Advertisement
ಕೆಂಪೇಗೌಡ ರಸ್ತೆ ಎಸ್‌ಬಿಎಂ ವೃತ್ತದಲ್ಲಿರುವ ಬ್ಯಾಂಕ್ ಆವರಣದಲ್ಲಿನ ತೂಗು ಗಡಿಯಾರದ ಮುಳ್ಳು ಸಂಜೆ 5.30ರ ಸಮಯ ತಲುಪುತ್ತಿದ್ದಂತೆ ಮೈಸೂರು ಬ್ಯಾಂಕ್‌ನ ಕಾರ್ಯ ನಿರ್ವಹಣೆಗೆ ಪೂರ್ಣ ವಿರಾಮ ಬಿತ್ತು. ಕೆಲ ದಶಕಗಳ ಸೇವೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಅಧಿಕಾರಿ, ನೌಕರ, ಸಿಬ್ಬಂದಿ ಎಸ್‌ಬಿಎಂಗೆ ಭಾವಪೂರ್ಣ ವಿದಾಯ ಹೇಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಂಡರು.
Related Articles
Advertisement
“ಎಸ್‌ಬಿಎಂನಲ್ಲಿ 37 ವರ್ಷ ಸೇವೆ ಸಲ್ಲಿಸಿದ ನನಗೆ ಸಾಕಷ್ಟು ಸವಿನೆನಪುಗಳಿವೆ. ಯಾವುದೇ ಕಹಿನೆನಪುಗಳಿಲ್ಲ. ಹಳೆ ಮೈಸೂರು ಭಾಗದ ಜನತೆಗೆ ಎಸ್‌ಬಿಎಂ ಮಹಾರಾಜರ ಬ್ಯಾಂಕ್ ಎಂಬ ಆತ್ಮೀಯ ಭಾವನೆ. ಯಳಂದೂರು ಶಾಖೆಯಲ್ಲಿದ್ದಾಗ ಗ್ರಾಹಕರು ಚಪ್ಪಲಿಯನ್ನು ಹೊರಗೆಬಿಟ್ಟು ಬ್ಯಾಂಕ್‌ನೊಳಗೆ ಬರುತ್ತಿದ್ದುದನ್ನು ಕಂಡಿದ್ದೇನೆ. ಬ್ಯಾಂಕ್ ನಮಗೆ ತಾಯಿಯಂತೆ ಸಲಹಿ ಪೋಷಿಸಿ ಬೆಳೆಸಿದ್ದು, ಅದನ್ನು ಜೀವನ ಪರ್ಯಂತ ಸ್ಮರಿಸುತ್ತೇವೆ,” ಎಂದು ನಿವೃತ್ತ ಡೆಪ್ಯುಟಿ ಜನರಲ್ ಮ್ಯಾನೇಜರ್ ಶಿವಕುಮಾರ್ ಹೇಳಿದರು.
“ಎಸ್‌ಬಿಎಂನಲ್ಲಿ ಸೇವೆ ಸಲ್ಲಿಸಿದ ಎಲ್ಲರಿಗೂ ಬ್ಯಾಂಕ್ ಎಲ್ಲವನ್ನು ಕೊಟ್ಟಿದೆ. ಬ್ಯಾಂಕ್ ಸೇವೆಯಲ್ಲಿರುವವರೆಗೆ ಸೌಲಭ್ಯ ನೀಡುವುದು ಸಹಜ. ಆದರೆ ನಿವೃತ್ತರಾದವರು ನಿಧನರಾದಾಗ ಅಂತ್ಯಸಂಸ್ಕಾರಕ್ಕೂ 15,000 ರೂ. ನೆರವು ನೀಡುವುದು ಎಸ್‌ಬಿಎಂ ಮಾನವೀಯ ಸಂಬಂಧವನ್ನು ತೋರಿಸುತ್ತದೆ. ರಕ್ತದಾನ ಸೇರಿದಂತೆ ಇತರೆ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡು ಜನರ ಜೀವನದ ಭಾಗವೆನಿಸಿದೆ. ಎಸ್‌ಬಿಎಂ ಇನ್ನು ಮುಂದೆ ಎಸ್‌ಬಿಐ ಆಗಲಿದೆ. ಆದರೆ ಕೇಂದ್ರ ಕಚೇರಿ ಹೆಸರಿನ ಕೆಳಗೆಯೇ ಎಸ್‌ಬಿಎಂ ವೃತ್ತ ಎಂಬುದು ಶಾಶ್ವತವಾಗಿ ಉಳಿಯಲಿದೆ” ಎಂದು ನಿವೃತ್ತ ಚೀಫ್ ಮ್ಯಾನೇಜರ್ ಪ್ರಕಾಶ್ ತಿಳಿಸಿದರು.
