Advertisement

ಗ್ಯಾಸ್‌ಲೈನ್‌ಗೆ ಅನುಮತಿ ಇದ್ರೂ ಅವಕಾಶವಿಲ್ಲ

06:41 AM Feb 06, 2019 | Team Udayavani |

ಬೆಂಗಳೂರು: ಇಲ್ಲಿ ರಸ್ತೆ ಅಗೆದು ಅನಿಲ ಕೊಳವೆ ಮಾರ್ಗ ಅಳವಡಿಸಲು ಅನುಮತಿ ಇದೆ. ಆದರೆ, ಅವಕಾಶ ಇಲ್ಲ! ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಈ ದ್ವಂದ್ವ ನಿಲುವು ಒಂದೆಡೆ ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ (ಗೇಲ್‌)ವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೆ, ಮತ್ತೂಂದೆಡೆ ಗ್ರಾಹಕರನ್ನು ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿದೆ. 

Advertisement

ಹೌದು, ಎರಡು ವರ್ಷಗಳ ಹಿಂದೆಯೇ ಬಿಟಿಎಂ ಲೇಔಟ್‌ನಲ್ಲಿ ನೈಸರ್ಗಿಕ ಅನಿಲ ಕೊಳವೆ ಮಾರ್ಗ ಅಳವಡಿಸಲು ಗೇಲ್‌ಗೆ ಬಿಬಿಎಂಪಿಯಿಂದ ಅನುಮತಿ ದೊರಕಿದೆ. ಆದರೆ, ಸ್ವತಃ ಪಾಲಿಕೆಯೇ ಹೊಸ ರಸ್ತೆ ಅಗೆಯುವಂತಿಲ್ಲ ಎಂಬ ಕಾರಣಕ್ಕೆ ಅಲ್ಲಿ ಕೊಳವೆ ಮಾರ್ಗ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದ ಕಾಮಗಾರಿ ಕಗ್ಗಂಟಾಗಿದ್ದು, ಇವರಿಬ್ಬರ ತಿಕ್ಕಾಟದ ನಡುವೆ ಹಣ ಪಾವತಿಸಿ ಹೆಸರು ನೋಂದಾಯಿಸಿರುವ ಸಾವಿರಕ್ಕೂ ಅಧಿಕ ಗ್ರಾಹಕರು ಸೌಲಭ್ಯ ವಂಚಿತರಾಗಿದ್ದಾರೆ. 

ಬಿಟಿಎಂ ಲೇಔಟ್‌ನಲ್ಲಿ ಸುಮಾರು 97 ಕಿ.ಮೀ. ಹಾಗೂ ಅದಕ್ಕೆ ಹೊಂದಿಕೊಂಡಿರುವ ಪಟ್ಟಾಭಿರಾಮನಗರದಲ್ಲಿ 30 ಕಿ.ಮೀ. ಉದ್ದ ಅನಿಲ ಕೊಳವೆಮಾರ್ಗ ಹಾದುಹೋಗಲಿದೆ. ಇಲ್ಲಿ ಕೊಳವೆ ಮಾರ್ಗ ಅಳವಡಿಕೆಗಾಗಿ ರಸ್ತೆ ಅಗೆಯಲು 2016ರ ನವೆಂಬರ್‌ನಲ್ಲೇ 18 ಕೋಟಿ ರೂ. (ಎರಡೂ ರಸ್ತೆ ಸೇರಿ) ಪಾವತಿಸಿ, ಪಾಲಿಕೆ ಕೇಂದ್ರ ಕಚೇರಿಯಿಂದ ಅನುಮತಿಯನ್ನೂ ಪಡೆಯಲಾಗಿದೆ.

ಇನ್ನೇನು ಕಾಮಗಾರಿ ಕೈಗೆತ್ತಿಕೊಳ್ಳುವಷ್ಟರಲ್ಲಿ ಸ್ಥಳೀಯ ವಾರ್ಡ್‌ ಇಂಜಿನಿಯರ್‌, ಹೊಸ ರಸ್ತೆ ನಿರ್ಮಿಸುವುದರಿಂದ ಅಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬಾರದೆಂದು ನೋಟಿಸ್‌ ಜಾರಿ ಮಾಡಿದ್ದಾರೆ ಎಂದು ಗೇಲ್‌ನ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಅಲವತ್ತುಕೊಂಡರು.

