Advertisement

ಗ್ಯಾಸ್‌ ಪೈಪ್‌ಲೈನ್‌ ಸಾಧಕ-ಬಾಧಕ ಪರಿಶೀಲನೆ

03:47 PM Aug 11, 2022 | Team Udayavani |

ಹಾವೇರಿ: ನಗರದಲ್ಲಿ ಸಿಲಿಂಡರ್‌ ಗ್ಯಾಸ್‌ ಬದಲಾಗಿ ಪೈಪ್‌ಲೈನ್‌ ಮೂಲಕ ಪಿಎನ್‌ಜಿ ಸರಬರಾಜು ಮಾಡಲು ಸರ್ಕಾರ ಸಮ್ಮತಿಸಿದೆ. ನಗರಸಭೆಯಿಂದ ಯೋಜನೆಗೆ ಅನುಮತಿ ನೀಡುವ ಮೊದಲು ಬೇರೆ ನಗರದಲ್ಲಿ ನಡೆದಿರುವ ಕಾಮಗಾರಿ ಪರಿಶೀಲಿಸಿ, ಸಾಧಕ-ಬಾಧಕಗಳನ್ನು ಅವಲೋಕಿಸಿದ ಬಳಿಕ ಅನುಮೋದನೆ ನೀಡಲು ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.

Advertisement

ಸ್ಥಳೀಯ ನಗರಸಭೆ ಸಭಾಂಗಣದಲ್ಲಿ 12ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರದಲ್ಲಿ ಪಿಎನ್‌ಜಿ ಸರಬರಾಜು ಯೋಜನೆ ಕುರಿತು ಚರ್ಚಿಸಲಾಯಿತು.

ಎಜಿಪಿ ಸಿಟಿ ಗ್ಯಾಸ್‌ ಪ್ರೈ ಲಿ. ನ ಮಾರುಕಟ್ಟೆ ಮುಖ್ಯಸ್ಥರಾದ ಸಂತೋಷ ಕುಲಕರ್ಣಿ ಹಾಗೂ ಮಂಜುನಾಥ ಮಾತನಾಡಿ, ಎಜಿಪಿ ಪ್ರಥಮ್‌ ಕಂಪನಿ ಕೇಂದ್ರ ಸರ್ಕಾರದಿಂದ ಅಧಿಕೃತ ಮಾನ್ಯತೆ ಪಡೆದಿದ್ದು, ಸಿಟಿ ಗ್ಯಾಸ್‌ ವಿತರಣೆಯಲ್ಲಿ ದೊಡ್ಡ ಸಂಸ್ಥೆಯಾಗಿದೆ. ಎಲ್‌ಪಿಜಿ ಗ್ಯಾಸ್‌ಗಿಂತ ಪಿಎನ್‌ಜಿ ಅಗ್ಗವಾಗಿದೆ. ಪಿಎನ್‌ಜಿ ಅಳವಡಿಸಿಕೊಂಡು ಗ್ಯಾಸ್‌ ಖಾಲಿಯಾದಾಗ ಸಿಲಿಂಡರ್‌ ಬುಕ್‌ ಮಾಡುವ ಚಿಂತೆ ಇರುವುದಿಲ್ಲ. ವಿದ್ಯುತ್‌ನಂತೆಯೇ ಗ್ಯಾಸ್‌ ಗೂ ಬಿಲ್‌ ಜನರೇಟ್‌ ಆಗುತ್ತದೆ ಎಂದರು.

