ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿರುವ ಇಫ್ಕೋ ರಸಗೊಬ್ಬರ ಕಾರ್ಖಾನೆಯಲ್ಲಿ ಭಾರೀ ಅನಿಲ ದುರಂತ ಸಂಭವಿಸಿದ್ದು, ಇಬ್ಬರು ಹಿರಿಯ ಅಧಿಕಾರಿಗಳು ಸಾವನ್ನಪ್ಪಿ, 15ಕ್ಕಿಂತ ಹೆಚ್ಚು ಜನರು ಅಸ್ವಸ್ಥರಾದ ಘಟನೆ ನಡೆದಿದೆ.
ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಪರೇಟಿವ್ ಲಿಮಿಟೆಡ್ ನ ಫುಲ್ ಫುರ್ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಮೃತಪಟ್ಟವರನ್ನು ವಿ. ಪಿ ಸಿಂಗ್ ಹಾಗೂ ಅಭಯ್ ನಂದನ್ ಎಂದು ಗುರುತಿಸಲಾಗಿದೆ. ಮಂಗಳವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದ್ದು ಅಮೋನಿಯಾ ಅನಿಲ ಸೋರಿಕೆಯಾಗಿದ್ದು ಘಟನೆಗೆ ಕಾರಣ ಎನ್ನಲಾಗಿದೆ.
ರಾಸಾಯನಿಕ ಗೊಬ್ಬರ ಕಾರ್ಖಾನೆಯಲ್ಲಿ ಉಂಟಾದ ಅಮೋನಿಯ ಅನಿಲ ಸೋರಿಕೆಯಿಂದ 15ಕ್ಕಿಂತ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅನಿಲ ಸೋರಿಕೆಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ಐದಾರು ವರ್ಷದಲ್ಲಿ ಈ ಘಟಕದಲ್ಲಿ ಹಲವಾರು ಭಾರೀ ಅನಿಲ ಸೋರಿಕೆಯಾಗಿದೆ. 2019 ರಲ್ಲಿ ನಾಲ್ವರು ಕಾರ್ಮಿಕರು ಮೂರ್ಛೆ ತಪ್ಪಿದ್ದರು ಎಂದು ವರದಿಯಾಗಿದೆ.