ಮುಂಬಯಿ:ಮಹಾರಾಷ್ಟ್ರದ ಬದ್ಲಾಪುರದಲ್ಲಿನ ರಾಸಾಯನಿಕ ಕಾರ್ಖಾನೆಯಲ್ಲಿ ಗುರುವಾರ(ಜೂನ್ 03) ತಡರಾತ್ರಿ ಅನಿಲ ಸೋರಿಕೆಯಾಗಿದ್ದು, ಇದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಪ್ಪು ಶಿಲೀಂಧ್ರ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟ: ಹುಬ್ಬಳ್ಳಿಯಲ್ಲಿ ಮೂವರ ಬಂಧನ
ಶಿರ್ಗಾಂವ್ ನ ಎಂಐಡಿಸಿಯ ನೊಬೆಲ್ ಇಂಟರ್ಮಿಡಿಯೇಟ್ಸ್ ಪ್ರೈವೇಟ್ ಲಿ. ಕಂಪನಿಯಲ್ಲಿ ಅನಿಲ ಸೋರಿಕೆಯಾದ ನಂತರ ಸುಮಾರು ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನೆಲೆಸಿದ್ದ ಜನರು ಉಸಿರಾಟ ಸಮಸ್ಯೆ, ಕಣ್ಣುಗಳಲ್ಲಿ ಉರಿ ಕಾಣಿಸಿಕೊಂಡಿರುವುದಾಗಿ ದೂರಿದ್ದಾರೆ.
ಈ ಘಟನೆ ಗುರುವಾರ ರಾತ್ರಿ 10.30ರ ಸುಮಾರಿಗೆ ಸಂಭವಿಸಿರುವುದಾಗಿ ಥಾಣೆ ಮುನ್ಸಿಪಲ್ ಕಾರ್ಪೋರೇಶನ್ ತಿಳಿಸಿದೆ. ಅಲ್ಲದೇ ಒಂದು ಗಂಟೆಯೊಳಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ವಿವರಿಸಿದೆ. ಅನಿಲ ಸೋರಿಕೆಯ ಪರಿಣಾಮ ಜನರು ಉಸಿರಾಟದ ತೊಂದರೆ ಅನುಭವಿಸುವಂತಾಗಿತ್ತು. 11.24ಕ್ಕೆ ಅಗ್ನಿಶಾಮಕ ದಳ ಅನಿಲ ಸೋರಿಕೆಯಾಗುವುದನ್ನು ನಿಲ್ಲಿಸಿತ್ತು. ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಮುನ್ಸಿಪಲ್ ಕಾರ್ಪೋರೇಶನ್ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಅತಿಯಾದ ಬಿಸಿಯಿಂದಾಗಿ ಅನಿಲ ಸೋರಿಕೆಯಾಗಲು ಕಾರಣವಾಗಿದೆ ಎಂದು ಕಾರ್ಪೋರೇಶನ್ ತಿಳಿಸಿದೆ. ಉಸಿರಾಟದ ತೊಂದರೆ ಅನುಭವಿಸಿದ ಕೆಲವು ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಡಿಸ್ ಚಾರ್ಜ್ ಮಾಡಲಾಯಿತು ಎಂದು ವರದಿ ವಿವರಿಸಿದೆ.