ಕಾಸರಗೋಡು: ಹೊಸದುರ್ಗ ಚಿತ್ತಾರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಟ್ಯಾಂಕರ್ ಲಾರಿಯಿಂದ ಗುರುವಾರ ಬೆಳಗ್ಗೆ 7.30ಕ್ಕೆ ದಿಢೀರ್ ಅನಿಲ ಸೋರಿಕೆ ಉಂಟಾಗಿದ್ದು, ತತ್‌ಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಸಕಾಲಿಕ ಕಾರ್ಯಾಚರಣೆ ನಡೆಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿತು. ಪೊಲೀಸರು ಅಗತ್ಯದ ನೆರವು ನೀಡಿದರು.
ಅನಿಲ ಸೋರಿಕೆ ಉಂಟಾದ ಕೂಡಲೇ ಟ್ಯಾಂಕರ್ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಯಿತು. ಆ ಪ್ರದೇಶದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಪರಿಸರದವರನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಯಿತು. ಈ ಟ್ಯಾಂಕರ್ ಲಾರಿ ಮಂಗಳೂರಿನಿಂದ ಅಡುಗೆ ಅನಿಲ ಹೇರಿಕೊಂಡು ಸಾಗುತ್ತಿತ್ತು. ಇದರಿಂದಾಗಿ ಕಾಸರಗೋಡಿಗೆ ಬರುವ ವಾಹನಗಳನ್ನು ಹೊಸದುರ್ಗ ಟ್ರಾಫಿಕ್ ಜಂಕ್ಷನ್ ಮೂಲಕ, ಹೊಸದರ್ಗಕ್ಕೆ ತೆರಳುವ ವಾಹನಗಳನ್ನು ಚಾಮುಂಡಿಕುನ್ನಿನ ಮೂಲಕ ಸಾಗುವಂತೆ ಮಾಡಲಾಯಿತು.
************************************************************************************************
ಮಗುವಿನ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಮಹಿಳೆಗೆ ಸಜೆ:
ಕಾಸರಗೋಡು: ಜ್ವರದಿಂದ ಆಸ್ಪತ್ರೆಗೆ ಬಂದು ಸರತಿ ಸಾಲಿನಲ್ಲಿ ತಂದೆ ಜತೆ ನಿಂತಿದ್ದ ಮಗುವಿನ ಕುತ್ತಿಗೆಯಿಂದ ಚಿನ್ನದ ಸರ ಸೆಳೆದು ಪರಾರಿಯಾದ ಪ್ರಕರಣದಲ್ಲಿ ತಮಿಳುನಾಡು ಕೃಷ್ಣಗಿರಿ ಹೊಸೂರು ಅಮ್ಮಾಳ್ ಕೋವಿಲ್‌ನ ತೆರು ನಿವಾಸಿ ದಿವ್ಯಾ(44)ಳಿಗೆ ಕಾಸರಗೋಡು ಚೀಫ್ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 6 ತಿಂಗಳ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಎರಡು ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.
2017 ಜುಲೈ 5ರಂದು ಮಧ್ಯಾಹ್ನ ಚೆರ್ಕಳ ಸಮೀಪದ ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳವು ಮಾಡಲಾಗಿತ್ತು.