Advertisement

ಮಾರ್ಚ್‌ನಲ್ಲಿ ಮನೆಗಳಿಗೆ ಪೈಪ್‌ ಮೂಲಕ ಗ್ಯಾಸ್‌ ಸರಬರಾಜು

08:40 AM Feb 20, 2020 | Sriram |

ಕಾಸರಗೋಡು: ಕೊಚ್ಚಿ-ಮಂಗಳೂರು ಅಡುಗೆ ಅನಿಲ ಪೈಪ್‌ ಲೈನ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದೀಗ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ಮಾರ್ಚ್‌ ತಿಂಗಳಲ್ಲಿ ಮಹತ್ವಾಕಾಂಕ್ಷೆಯ ಗೈಲ್‌ ಯೋಜನೆ ಪೂರ್ತಿಯಾಗಲಿದ್ದು, ಆ ಬಳಿಕ ಮನೆ ಮನೆಗಳಿಗೆ ಅಡುಗೆ ಅನಿಲ ಪೈಪ್‌ ಮೂಲಕ ತಲುಪಲಿದೆ. ಕೇರಳದ 7 ಜಿಲ್ಲೆಗಳಲ್ಲಿ ಪೈಪ್‌ ಲೈನ್‌ ಮುಖಾಂತರ ಅಡುಗೆ ಅನಿಲ ಮನೆಗಳಿಗೆ ತಲುಪಲಿದೆ.

Advertisement

ಕಾಸರಗೋಡು ಜಿಲ್ಲೆಯಲ್ಲಿ ಚಂದ್ರಗಿರಿ ಹೊಳೆಯಲ್ಲಿ ಸಾಗುವ ಪೈಪ್‌ ಅಳವಡಿಸಲು ಮಾತ್ರವೇ ಬಾಕಿಯಿದೆ. ಈ ಕಾಮಗಾರಿ ಮಾರ್ಚ್‌ ತಿಂಗಳಲ್ಲಿ ಪೂರ್ತಿಯಾಗಲಿದೆ.
ಕಲ್ಲಿಕೋಟೆ ಜಿಲ್ಲೆಯ ಚಾಲಿಯಾರ್‌, ಇರುವಳಿಂಞಿ, ಕುಟ್ಯಾಡಿ, ಮಲಪ್ಪುರ ಜಿಲ್ಲೆಯ ಭರತಪ್ಪುಳ ಹೊಳೆಯ ಅಡಿಯಲ್ಲಿ ಸಾಗುವ ಪೈಪ್‌ಗ್ಳನ್ನು ಅಳವಡಿಸುವ ಕಾಮಗಾರಿ ಈಗಾಗಲೇ ಪೂರ್ತಿಯಾಗಿದೆ. 96 ಕಿ.ಮೀ. ನೀಳಕ್ಕೆ ವಿಸ್ತರಿಸಿರುವ ಕೊಚ್ಚಿ-ಕುಟ್ಟನ್ನಾಡು ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಸುರಕ್ಷಾ ಪರಿಶೋಧನೆ ನಡೆಯುತ್ತಿದೆ.

404 ಕಿ.ಮೀ. ಗ್ಯಾಸ್‌ ಪೈಪ್‌ಲೈನ್‌
ಕೊಚ್ಚಿ-ಕುಟ್ಟನ್ನಾಡು-ಮಂಗಳೂರು ಪೈಪ್‌ ಲೈನ್‌ 404 ಕಿ.ಮೀ. ನೀಳದಲ್ಲಿ ವಿಸ್ತರಿಸಿದೆ. ಇದರ ಶೇ. 99 ಕಾಮಗಾರಿ ಪೂರ್ತಿಯಾಗಿದೆ. ಕೇರಳದ 7 ಜಿಲ್ಲೆಗಳಲ್ಲಿ ಗ್ಯಾಸ್‌ ಪೈಪ್‌ಲೈನ್‌ ಹಾದು ಹೋಗುತ್ತದೆ. ಕೇರಳದಲ್ಲಿ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ, ತಮಿಳುನಾಡಿನಲ್ಲಿ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪವಿದೆ.