ಆಗ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಪ್ರತಿಕ್ರಿಯಿಸಿ, 2006ರಲ್ಲಿ ನಗರದಲ್ಲಿ ಆರಂಭವಾಗಿರುವ ಯುಜಿಡಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. 2016ರಲ್ಲಿ ಆರಂಭವಾಗಿರುವ 24*7ನೀರು ಪೂರೈಕೆ ಯೋಜನೆಯೂ ಮಂದಗತಿಯಲ್ಲಿ ಸಾಗಿದೆ. ಈ ಯೋಜನೆಗಳಿಂದ ನಗರದ ರಸ್ತೆಗಳೆಲ್ಲಾ ಹಾಳಾಗಿವೆ. ಅದರಿಂದ ಇನ್ನೂ ತೊಂದರೆ ಅನುಭವಿಸುತ್ತಿದ್ದೇವೆ. ಈಗ ನೀವು ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುತ್ತೇವೆ ಎನ್ನುತ್ತಾ ರಸ್ತೆ, ಚರಂಡಿ ಹಾಳು ಮಾಡಿ ಅರ್ಧಕ್ಕೆ ಹೋದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಬಿಜೆಪಿ ಸದಸ್ಯ ಬಸವರಾಜ ಬೆಳವಡಿ ಪ್ರತಿಕ್ರಿ ಯಿಸಿ, ಹಾವೇರಿ ಗ್ರಹಚಾರವೇ ಸರಿಯಿಲ್ಲ. ಇಲ್ಲಿ ಕೈಗೊಂಡಿರುವ ಯಾವ ಯೋಜನೆಗಳೂ ಸಮರ್ಪ ಕವಾಗಿ ಜಾರಿಯಾಗುತ್ತಿಲ್ಲ. ಇದೂ ಹಾಗಾಬಾರದು. ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಿ ಜನತೆಗೆ ಅನುಕೂಲ ಕಲ್ಪಿಸಬೇಕೆಂದರು.

ಇದಕ್ಕೆ ಸಮಜಾಯಿಷಿ ನೀಡಲು ಮುಂದಾದ ಎಜಿಪಿ ಸಿಟಿ ಗ್ಯಾಸ್‌ನ ಮಾರುಕಟ್ಟೆ ಮುಖ್ಯಸ್ಥ ಸಂತೋಷ ಕುಲಕರ್ಣಿ, ಪಿಎನ್‌ಜಿ ಪೈಪ್‌ ಲೈನ್‌ ಹಾನಿಯಾದರೆ, ಯಾವುದಾದರೂ ಪೈಪ್‌ ಹಾಳಾದರೆ ಅದರ ನಿರ್ವಹಣೆ ನಾವೇ ಮಾಡುತ್ತೇವೆ. 8 ವರ್ಷದಲ್ಲಿ ಜಿಲ್ಲೆಯಲ್ಲಿ 2ಲಕ್ಷ ಮನೆಗಳಿಗೆ ಪೈಪ್‌ಲೈನ್‌ ಅಳವಡಿಸುವ ಗುರಿ ಹೊಂದಿದ್ದೇವೆ. ನಗರದಲ್ಲಿ ಮೊದಲ ಹಂತದಲ್ಲಿ ವಿದ್ಯಾನಗರ, ಅಶ್ವಿ‌ನಿನಗರ, ಬಸವೇಶ್ವರ ನಗರದ 5ಸಾವಿರ ಮನೆಗಳಿಗೆ ಇದನ್ನು ಅನುಷ್ಠಾನಗೊಳಿಸುವ ಗುರಿ ಹೊಂದಿದ್ದು, ನಗರಸಭೆಯಿಂದ ಪರವಾನಗಿ ಕೊಟ್ಟರೆ 6 ತಿಂಗಳಲ್ಲಿ ಮನೆಗಳಿಗೆ ಪಿಎನ್‌ಜಿ ಒದಗಿಸುತ್ತೇವೆ.

Advertisement

ಪ್ರತಿ ಮನೆಯಿಂದ 6750 ರೂ. ಮುಗಂಡ ಹಣವನ್ನು 250ರೂ. ಗಳಂತೆ 27ಕಂತುಗಳಲ್ಲಿ ತುಂಬಿಸಿಕೊಳ್ಳುತ್ತೇವೆ. ದೀರ್ಘ‌ ಕಾಲದವರೆಗೆ ನಿರ್ವಹಣೆ ಮಾಡುತ್ತೇವೆ ಎಂದರು.