100 ವರ್ಷ ಮೀರಿದ ಕಟ್ಟಡವನ್ನು ಪಾರಂಪರಿಕ ಕಟ್ಟಡ ಎಂದು ಗುರುತಿಸಿ ಸಂರಕ್ಷಿಸಲಾಗುತ್ತದೆ. ಆದರೆ 100 ವರ್ಷ ಸೇವೆ ಸಲ್ಲಿಸಿದ ಬ್ಯಾಂಕ್‌ನ ಅಸ್ತಿತ್ವವೂ ಇಲ್ಲದಂತೆ ವಿಲೀನಗೊಳಿಸಿರುವುದು ವಿಷಾದನೀಯ. ಎಸ್ ಬಿಎಂ ಉದ್ಯೋಗಿಗಳಿಗೆ ಪಿಂಚಣಿ ಸೌಲಭ್ಯದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಎಸ್‌ಬಿಐ ಎಂದರೆ 50 ವರ್ಷದೊಳಗಿನವರು ಎಂಬ ಭಾವನೆಯಿಂದ 50 ವರ್ಷ ಮೀರಿದವರೇ ಬೇಡವೆನ್ನುವ ಭಾವನೆ ಸರಿಯಲ್ಲ. ಇಷ್ಟಾದರೂ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸುವುದಿಲ್ಲ.
ಬ್ಯಾಂಕ್ ನಮಗೆ ಎಲ್ಲವನ್ನು ನೀಡಿದೆ. ಹಾಗಾಗಿ ಬ್ಯಾಂಕ್‌ನ ಯಾವುದೇ ಗ್ರಾಹಕರು ತಮ್ಮ ಖಾತೆ ತೊರೆಯಬಾರದು. ಮುಂದೆಯೂ ಉತ್ತಮ ಸೇವೆ ನೀಡುವ ಭರವಸೆ ನೀಡುತ್ತೇವೆ” ಎಂದು ಎಬಿಒಎ ಎಸ್‌ಬಿಎಂ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್ ಹೇಳಿದರು.
ಎಸ್‌ಬಿಎಂನಲ್ಲಿ 35 ವರ್ಷ ಸೇವೆ ಸಲ್ಲಿಸಿದ್ದು, ಶುಕ್ರವಾರ ನಿವೃತ್ತನಾಗುತ್ತಿದ್ದೇನೆ. ಎಸ್‌ಬಿಎಂ ಕೂಡ ಶುಕ್ರವಾರ ಅಸ್ತಿತ್ವ ಕಳೆದುಕೊಂಡು ಎಸ್‌ಬಿಐನಲ್ಲಿ ವಿಲೀನಗೊಳ್ಳುತ್ತಿದೆ. ಎಸ್‌ಬಿಎಂನಲ್ಲೇ ಸುದೀರ್ಘ ಸೇವೆ ಸಲ್ಲಿಸಿ ಅದೇ ಬ್ಯಾಂಕ್‌ನಲ್ಲಿ ನಿವೃತ್ತಿಯಾಗುತ್ತಿರುವುದಕ್ಕೆ ವೈಯಕ್ತಿಕವಾಗಿ ಸಂತಸವಿದೆ. ಶನಿವಾರದಿಂದ ಎಸ್‌ಬಿಐ ಅಸ್ತಿತ್ವಕ್ಕೆ ಬರಲಿದ್ದು, ಹೊಸ ವ್ಯವಸ್ಥೆ ಹೇಗಿರಲಿದೆ ಎಂದು ಕುತೂಹಲ ಮೂಡಿದೆ” ಎಂದು ಹಿರಿಯ ಮ್ಯಾನೇಜರ್ ಎನ್.ಡಿ.ಲಕ್ಕಪ್ಪ ಹೇಳಿದರು.
