ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಆಯೋಗವು ಈ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿದೆ. ಡಿ.3ರವರೆಗೆ ಸಾರ್ವಜನಿಕರು ಈ ಬಗ್ಗೆ ಯಾವುದೇ ರೀತಿಯ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಈ ಬಳಿಕವಷ್ಟೇ ಆಯೋಗವು ಅಂತಿಮ ಅಧಿಸೂಚನೆ ಹೊರಡಿಸಲಿದೆ. ಶಾಲಾ ಮಕ್ಕಳಲ್ಲಿ ಜಂಕ್ ಫುಡ್‌ನ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ಮೂಡಿಸಲು ಆಯೋಗ ಇತ್ತೀಚೆಗೆ ಆರಂಭಿಸಿರುವ “ಈಟ್ ರೈಟ್’ (ಉತ್ತಮವಾದದ್ದನ್ನು ತಿನ್ನಿ) ಅಭಿಯಾನದಡಿ, ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
Advertisement
ಜಂಕ್ ಫುಡ್ ಮಾರಾಟ ಮಾತ್ರವಲ್ಲದೆ, ಶಾಲೆಗಳಿಂದ 50 ಮೀಟರ್ ದೂರದವರೆಗೆ ಜಂಕ್ ಫುಡ್‌ಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು, ಬ್ಯಾನರ್‌ಗಳನ್ನು, ಪೋಸ್ಟರ್‌ಗಳನ್ನು ಹಾಕುವಂತಿಲ್ಲ. ಅಲ್ಲದೆ, ಶಾಲಾ ಮಕ್ಕಳು ಭಾಗಿಯಾಗುವ ಕ್ರೀಡಾಕೂಟಗಳು, ಅಂತರಶಾಲಾ ಸಮ್ಮೇಳನಗಳಂಥ ಕಾರ್ಯಕ್ರಮಗಳಲ್ಲಿಯೂ ಯಾವುದೇ ಜಂಕ್ ಫುಡ್ ಜಾಹೀರಾತುಗಳ ಬ್ಯಾನರ್, ಪೋಸ್ಟರ್‌ಗಳನ್ನು ಪ್ರಕಟಿಸುವಂತಿಲ್ಲ. ಅಷ್ಟೇ ಅಲ್ಲ, ಖಾಸಗಿ ಸಂಸ್ಥೆಗಳು, ಜಾಹೀರಾತುದಾರರು ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಿಗೆ ಕೆಲವು ತಿನಿಸುಗಳ ಉಚಿತ ಸ್ಯಾಂಪಲ್‌ಗಳನ್ನು ನೀಡುವುದನ್ನೂ ನಿಷೇಧಿಸಲಾಗಿದೆ. ವಸತಿ ಶಾಲೆಗಳಿಗೂ ಈ ನಿಯಮ ಅನ್ವಯವಾಗುತ್ತದೆ ಎಂದು ಈ ಕರಡು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.
ಜಂಕ್ ಫುಡ್‌ಗಳ ನಿಷೇಧ ಸಂಬಂಧ ಹೊರಡಿಸಲಾಗಿರುವ ಕರಡು ಅಧಿಸೂಚನೆಯಲ್ಲಿ 10 ಅಂಶಗಳನ್ನು ಪ್ರಕಟಿಸಲಾಗಿದೆ. ಮಧ್ಯಾಹ್ನದ ಬಿಸಿ ಊಟ ಸಿದ್ಧಪಡಿಸುವಾಗ ಶುಚಿತ್ವ ಕಾಪಾಡಿಕೊಳ್ಳಬೇಕು, ಶಾಲೆಗಳ ಕ್ಯಾಂಟೀನ್‌ಗಳಲ್ಲಿ, ಮೆಸ್, ಹಾಸ್ಟೆಲ್‌ಗಳು ಅಥವಾ ಶಾಲೆಯಿಂದ 50 ಮೀ. ಅಂತರದಲ್ಲಿ ಹೆಚ್ಚು ಕೊಬ್ಬಿನ ಅಂಶ ಇರುವ ತಿನಿಸುಗಳ ಮಾರಾಟ ಮಾಡುವಂತಿಲ್ಲ. ಶಾಲೆಗಳಲ್ಲಿ ಸುರಕ್ಷಿತ ಆಹಾರ ಪದ್ಧತಿಗೆ ಉತ್ತೇಜನ ಮತ್ತು ತಿಳಿವಳಿಕೆ, ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಹೇಳಿರುವ ರೀತಿಯಲ್ಲಿ ಆಹಾರ ವಸ್ತುಗಳ ಬಳಕೆಗೆ ಉತ್ತೇಜನ, ಶಾಲೆಗಳಲ್ಲಿ ಕಡಿಮೆ ಪೌಷ್ಟಿಕಾಂಶ ಇರುವ ಆಹಾರ ನೀಡದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.