2 ವರ್ಷಗಳಲ್ಲಿ ಮೂರು ಬಾರಿ ಈ ನೋಟಿಸ್‌ ನೀಡಲಾಗಿದೆ. ಕಾಮಗಾರಿ ಪ್ರಗತಿಯಾಗದ ಹಿನ್ನೆಲೆಯಲ್ಲಿ ಬಿಟಿಎಂ ಲೇಔಟ್‌ ಮತ್ತು ಪಟ್ಟಾಭಿರಮನಗರದಲ್ಲಿ ನೋಂದಣಿ ಪ್ರಕ್ರಿಯೆಯನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಹೊಸ ರಸ್ತೆಯ ಬಗ್ಗೆ ವರದಿ ನೀಡುವಂತೆ ಬಿಬಿಎಂಪಿಗೂ ಕೋರಲಾಗಿದೆ. ಈ ಮಧ್ಯೆ ಅಗತ್ಯಬಿದ್ದರೆ ಉದ್ದೇಶಿತ ಮಾರ್ಗದಿಂದ ಬೇರೆ ಕಡೆಗೆ ಅನಿಲ ಕೊಳವೆಮಾರ್ಗ ಅಳವಡಿಕೆ ಯೋಜನೆಯನ್ನು ಸ್ಥಳಾಂತರಿಸಲಾಗುವುದು ಎಂದೂ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

Advertisement

ಅನುಮತಿ ನೀಡಿದ್ದರೂ, ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಮೂಲಸೌಕರ್ಯ ಅನುಷ್ಠಾನಗಳ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯ ಗಮನಕ್ಕೂ ತರಲಾಗಿದೆ. ಖುದ್ದು ಮುಖ್ಯ ಕಾರ್ಯದರ್ಶಿ ಕೂಡ ಬಿಬಿಎಂಪಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದೇಶದಲ್ಲಿ 1 ವರ್ಷ; ಅನುಷ್ಠಾನ 3 ವರ್ಷ?: 2015ರ ಜುಲೈನಲ್ಲಿ ಬಿಬಿಎಂಪಿ ಆಯುಕ್ತರು ಹೊರಡಿಸಿದ ಸೂಚನೆ ಪ್ರಕಾರ ರಸ್ತೆ ನಿರ್ಮಾಣಗೊಂಡ ದಿನದಿಂದ ಒಂದು ವರ್ಷ ಡಿಎಲ್‌ಪಿ (defect liability period) ಇದ್ದು, ಈ ಅವಧಿಯಲ್ಲಿ ಉದ್ದೇಶಿತ ರಸ್ತೆಯನ್ನು ಅಗೆಯುವುದು ಅಥವಾ ಕತ್ತರಿಸುವುದು ಮಾಡುವಂತಿಲ್ಲ. ಆದರೆ, ಸ್ಥಳೀಯಮಟ್ಟದ ಅಧಿಕಾರಿಗಳು ಡಿಎಲ್‌ಪಿ ಅವಧಿ ಮೂರು ವರ್ಷ ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲೂ ದ್ವಂದ್ವ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ. 

ಕಣ್ಣಾಮುಚ್ಚಾಲೆ ಆಟ; ನಿವಾಸಿಗಳ ಆರೋಪ: “ಬಿಟಿಎಂ ಲೇಔಟ್‌ನಲ್ಲಿ ಕೊಳವೆ ಮಾರ್ಗ ಅಳವಡಿಕೆಗೆ ಅವಕಾಶ ನೀಡುತ್ತಿಲ್ಲ ಎಂದು ಗೇಲ್‌ ಹೇಳುತ್ತಿದೆ. ಆದರೆ, ಕಳೆದೆರಡು ವರ್ಷಗಳಲ್ಲಿ ಹಲವು ಉದ್ದೇಶಗಳಿಗೆ ಜಲಮಂಡಳಿ, ಬೆಸ್ಕಾಂ ಸೇರಿದಂತೆ ಒಂದಿಲ್ಲೊಂದು ಸಂಸ್ಥೆಗಳು ರಸ್ತೆ ಅಗೆಯುತ್ತಲೇ ಇವೆ.

ಯಾರನ್ನು ನಂಬುವುದು ಅಥವಾ ಯಾರನ್ನು ಬಿಡುವುದು? ಈ ಕಣ್ಣಾಮುಚ್ಚಾಲೆ ಆಟ ತಿಳಿಯುತ್ತಲೇ ಇಲ್ಲ. ಇವರಿಬ್ಬರ ನಡುವೆ ನಾವು ಸೌಲಭ್ಯ ವಂಚಿತರಾಗುತ್ತಿದ್ದೇವೆ’ ಎಂದು ಬಿಟಿಎಂ ಲೇಔಟ್‌ನ ಕೆಎಎಸ್‌ ಆಫೀಸರ್ ಕಾಲೊನಿಯ ಸ್ಪಂದನ ನಾಗರಿಕ ವೇದಿಕೆ ಅಸಹಾಯಕತೆ ವ್ಯಕ್ತಪಡಿಸುತ್ತದೆ. 