“”ಎಸ್‌ಬಿಎಂ ಗ್ರಾಹಕರೊಂದಿಗೆ ಬ್ಯಾಂಕಿಂಗ್ ವ್ಯವಹಾರಕ್ಕಷ್ಟೇ ಸೀಮಿತವಾಗದೆ ಒಂದು ಆತ್ಮೀಯ ನಂಟು ಬೆಸೆದುಕೊಂಡಿತ್ತು. ಬಸ್ಸು- ರೈಲ್ವೆ ನಿಲ್ದಾಣ, ಸರ್ಕಾರಿ ಆಸ್ಪತ್ರೆಯಂತೆ ಎಸ್‌ಬಿಎಂ ಕೂಡ ಜನಜೀವನದ ಒಂದು ಅಂಗ ಎಂಬ ಭಾವನೆಯಿದೆ. ಎಸ್‌ಬಿಎಂ ಕ್ಯಾಂಟೀನ್ ಬಳಸುವುದು, ದಾಹವಾಗಿ ದಣಿದಾಗ ಬ್ಯಾಂಕ್‌ಗೆ ಬಂದು ನೀರು ಕುಡಿಯುವುದು, ಹಿರಿಯ ನಾಗರಿಕರು ವಾರಕ್ಕೊಮ್ಮೆ ಬ್ಯಾಂಕ್‌ಗೆ ಬಂದು ಮಾತನಾಡಿಸಿಕೊಂಡು ಹೋಗುವುದು ಸೇರಿದಂತೆ ಗ್ರಾಹಕರು ಬ್ಯಾಂಕ್‌ನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅದೆಲ್ಲಾ ಮುಂದೆಯೂ ಮುಂದುವರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ” ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಇನ್ನೂ ಮೂರ್ನಾಲ್ಕು ವಾರ ಹಳೇ ಬ್ರಾಂಚ್ ಗತಿ: ಎಸ್‌ಬಿಎಂ ಕಾನೂನಾತ್ಮಕವಾಗಿ ಏ.1ರಿಂದ ಎಸ್‌ಬಿಐನಲ್ಲಿ ವಿಲೀನವಾಗಲಿದೆ. ಆದರೆ ಗ್ರಾಹಕರ ಡೇಟಾ ದಾಖಲೆಗಳು ವಿಲೀನವಾಗಲು ಮೂರ್‍ನಾಲ್ಕು ವಾರ ಬೇಕಾಗಬಹುದು. ಅಲ್ಲಿಯವರೆಗೆ ಎಸ್‌ಬಿಎಂ ಗ್ರಾಹಕರು ಹಳೆಯ ಎಸ್‌ಬಿಎಂ ಶಾಖೆಗಳಲ್ಲೇ ವ್ಯವಹರಿಸಬೇಕು.
ಹಾಗೆಯೇ ಎಸ್‌ಬಿಐ ಗ್ರಾಹಕರು ಆಯಾ ಬ್ಯಾಂಕ್‌ಗಳಲ್ಲೇ ವ್ಯವಹರಿಸಲಿದ್ದಾರೆ. ದಾಖಲೆಗಳ ವಿಲೀನ ಪೂರ್ಣಗೊಂಡ ಬಳಿಕ ಒಂದೇ ಬ್ಯಾಂಕ್ ಸೇವೆ ಸಿಗಲಿದೆ. ದಾಖಲೆಗಳ ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗ್ರಾಹಕರಿಗೆ ಎಸ್‌ಎಂಎಸ್ ಸಂದೇಶ ಸೇರಿದಂತೆ ಬಹಿರಂಗವಾಗಿಯೂ ಪ್ರಚಾರ ನೀಡಲಾಗುವುದು ಎಂದು ಎಸ್‌ಬಿಎಂ ಪ್ರಧಾನ ವ್ಯವಸ್ಥಾಪಕ ಎಚ್.ಟಿ.ನೇಮಿರಾಜ್ ತಿಳಿಸಿದರು.
ಎಸ್‌ಬಿಎಂನ ಚೆಕ್ ಹಾಗೂ ಐಎಫ್ಎಸ್‌ಸಿ ಕೋಡ್‌ಗಳನ್ನು ಇನ್ನೂ ಆರು ತಿಂಗಳ ಕಾಲ ಬಳಸಲು ಅವಕಾಶ ಕಲ್ಪಿಸಿರುವುದರಿಂದ ಹೆಚ್ಚಿನ ತೊಂದರೆಯಾಗದು. ದೇಶಾದ್ಯಂತ ಎಸ್‌ಬಿಎಂನ 1078 ಶಾಖೆಗಳಿದ್ದು, ಇದರಲ್ಲಿ 800ಕ್ಕೂ ಹೆಚ್ಚು ಶಾಖೆ ರಾಜ್ಯದಲ್ಲಿವೆ.
ಹಾಗೆಯೇ 1,500 ಎಟಿಎಂ ಕೇಂದ್ರಗಳು ಎಸ್‌ಬಿಐನಲ್ಲಿ ವಿಲೀನವಾಗಲಿವೆ. ಬ್ಯಾಂಕ್‌ನ ಅಧಿಕಾರಿ, ನೌಕರರಿಗೆ ಸೂಕ್ತ ತರಬೇತಿ ಸಹ ನೀಡಲಾಗಿದೆ. ಎಸ್‌ಬಿಎಂನ ಎಲ್ಲ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುವ ಜತೆಗೆ ಮುಂದೆಯೂ ಉತ್ತಮ ಸೇವೆ ಒದಗಿಸುವ ಭರವಸೆ ನೀಡುತ್ತೇವೆ ಎಂದು ಹೇಳಿದರು.
