Advertisement
ಪ್ರತಿ ಬಾರಿ ಮಳೆ ಬಂದಾಗಲು ಬೆಂಗಳೂರಿನ ಹಲವು ಬಡಾವಣೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಈ ವರ್ಷ ಮಳೆಯ ಪ್ರಮಾಣ ಹೆಚ್ಚಾಗಿ ನಗರದ 60ಕ್ಕೂ ಹೆಚ್ಚಿನ ಬಡಾವಣೆಗಳು ಒಂದಿಲ್ಲೊಂದು ಬಾರಿ ಪ್ರವಾಹಕ್ಕೆ ತುತ್ತಾಗಿವೆ. ಹೀಗೆ ಪದೇ ಪದೆ ಪ್ರವಾಹ ಸೃಷ್ಟಿಯಾಗಲು ರಾಜಕಾಲುವೆಗಳ ನಿರ್ವಹಣೆಯ ಲೋಪ ಒಂದೆಡೆಯಾದರೆ, ಕೆರೆಗಳು ಭರ್ತಿಯಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದ್ದು ಮತ್ತೂಂ ದು ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಕೆರೆಗಳಿಂದ ಹರಿಯುವ ನೀರನ್ನು ನಿಯಂತ್ರಿಸುವ ಸಲುವಾಗಿ ನಗರದಲ್ಲಿನ 185 ಕೆರೆಗಳಿಗೆ ಗೇಟ್‌ಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ.
Related Articles
Advertisement
ಜನವರಿಯಿಂದ ಕಾಮಗಾರಿ ಆರಂಭ
ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳು ರೂಪಿಸಿರುವ ಯೋಜನೆಗೆ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಯಿಂದ ಅನುಮೋದನೆ ದೊರೆತಿದೆ. ಯೋಜನೆಗಾಗಿ ಕೆರೆ ವಿಭಾಗಕ್ಕೆ ಈ ಬಾರಿ ನೀಡಿದ ಅನುದಾನದಲ್ಲಿ 35 ಕೋಟಿ ರೂ. ವ್ಯಯಿಸಲಾಗುತ್ತದೆ. ಅಲ್ಲದೆ ಟೆಂಡರ್ ಪ್ರಕ್ರಿಯೆ ನಡೆಸಿ ಗೇಟ್ ಅಳವಡಿಕೆಗೆ ಖಾಸಗಿ ಸಂಸ್ಥೆಯನ್ನು ನೇಮಿಸಲಾಗುತ್ತದೆ. ಇನ್ನೊಂದು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಜನವರಿಯಿಂದ ಗೇಟ್ ಅಳವಡಿಕೆ ಕಾರ್ಯ ಆರಂಭವಾಗಲಿದೆ. 2023ರ ಮಳೆಗಾಲ ಆರಂಭಕ್ಕೂ ಮುನ್ನ ಅಂದರೆ ಮೇ ತಿಂಗಳ ಅಂತ್ಯದೊಳಗೆ ನಿಗದಿಪಡಿಸಿರುವ 185 ಕೆರೆಗಳಲ್ಲೂ ಗೇಟ್ ಅಳವಡಿಸುವ ಕಾರ್ಯ ಪೂರ್ಣಗೊಳಿಸಲಾಗುತ್ತದೆ. ಅದರಿಂದ ಮುಂದಿನ ಮಳೆಗಾಲದಲ್ಲಿ ಕೆರೆಗಳಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವುದನ್ನು ತಡೆಯಲು ನಿರ್ಧರಿಸಲಾಗಿದೆ.
ನಗರದಲ್ಲಿ ಸೃಷ್ಟಿಯಾಗುತ್ತಿರುವ ಪ್ರವಾಹ ಪರಿಸ್ಥಿತಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುತ್ತಿದೆ. ಪ್ರಮುಖ ವಾಗಿ ಮಳೆ ಬಂದಾಗ ಕೆರೆಗಳಿಂದ ರಾಜಕಾಲುವೆಗೆ ಹರಿವ ನೀರಿನ ಪ್ರಮಾಣ ಹೆಚ್ಚಾಗುವುದರಿಂದಲೂ ಪ್ರವಾಹ ಸೃಷ್ಟಿಗೆ ಕಾರಣವಾಗಿದೆ. ಹೀಗಾಗಿ ಮಳೆ ಬಂದಾಗ ಕೆರೆಗಳಿಂದ ನೀರು ಹೊರಗೆ ಹರಿಯದಂತೆ ತಡೆಯಲು ಗೇಟ್‌ಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿ ಅದನ್ನು ಜಾರಿ ಮಾಡಿ, ಮುಂದಿನ ವರ್ಷದಿಂದ ಪ್ರವಾಹ ನಿಯಂತ್ರಿಸಲಾಗುವುದು. ● ಶಶಿಕುಮಾರ್, ಬಿಬಿಎಂಪಿ ಮುಖ್ಯ ಎಂಜಿನಿಯರ್ (ಕೆರೆ ವಿಭಾಗ)
● ಗಿರೀಶ್ ಗರಗ