ಆಗ ಸದಸ್ಯ ಗಣೇಶ ಬಿಷ್ಟಣ್ಣನವರ ಮಾತನಾಡಿ, ನಗರಸಭೆಯಿಂದ ಸಮಿತಿ ರಚಿಸಿ ಈ ಕಂಪನಿಯವರು ಎಲ್ಲಿ ಕೆಲಸ ಮಾಡಿದ್ದಾರೋ ಅಲ್ಲಿಗೆ ಹೋಗಿ ಈ ಯೋಜನೆಯನ್ನು ಹೇಗೆ ನಿಭಾಯಿಸಿದ್ದಾರೆ ಎಂಬುದನ್ನು ಪರಿಶೀಲಿಸಿದ ನಂತರ ಅನುಮತಿ ನೀಡುವ ಕುರಿತು ತೀರ್ಮಾನಿಸೋಣ ಎಂದರು.

ಸದಸ್ಯೆ ಚನ್ನಮ್ಮ ಬ್ಯಾಡಗಿ ಮಾತನಾಡಿ, ಸಮಿತಿ ರಚಿಸೋದು ಬೇಡ. ಎಲ್ಲ ಸದಸ್ಯರನ್ನು ಕರೆದು ಕೊಂಡು ಹೋಗಿ ಎಂದರು. ಆಗ ಎಲ್ಲರೂ ಸಮ್ಮತಿ ಸಿದರು. ನಿರಂತರ ನೀರು ಸರಬರಾಜು ಯೋಜನೆಯ ಗುತ್ತಿಗೆದಾರರನ್ನು ಸಂಪೂರ್ಣವಾಗಿ ಕಪ್ಪು ಪಟ್ಟಿಗೆ ಸೇರಿಸಲು, ಜೆ.ಎಚ್‌. ಪಟೀಲ್‌ ವೃತ್ತದಲ್ಲಿ ಜೆ.ಎಚ್‌.ಪಟೇಲ್‌ ಅವರ ಪುತ್ಥಳಿ ನಿರ್ಮಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್‌ ಡಂಬಳ, ಉಪವಿಭಾಗಾಧಿಕಾರಿ, ಪೌರಾಯುಕ್ತ ಶಿವಾನಂದ ಉಳ್ಳೇಗಡ್ಡಿ, ಮುಖ್ಯಸ್ಥ ಗೌತಂ ಆನಂದ ಇದ್ದರು.

ನಗರದ ಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪೈಪ್‌ಲೈನ್‌ ಮೂಲಕ ಪಿಎನ್‌ಜಿ ಸರಬರಾಜು ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಈ ಯೋಜನೆ ಅನುಷ್ಠಾನದ ಕುರಿತು ಸದಸ್ಯರಿಗೆ ಸಮರ್ಪಕ ಮಾಹಿತಿ ನೀಡಲು ಎಲ್ಲೆಲ್ಲಿ ಈ ಯೋಜನೆ ಜಾರಿಯಾಗಿದೆಯೋ ಅಲ್ಲಿಗೆ ಆಸಕ್ತ ಸದಸ್ಯರನ್ನು ಕರೆದುಕೊಂಡು ಹೋಗಿ ಮಾಹಿತಿ ಕೊಡಿ. ಜತೆಗೆ ಸರ್ಕಾರದಿಂದಲೂ ಪರವಾನಗಿ ಪಡೆದುಕೊಳ್ಳುವ ಕೆಲಸ ಮಾಡಿ. ಬಳಿಕ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ರಸ್ತೆ, ಚರಂಡಿ ದುರಸ್ತಿಪಡಿಸುವ ನಿರ್ಬಂಧ ವಿಧಿಸಿ ಅನುಮತಿ ನೀಡುವ ಬಗ್ಗೆ ತೀರ್ಮಾಣ ಮಾಡೋಣ. ∙ನೆಹರು ಓಲೇಕಾರ, ಶಾಸಕರು, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next