ನೆನಪು ಸಂಗ್ರಹಾಲಯಬ್ಯಾಂಕಿನ ಇತಿಹಾಸ, ಬೆಳವಣಿಗೆ ಹಾಗೂ ಕೊಡುಗೆ ಬಗ್ಗೆ ಮಾಹಿತಿ ನೀಡುವ “ನೆನಪು’ ಸಾಕ್ಷ್ಯಚಿತ್ರ ಸಂಗ್ರಹವನ್ನು ಕೇಂದ್ರ ಕಚೇರಿ ಆವರಣದಲ್ಲಿ ಶುಕ್ರವಾರ ಅನಾವರಣಗೊಳಿಸಲಾಯಿತು. ಇದೇ ಸಂದರ್ಭ ದಲ್ಲಿ ನೌಕರರ ಸಂಘವು ಎಸ್‌ಬಿಎಂ ಬೀಳ್ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಎಸ್‌ಬಿಎಂ, ಎಸ್‌ಬಿಐನಲ್ಲಿ ವಿಲೀನವಾಗಿರುವುದರಿಂದ ಗ್ರಾಹಕರಿಗೆ ಬದಲಾವಣೆ ಕಾಣು ವುದಿಲ್ಲ. ಇನ್ನೊಂದೆಡೆ ಉದ್ಯೋಗಿಗಳು ವೃತ್ತಿಪರವಾಗಿ ಇನ್ನಷ್ಟು ಪ್ರಗತಿ ಸಾಧಿಸಲು ಅನುಕೂಲವಾಗಲಿದೆ. ಯಾವುದೇ ಶ್ರೇಣಿಯ ಅಧಿಕಾರಿಯ ಸ್ಥಾನಮಾನದಲ್ಲೂ ಬದಲಾವಣೆಯಾಗುವುದಿಲ್ಲ. ಬಹುತೇಕ ಅಧಿಕಾರಿ, ನೌಕರರು ಸರಿಸುಮಾರು ಅದೇ ಶಾಖೆ, ವಿಭಾಗದಲ್ಲಿ ಕಾರ್ಯ ನಿರ್ವಹಿಸುವುದರಿಂದ ಗ್ರಾಹಕರ ಸೇವೆಯಲ್ಲೂ ವ್ಯತ್ಯಾಸ ಕಾಣದು.
-ಸುರೇಶ್ ಸವೇಕರ್,
ಜನರಲ್ ಮ್ಯಾನೇಜರ್, ಎಸ್‌ಬಿಎಂ ಸಾಲ ವಿಳಂಬ
ಸಾಮಾನ್ಯವಾಗಿ ಏಪ್ರಿಲ್‌ನ ಮೊದಲ ಎರಡು ವಾರಗಳಲ್ಲಿ ಲೆಕ್ಕಪರಿಶೋಧನೆ ನಡೆಯುವ ಕಾರಣ ಸಾಲ ಸೌಲಭ್ಯ ಕಲ್ಪಿಸುವ ಕಾರ್ಯಕ್ಕೆ ಆದ್ಯತೆ ಕಡಿಮೆ ಇರಲಿದೆ. ಹಾಗಿದ್ದರೂ ಸಂಬಂಧಪಟ್ಟ ಶಾಖಾ ವ್ಯವಸ್ಥಾಪಕರಿಗೆ ಎಸ್‌ಬಿಐನ ನಿಯಮಾನುಸಾರ ಸಾಲ ವಿತರಿಸಲು ಅಧಿಕಾರ ನೀಡಲಾಗಿದೆ. ನಿರ್ದಿಷ್ಟ ಮಿತಿಗಿಂತ ಹೆಚ್ಚು ಸಾಲ ನೀಡಿಕೆ ಸಂಬಂಧ ಮೇಲ್ವಿಚಾರಣೆಗೆ ಸಮಿತಿಗಳನ್ನು ರಚಿಸಲಾಗಿದೆ. ವಿಲೀನ ಹಿನ್ನೆಲೆಯಲ್ಲಿ ಬಡ್ತಿಗೆ ಸಂಬಂಧಪಟ್ಟಂತೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ಮೂಲಗಳು ತಿಳಿಸಿವೆ. – ಎಂ.ಕೀರ್ತಿಪ್ರಸಾದ್