram. Click here to join our channel and stay updated with the latest news.

Next