ಗೈಲ್‌, ಐಒಸಿ ಹಾಗೂ ಅದಾನಿ ಗ್ರೂಪ್‌
ಮಂಗಳೂರಿನಿಂದ ಕೊಚ್ಚಿಯ ವರೆಗೆ ಹಾದು ಹೋಗುವ ಪ್ರಮುಖ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿಯನ್ನು ಗೈಲ್‌ ಕಂಪೆನಿ ಮೂಲಕ ನಡೆದಿದೆ. ಮನೆಗಳಿಗೆ ಹಾಗೂ ಇತರೆಡೆಗಳಿಗೆ ವಿತರಿಸುವ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುವ ಪೈಪ್‌ಲೈನ್‌ಗಳ ಕಾಮಗಾರಿಯನ್ನು ಐ.ಒ.ಸಿ. ಮತ್ತು ಅದಾನಿ ಗ್ರೂಪ್‌ ನಿರ್ವಹಿಸಲಿದೆ.

ಈ ಎಲ್ಲ ಕಂಪೆನಿಗಳು ಜತೆಯಾಗಿ ಪೈಪ್‌ಲೈನ್‌ ಅಳವಡಿಸಬೇಕೆಂದು ತೀರ್ಮಾನಿಸಲಾಗಿದ್ದರೂ ಅದು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಕಂಪೆನಿಗಳಿಗೆ ಸಹಿತ ಬೃಹತ್‌ ಪ್ರಮಾಣದಲ್ಲಿ ಗ್ಯಾಸ್‌ ವಿತರಿಸುವ ಪೈಪ್‌ಲೈನ್‌ನ್ನು ಗೈಲ್‌ ಕಂಪೆನಿ ಅಳವಡಿಸಿದೆ.

Advertisement

ಮನೆ, ವಾಹನಗಳಿಗೆ ವಿತರಿಸುವ ಗ್ಯಾಸ್‌ ಪೈಪ್‌ಲೈನ್‌ಗಳನ್ನು ಐಒಸಿ ಮತ್ತು ಅದಾನಿ ಗ್ರೂಪ್‌ ಅಳವಡಿಸುವುದು. ಈ ಕಾಮಗಾರಿಗಳು ಮುಂದಿನ ತಿಂಗಳೊಳಗೆ ಪೂರ್ತಿಯಾಗಲಿವೆ.

2010ರಲ್ಲಿ ಗ್ಯಾಸ್‌ ಪೈಪ್‌ಲೈನ್‌ ಯೋಜನೆ ಯನ್ನು ಆರಂಭಿಸಲಾಗಿತ್ತು. 2012 ಜನವರಿ ತಿಂಗಳಲ್ಲಿ ಕೊಚ್ಚಿ-ಮಂಗಳೂರು-ಕೊಯಮ ತ್ತೂರು-ಬೆಂಗಳೂರು ಗ್ಯಾಸ್‌ ಪೈಪ್‌ಲೈನ್‌ ಆರಂಭಿಸುವುದಕ್ಕೆ ಅನುಮತಿ ಲಭಿಸಿತ್ತು. ಆದರೆ ಭೂಸ್ವಾಧೀನ ಸಾಧ್ಯವಾಗದಿದ್ದುದರಿಂದ 2014 ರಲ್ಲಿ ಎಲ್ಲ ಗುತ್ತಿಗೆ ಒಡಂಬಡಿಕೆಯನ್ನು ಗೈಲ್‌ ಕಂಪೆನಿ ರದ್ದುಗೊಳಿಸಿತ್ತು. ನಿಧಾನವಾಗಿ ಸಾಗುತ್ತಿದ್ದ ಯೋಜನೆಗೆ 2016ರಲ್ಲಿ ಮತ್ತೆ ಜೀವ ಬಂತು.

ಕಡಿಮೆ ವೆಚ್ಚದಲ್ಲಿ ವಿತರಣೆ
ಮಂಗಳೂರು-ಕೊಚ್ಚಿ ಗ್ಯಾಸ್‌ ಪೈಪ್‌ಲೈನ್‌ ಯೋಜನೆ ಕಾಮಗಾರಿ ಪೂರ್ತಿಯಾಗುವುದರೊಂದಿಗೆ ಕಡಿಮೆ ವೆಚ್ಚದಲ್ಲಿ ಅಡುಗೆ ಅನಿಲವನ್ನು ಪೈಪ್‌ಗ್ಳ ಮುಖಾಂತರ ಮನೆ ಮನೆಗಳಿಗೆ ವಿತರಿಸಲು ಸಾಧ್ಯವಾಗಲಿದೆ.
– ಕೆ.ಆರ್‌.ರಾಜೇಶ್‌
ಲೇಸನ್‌ ಆಫೀಸರ್‌,ಗೈಲ್‌.

Advertisement

Udayavani is now on Telegram. Click here to join our channel and stay updated with the latest news.

Next