ಚಿಕ್ಕಬಳ್ಳಾಪುರ: ದಿನೇ ದಿನೇ ದುಬಾರಿ ಆಗುತ್ತಿರುವ ಸದ್ಯ ಸಾವಿರ ರೂ.ಸನಿಹದಲ್ಲಿರುವ ಅಡುಗೆ ಅನಿಲಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಲಿದೆಯೆಂಬ ವದಂತಿ ಹಿನ್ನೆಲೆಯಲ್ಲಿ ಜಿಲ್ಲೆಯ ಅಡುಗೆ ಅನಿಲ ಸರಬರಾಜು ಮಾಡುವ ಗ್ಯಾಸ್ ಏಜೆನ್ಸಿಗಳ ಮುಂದೆ ಗ್ರಾಹಕರು ಕೆವೈಸಿ ಮಾಡಿಸಲು ಮುಗಿ ಬಿದ್ದಿರುವ ಪರಿಣಾಮ ಎಲ್ಲೆಡೆ ನೂಕುನುಗ್ಗಲು ಕಾಣುತ್ತಿದೆ.
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾದ್ಯಂತ ಅಡುಗೆ ಅನಿಲ ಸಂಪರ್ಕ ಇರುವ ಗ್ರಾಹಕರ ಇ-ಕೆವೈಸಿ ಸಂಗ್ರಹಕ್ಕೆ ಅಡುಗೆ ಅನಿಲ ಸರಬರಾಜುದಾರರು ಮುಂದಾಗಿದ್ದು, ಇದರ ಪರಿಣಾಮ ಗ್ಯಾಸ್ ಏಜೆನ್ಸಿಗಳ ಕಚೇರಿಗಳ ಮುಂದೆ ಗ್ರಾಹಕರು ಸಾಲು ಗಟ್ಟಿ ನಿಂತಿದ್ದಾರೆ.
ಸಬ್ಸಿಡಿ ವದಂತಿಗೆ ಗ್ರಾಹಕರು ದಾಗುಂಡಿ: ಮಾರುಕಟ್ಟೆಯಲ್ಲಿ 1000 ರೂ. ಗಡಿ ದಾಟಿದ್ದ ಅಡುಗೆ ಅನಿಲದ ಸಿಲಿಂಡರ್ ಇತ್ತೀಚೆಗೆ 100 ರೂ.ಕಡಿತವಾಗಿ 1000 ರೂ. ಸನಿಹದಲ್ಲಿದೆ. ಆದರೆ ಬಡವರಿಗೆ, ಮಧ್ಯಮ ವರ್ಗದವರಿಗೆ ಅಡುಗೆ ಅನಿಲದ ಸಿಲಿಂಡರ್ ಬೆಲೆ ಭಾರೀ ದುಬಾರಿ ಅನಿಸಿದೆ. ಇದರ ನಡುವೆ ಕೇಂದ್ರ ಸರ್ಕಾರ ಅಡುಗೆ ಅನಿಲ ಗ್ರಾಹಕರ ಆಧಾರ್ ಜೋಡಣೆಗೆ ಸೂಚನೆ ನೀಡಿದೆ. ಆದರೆ ಇದನ್ನು ಕೆಲವರು ಸಬ್ಸಿಡಿ ಸಿಗುತ್ತದೆಯೆಂದು ಹೇಳಿ ವದಂತಿ ಹಬ್ಬಿಸಿರುವ ಪರಿಣಾಮ, ಗ್ರಾಹಕರು ಬೆಳ್ಳಂ ಬೆಳಗ್ಗೆಯಿಂದ ಕೆಲಸ ಕಾರ್ಯ ಬಿಟ್ಟು ಗ್ಯಾಸ್ ಏಜೇನ್ಸಿಗಳ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಂದು ಕಡೆ ಗ್ಯಾಸ್ ಏಜೆನ್ಸಿಗಳ ಕಚೇರಿ ಇಕ್ಕಿಟ್ಟಿನ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ಕಚೇರಿಗಳನ್ನು ಹೊಂದಿದ್ದು, ಇದರ ಪರಿಣಾಮ ಕೆವೈಸಿ ಮಾಡಿಸಿಕೊಳ್ಳಲು ಗ್ರಾಹಕರು ಗಂಟೆಗಟ್ಟಲೇ ಬೀದಿಗಳಲ್ಲಿ ನಿಲ್ಲುವಂತಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಗ್ರಾಹಕರಿಗೆ ಅಡುಗೆ ಅನಿಲ ಪೂರೈಸುವ ಹಿಂದೂಸ್ತಾನಿ ಹಾಗೂ ಭಾರತ್ ಪೆಟ್ರೋಲಿಯಂ ಕಂಪನಿಯ ಏಜೇನ್ಸಿಗಳು ಮಾತ್ರ ಗ್ರಾಹಕರ ಪರದಾಟದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಕನಿಷ್ಠ ಹೆಚ್ಚುವರಿ ಕಂಪ್ಯೂಟರ್‌ಗಳನ್ನು ಇಟ್ಟು ನೋಂದಣಿಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡದೇ ಇರುವ ಪರಿಣಾಮ, ಕೆಲವೊಮ್ಮೆ ಪದೇ ಪದೇ ಸರ್ವರ್ ಸಮಸ್ಯೆಯಿಂದಲೂ ಕೂಡ ಕೆವೈಸಿ ಮಾಡಿಸುವುದು ವಿಳಂಬವಾಗಿ ಗ್ರಾಹಕರು ಹೈರಾಣಗುತ್ತಿದ್ದಾರೆ.
