Advertisement

ನೀರೆ: ಮನೆ ಅಂಗಳಕ್ಕೆ ಬಂದ ಕಾಡುಕೋಣ!

01:06 AM Mar 30, 2022 | Team Udayavani |

ಕಾರ್ಕಳ: ನೀರೆ ಗ್ರಾಮದ ಮುಳ್ಯಕ್ಕಾರು ಜಡ್ಡು ಎಂಬಲ್ಲಿ ಕಾಡು ಕೋಣ ಜನವಸತಿ ಪ್ರದೇಶಕ್ಕೆ ನುಗ್ಗಿದ ಘಟನೆ ಮಂಗಳವಾರ ನಡೆದಿದೆ.

Advertisement

ನೀರೆ ಬೈಲೂರಿನ ಮೀಸಲು ಅರಣ್ಯದ ಮುಳ್ಯಕ್ಕಾರು ನಿವಾಸಿ ಲೀಲಾವತಿ ಪೂಜಾರ್ತಿ ಅವರ ಮನೆಯ ಅಂಗಳಕ್ಕೆ ಮಧ್ಯಾಹ್ನ 1.30ರ ವೇಳೆಗೆ ಕಾಡುಕೋಣ ಓಡಿ ಬಂದಿದೆ. ಓಡಾಟಕ್ಕೆ ಮನೆಯ ಕೆಲ ಭಾಗಗಳಿಗೆ ಹಾನಿಯಾಗಿದೆ. ಜಮೀನಿನಲ್ಲಿ ಬೆಳೆದ ಕೃಷಿಯನ್ನು ಹಾಳುಗೆಡವಿದೆ.

ಮನೆ ಮಂದಿ ಬೊಬ್ಬೆ ಹಾಕಿ ಓಡಿಸುವ ಪ್ರಯತ್ನ ಮಾಡಿದರು. ಕಾಡುಕೋಣ ದಾಳಿಯ ಬಗ್ಗೆ ಮನೆಯವರು, ಅಕ್ಕಪಕ್ಕದವರು ಗ್ರಾ.ಪಂ.ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ನೀರೆ ಗ್ರಾಮ ಪಂಚಾಯತ್‌ ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು, ವಾರ್ಡ್‌ ಸದಸ್ಯರು, ತಾ.ಪಂ. ಮಾಜಿ ಸದಸ್ಯರು, ಗ್ರಾಮ ಕರಣಿಕರು ತೆರಳಿ ಪರಿಶೀಲನೆ ನಡೆಸಿದ್ದಲ್ಲದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಸೆರೆ ಹಿಡಿಯಲು ಹರಸಾಹಸ
ಕಾರ್ಕಳ ಅರಣ್ಯ ವಿಭಾಗದ ಆರ್‌ಎಫ್ಒ ದಿನೇಶ್‌ ನೇತೃತ್ವದಲ್ಲಿ ಕಾರ್ಕಳ ವನ್ಯಜೀವಿ ವಿಭಾಗದ ಆರ್‌ಎಫ್ಒ ಸ್ಮಿತಾ ಸಹಕಾರದಲ್ಲಿ ಕಾರ್ಕಳ ವಿಭಾಗದ ವನ್ಯಜೀವಿ, ಅರಣ್ಯ ಇಲಾಖೆ ಎರಡು ವಿಭಾಗಗಳ ಫಾರೆಸ್ಟರ್‌, ಅರಣ್ಯ ಇಲಾಖೆ ಅಧಿಕಾರಿ ಸಿಬಂದಿ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.

ಮಂಗಳೂರಿನಿಂದ ನುರಿತ ಪಶುವೈದ್ಯರನ್ನು ಕರೆಯಿಸಿಕೊಂಡು ಸ್ಥಳಕ್ಕೆ ಜೆಸಿಬಿ, ಟಿಪ್ಪರ್‌, ಟ್ರ್ಯಾಕ್ಟರ್‌ ತರಿಸಿಕೊಂಡು ಸೆರೆಹಿಡಿಯುವ ಕಾರ್ಯಾಚರಣೆ ಆರಂಭಿಸಲಾಯಿತು. ಸತತ ಐದು ಗಂಟೆಗಳ ಪ್ರಯತ್ನದ ಬಳಿಕ ಅರಿವಳಿಕೆ ನೀಡಿ ಕಾಡುಕೋಣವನ್ನು ಸೆರೆಹಿಡಿಯಲಾಯಿತು. ಬಳಿಕ ಕುದುರೆಮುಖ ವನ್ಯಜೀವಿಧಾಮಕ್ಕೆ ಬಿಡಲಾಗಿದೆ.
ಕಾಡುಕೋಣದ ವಯಸ್ಸು ಸುಮಾರು ಎಂಟು ವರ್ಷ ಎಂದು ಅಂದಾಜಿಸಲಾಗಿದೆ.

Advertisement

ಸಿಟ್ಟಾದ ಕಾಡುಕೋಣ
ಕಾಡುಕೋಣ ಜನರ ಬೊಬ್ಬೆಯಿಂದ ಗಾಬರಿಕೊಂಡಿತ್ತು. ತತ್‌ಕ್ಷಣ ಕಾರ್ಯಾಚರಣೆ ನಡೆಸದಿದ್ದರೆ ಮತ್ತಷ್ಟು ಅಪಾಯವಾಗುವ ಸಾಧ್ಯತೆ ಇತ್ತು ಎಂದು ಆರ್‌ಎಫ್ಒ ದಿನೇಶ್‌ ಉದಯವಾಣಿಗೆ ಪ್ರತಿಕ್ರಿಯಿಸಿದರು.

ಉದಯವಾಣಿ ಎಚ್ಚರಿಸಿತ್ತು
ಕಾರ್ಕಳ ತಾಲೂಕಿನಲ್ಲಿ ಕಾಡುಕೋಣ ಹಾವಳಿ ಹೆಚ್ಚಿರುವ ಬಗ್ಗೆ ಇತ್ತೀಚೆಗಷ್ಟೇ ಉದಯವಾಣಿ ವರದಿ ಪ್ರಕಟಿಸಿತ್ತು. ಜನವಸತಿ ಪ್ರದೇಶದಲ್ಲಿ ಅಪಾಯ ತಂದೊಡ್ಡುವ ರೀತಿ ಅವುಗಳ ಓಡಾಟವಿರುವ ಬಗ್ಗೆ ಗಮನ ಸೆಳೆಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next