ಸಿದ್ದಾಪುರ: ಭತ್ತದ ಗದ್ದೆಗೆ ಲಗ್ಗೆ ಇಟ್ಟ ಕಾಡುಕೋಣವನ್ನು ಓಡಿಸಲು ಹೋದ ವ್ಯಕ್ತಿಯನ್ನು ಒಂಟಿ ಕಾಡುಕೋಣ ತಿವಿದು ಕೊಂದು ಹಾಕಿದ ಘಟನೆ ಸೋಮವಾರ ರಾತ್ರಿ ಅಮಾಸೆಬೈಲು ಗ್ರಾಮದ ನಡಂಬೂರಿನಲ್ಲಿ ಸಂಭವಿಸಿದೆ.
Advertisement
ಗೋಪು ಪೂಜಾರಿ (70) ಮೃತಪಟ್ಟವರು. ಅವರು ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪ್ರತಿನಿತ್ಯ ತೋಟ ಹಾಗೂ ಭತ್ತದ ಗದ್ದೆಗೆ ಕಾಡುಕೋಣಗಳು ಸೇರಿದಂತೆ ಇತರ ಕಾಡು ಪ್ರಾಣಿಗಳು ಲಗ್ಗೆ ಇಟ್ಟು ಕೃಷಿಯನ್ನು ನಾಶ ಮಾಡುತ್ತಿದ್ದವು. ಇವುಗಳನ್ನು ಓಡಿಸಲು ಗದ್ದೆಯ ಬದಿಯಲ್ಲಿ ಹಳ್ಳಿಮನೆ ನಿರ್ಮಿಸಿ ರಾತ್ರಿ ಕಾವಲು ಕಾಯುತ್ತಿದ್ದರು. ಸೋಮವಾರ ರಾತ್ರಿ ಓಂಟಿ ಕಾಡುಕೋಣ ಗದ್ದೆಗೆ ಬಂದಿರುವುದನ್ನು ಗಮನಿಸಿದ ಗೋಪು ಅವರು ಅಕ್ಕಪಕ್ಕದವರನ್ನು ಕರೆದು ಕೋಣವನ್ನು ಓಡಿಸಲು ಹೋದರು. ಕೋಣವು ಏಕಾಏಕಿಯಾಗಿ ಅವರ ಮೇಲೆ ದಾಳಿ ನಡೆಸಿ ಎದೆಯ ಭಾಗಕ್ಕೆ ತಿವಿದು ಪರಾರಿಯಾಯಿತು. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು. ಈ ಘಟನೆಯಿಂದ ಕಾಡು ಅಂಚಿನ ಪ್ರದೇಶದ ಕೃಷಿಕರಲ್ಲಿ ಭಯ ಆವರಿಸಿದೆ.
ಪಶ್ಚಿಮಘಟ್ಟ ಪ್ರದೇಶಕ್ಕೆ ತಾಗಿಕೊಂಡಿರುವ ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಡುಕೋಣ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಇಂತಹ ಸಂದರ್ಭದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆಯಿಂದ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಅರಣ್ಯಾಧಿಕಾರಿ ಎ.ಎ. ಗೋಪಾಲ ತಿಳಿಸಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.