ಜಿಲ್ಲೆಯಲ್ಲಿ ನಾಲ್ಕೈದು ಲಕ್ಷ ಅನಿಲ ಸಂಪರ್ಕ:
ಜಿಲ್ಲೆಯಲ್ಲಿ 3.08 ಲಕ್ಷ ಬಿಪಿಎಲ್ ಕುಟುಂಬಗಳು ಇವೆ. 19,038 ಎಪಿಎಲ್ ಕಾರ್ಡ್‌ಗಳು ಇವೆ. ಅಂತ್ಯೋದಯ ಪಡಿತರ ಚೀಟಿಗಳು 28,472 ಇವೆ. ಒಟ್ಟು 3,28,543 ಪಡಿತರ ಚೀಟಿಗಳು ಇವೆ. ಇವುಗಳ ಫಲಾನುಭವಿಗಳು 10,35,418 ಮಂದಿ ಇದ್ದಾರೆ. ಜಿಲ್ಲೆಯಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು. ಪಡಿತರ ಚೀಟಿಗಳ ಸಂಖ್ಯೆಗಿಂತ ಅಧಿಕ ಪ್ರಮಾಣದಲ್ಲಿ ಅಡುಗೆ ಅನಿಲ ಸಂಪರ್ಕ ಇರುವ ಗ್ರಾಹಕರು ಜಿಲ್ಲೆಯಲ್ಲಿ ಇದ್ದಾರೆಂದು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮನೆ ಬಾಗಿಲಲ್ಲೇ ಆಧಾರ್ ಲಿಂಕ್ ಮಾಡಬಹುದು:
ಇನ್ನೂ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಡೋರ್ ಡಿಲಿವರಿ ಮಾಡುವ ಡಿಲಿವರಿ ಬಾಯ್‌ಗಳ ಬಳಿಯೆ ಮನೆ ಅಂಗಳದಲ್ಲಿ ಅಡುಗೆ ಅನಿಲ ಸಿಲಿಂಡರ್ ಹೊಂದಿರುವ ಗ್ರಾಹಕರು ತಮ್ಮ ಆಧಾರ್ ಲಿಂಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಯಾರು ಈ ಬಗ್ಗೆ ಕ್ರಮ ಕೈಗೊಳ್ಳದ ಪರಿಣಾಮ ಗ್ರಾಹಕರೇ ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎಲ್ಲೆಡೆ ನಿರ್ಮಾಣವಾಗಿದೆ. ಡಿಲಿವರಿ ಬಾಯ್‌ಗೆ ಆಧಾರ್ ಲಿಂಕ್ ಮಾಡಿಸಲು ಮೊಬೈಲ್ ಆ್ಯಪ್‌ನ್ನು ಕೂಡ ಅಭಿವೃದ್ಧಿಪಡಿಸಲಾಗಿದ್ದರೂ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಮೊಬೈಲ್ ಆ್ಯಪ್ ಕೆಲಸ ಮಾಡುತ್ತಿಲ್ಲವಂತೆ:
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಅಡುಗೆ ಅನಿಲ ಸಂಪರ್ಕ ಇರುವ ಗ್ರಾಹಕರ ಆಧಾರ್ ಜೋಡಣೆಯ ಕೆವೈಸಿ ಮಾಡಿಸಲಾಗುತ್ತಿದೆ. ಕೆವೈಸಿ ಮಾಡಿಸಲು ಯಾವುದೇ ನಿರ್ದಿಷ್ಟ ಗುಡುವು ನೀಡಿಲ್ಲ. ಆದರೆ ಸಬ್ಸಿಡಿ ನೀಡುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಆಧಾರ್ ಲಿಂಕ್‌ನ್ನು ಡೋರ್ ಡಿಲಿವರಿ ಬಾಯ್ ಮೂಲಕವು ಮಾಡಿಸಬಹುದು. ಅದಕ್ಕಾಗಿ ಪ್ರತ್ಯೇಕವಾಗಿ ಮೊಬೈಲ್ ಆ್ಯಪ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಅದು ಕೆಲಸ ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಪಡಿತರ ಚೀಟಿಗಳ ಸಂಖ್ಯೆಗಿಂತ ಅಧಿಕವಾಗಿ ಅಡುಗೆ ಅನಿಲ ಸಂಪರ್ಕಗಳು ಹೆಚ್ಚಿವೆ. ಜಿಲ್ಲೆಯಲ್ಲಿ ಸರಿ ಸುಮಾರು 12 ಲಕ್ಷದಷ್ಟು ಜನಸಂಖ್ಯೆ ಇದೆ. ಅದರಲ್ಲಿ ಅರ್ಧದಷ್ಟು ಕುಟುಂಬಗಳು ಇದ್ದರೂ ಜಿಲ್ಲೆಯಲ್ಲಿ ಕನಿಷ್ಠ ಆರೇಳು ಲಕ್ಷದಷ್ಟು ಅಡುಗೆ ಅನಿಲ ಸಂಪರ್ಕ ಇರಬಹುದೆಂದು ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಸವಿತಾ ಉದಯವಾಣಿಗೆ ತಿಳಿಸಿದರು.
-ಕಾಗತಿ ನಾಗರಾಜಪ್ಪ