Advertisement

Bangalore: ಮನೆಯಲ್ಲಿ ಗ್ಯಾಸ್‌ ಸ್ಫೋಟ: ಏಳು ಮಂದಿಗೆ ಗಾಯ

10:59 AM Jan 17, 2024 | Team Udayavani |

ಬೆಂಗಳೂರು: ಮನೆಯಲ್ಲಿ ಸಿಲಿಂಡರ್‌ ಸ್ಫೋಟಿಸಿದ ಪರಿಣಾಮ ಏಳು ಮಂದಿ ಗಾಯಗೊಂಡು, ಐದು ಮನೆಗಳಿಗೆ ಹಾನಿಯಾಗಿರುವ ಘಟನೆ ನಡೆದಿದೆ.

Advertisement

ಯಲಹಂಕ‌ ಪೊಲೀಸ್‌ ಠಾಣೆ ವ್ಯಾಪ್ತಿಯ ಲಾಲ್‌ ಬಹದ್ದೂರ್‌ ಶಾಸ್ತ್ರಿ ಬಡಾವಣೆಯಲ್ಲಿ ನಿವಾಸಿಗಳಾದ ಅಸ್ಮಾ ಬಾನು (58) ಎಂಬುವವರ ಮನೆಯಲ್ಲಿ ಮಂಗಳವಾರ ಬೆಳಗ್ಗೆ 7.45ರ ಸುಮಾರಿಗೆ ಘಟನೆ ಸಂಭವಿಸಿದೆ.

ಸ್ಫೋಟದಿಂದ ಅಸ್ಮಾ ಬಾನು, ಷರಿಯಾ ಬಾನು (50), ಶಾಹಿದ್‌ (16), ಸಲ್ಮಾ (22), ಅಸ್ಮಾ (50), ಮೀನಾಕ್ಷಿ ತಮ್ಮಯ್ಯ (38) ಹಾಗೂ ಅಫ್ರೋಜ್‌ (23) ಎಂಬುವರು ಗಾಯಗೊಂಡಿದ್ದಾರೆ. ಇದರಲ್ಲಿ ಅಸ್ಮಾ ಬಾನು ಮತ್ತು ಷರಿಯಾ ಬಾನು ಪರಿಸ್ಥಿತಿ ಚಿಂತಾಜನಕವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಆಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ: ಲಾಲ್‌ ಬಹುದೂರು ಶಾಸ್ತ್ರಿ ನಗರದಲ್ಲಿ ವಠಾರ ರೀತಿಯಲ್ಲಿ ಚಿಕ್ಕ ಚಿಕ್ಕ ಮನೆಗಳಿದ್ದು, ಹಲವು ಕುಟುಂಬಗಳು ವಾಸಿಸುತ್ತಿವೆ. ಇದೇ ವಠಾರದಲ್ಲಿ ಅಸ್ಮಾ ಬಾನು ಬಾಡಿಗೆಗೆ ಇದ್ದಾರೆ. ರಾತ್ರಿ ಊಟ ಮುಗಿಸಿದ ಬಳಿಕ ಗ್ಯಾಸ್‌ ಸಿಲಿಂಡರ್‌ ಆಫ್‌ ಮಾಡದೇ ನಿದ್ದೆಗೆ ಜಾರಿರುವ ಸಾಧ್ಯತೆಯಿದೆ. ಇಡೀ ರಾತ್ರಿ ಅನಿಲ ಸೋರಿಕೆಯಾಗಿ ಅಡುಗೆ ಮನೆಗೆ ವ್ಯಾಪಿಸಿದೆ. ಬೆಳಗ್ಗೆ ಅಸ್ಮಾ ಬಾನು ಗ್ಯಾಸ್‌ ಸ್ಟೌವ್‌ ಹಚ್ಚಲು ಬೆಂಕಿ ಕಡ್ಡಿ ಗೀರಿದ ತಕ್ಷಣವೇ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಸ್ಫೋಟದಿಂದ ಗಾಯಗೊಂಡಿದ್ದ ಏಳು ಮಂದಿ ಗಾಯಾಳುಗಳನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.

ನೆರೆಮನೆಯವರಿಗೂ ಗಾಯ, 5 ಮನೆಗಳಿಗೆ ಹಾನಿ : ಸ್ಫೋಟದ ತೀವ್ರತೆಗೆ ನೆರೆ ಮನೆಯವರಿಗೂ ಗಾಯಗಳಾಗಿದ್ದು, ಆರೇಳು ಮನೆಗಳ ಗೋಡೆಗಳು, ಕಿಟಕಿಗಳು, ಬಾಗಿಲುಗಳಿಗೆ ಹಾನಿಯಾಗಿದೆ. ಜತೆಗೆ ಗೋಡೆಗಳ ಇಟ್ಟಿಗೆಗಳು ಕಿತ್ತು ಬಿದ್ದಿವೆ. ಪೀಠೊಪಕರಣಗಳು, ಸರಕುಗಳಿಗೆ ಹಾನಿಯಾಗಿದೆ. ತಕ್ಷಣವೇ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಮೂರು ಅಗ್ನಿಶಾಮಕ ವಾಹನಗಳೊಂದಿಗೆ ಧಾವಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next