“2018ರ ಜನವರಿಯಲ್ಲೇ ನಾವು ನೈಸರ್ಗಿಕ ಅನಿಲ ಸಂಪರ್ಕಕ್ಕಾಗಿ ಹೆಸರು ನೋಂದಣಿ ಮಾಡಿಸಿದ್ದೇವೆ. ಇದುವರೆಗೆ ಸಂಪರ್ಕ ಕಲ್ಪಿಸಿಲ್ಲ. ಸುರಕ್ಷಿತ ಮತ್ತು ಗುಣಮಟ್ಟ ಹಾಗೂ ಕೈಗೆಟಕುವ ದರದಲ್ಲಿ ದೊರೆಯುವ ಈ ಸೌಲಭ್ಯವು ನೆರೆಯ ಎಚ್‌ಎಸ್‌ಆರ್‌ ಲೇಔಟ್‌ಗೆ ಸಿಕ್ಕಿದೆ. ಎರಡು ವರ್ಷಗಳಿಂದ ಕಾಯುತ್ತಿರುವ ನಮಗೆ ಮರೀಚಿಕೆಯಾಗಿದೆ’ ಎಂದು ಸ್ಪಂದನ ನಾಗರಿಕ ವೇದಿಕೆ ಉಪಾಧ್ಯಕ್ಷ ಶಂಕರ ಎಸ್‌. ಶೆಟ್ಟಿ ಬೇಸರ ವ್ಯಕ್ತಪಡಿಸಿದರು. 

ಸುರಕ್ಷಿತ ಅನಿಲ: ನೇರವಾಗಿ ಮನೆಗೆ ಸಂಪರ್ಕ ಕಲ್ಪಿಸುವ ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಎಲ್‌ಪಿಜಿಗಿಂತ ಅಗ್ಗ ಹಾಗೂ ಸುರಕ್ಷಿತ ಮತ್ತು ದಿನದ 24 ಗಂಟೆ ಲಭ್ಯವಾಗುವಂತಹದ್ದು. ಒಂದು ಎಲ್‌ಪಿಜಿ ಸಿಲಿಂಡರ್‌ಗೆ ತಗಲುವ ವೆಚ್ಚಕ್ಕೆ ಹೋಲಿಸಿದರೆ, ಸಿಎನ್‌ಜಿ ಸಬ್ಸಿಡಿ ರಹಿತ ಶೇ. 33ರಷ್ಟು ಹಾಗೂ ಸಬ್ಸಿಡಿ ಸಹಿತ ಶೇ. 11ರಷ್ಟು ಅಗ್ಗವಾಗಿದೆ.

ಅಲ್ಲದೆ, ಈ ಅನಿಲ ಸೋರಿಕೆಯಿಂದ ಯಾವುದೇ ಅಪಾಯ ಇಲ್ಲ. ಯಾಕೆಂದರೆ ಇದು ಗಾಳಿಗಿಂತ ಹಗುರವಾಗಿದ್ದು, ಸೋರಿಕೆಯಾದರೂ ಗಾಳಿಯಲ್ಲಿ ಮರೆಯಾಗಿಬಿಡುತ್ತದೆ. ಈ ಕಾರಣಕ್ಕೆ ಜನ ಹೆಚ್ಚು ಸಿಎನ್‌ಜಿ ಸಂಪರ್ಕಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ.

-2016ರ ನ. 22ಕ್ಕೆ ಅನುಮತಿ
-2017ರ ಜು. 2017ಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳದಂತೆ ಪತ್ರ
-2018ರ ಆ. 14ಕ್ಕೆ ಮತ್ತೆ ಅನುಮತಿ
-2018ರ ಅ. 9ಕ್ಕೆ ಮತ್ತೆ ಕಾಮಗಾರಿ ಕೈಗೆತ್ತಿಕೊಳ್ಳದಿರಲು ಪತ್ರ

ಬಿಟಿಎಂ ಲೇಔಟ್‌ನಲ್ಲಿ ಹೊಸದಾಗಿ ರಸ್ತೆ ನಿರ್ಮಿಸಿರುವುದರಿಂದ ಗೇಲ್‌ಗೆ ಅನುಮತಿ ನೀಡಿಲ್ಲ. ಡಿಎಲ್‌ಪಿ ಒಂದು ವರ್ಷ ಇದ್ದು, ಅದು ಪೂರ್ಣಗೊಂಡ ನಂತರ ಕಾಮಗಾರಿ ಕೈಗೆತ್ತಿಕೊಳ್ಳಬಹುದು. ಅಷ್ಟಕ್ಕೂ 2016ರಲ್ಲೇ ಅನುಮತಿ ನೀಡಿದ್ದರ ಬಗ್ಗೆ ಪರಿಶೀಲಿಸಿ, ನಂತರ ಪ್ರತಿಕ್ರಿಯಿಸುತ್ತೇನೆ. ಅಷ್ಟಕ್ಕೂ ಎರಡು ವರ್ಷಗಳ ಹಿಂದೆಯೇ ಅನುಮತಿ ಸಿಕ್ಕಿದ್ದರೆ, ಆಗಲೇ ಈ ಕಾಮಗಾರಿ ಕೈಗೆತ್ತಿಕೊಳ್ಳಬಹುದಿತ್ತು.
-ಎನ್‌. ಮಂಜುನಾಥ ಪ್ರಸಾದ್‌, ಆಯುಕ್ತರು, ಬಿಬಿಎಂಪಿ.

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next