Advertisement

ಸವಿತಾಳಿಗೆ ಗ್ಯಾಸ್‌ ಸಿಲಿಂಡರ್‌, ಸ್ಟವ್‌ ವಿತರಣೆ

07:00 AM Jun 30, 2018 | |

ಕಾಸರಗೋಡು: ಸೋರುತ್ತಿರುವ ಮನೆಯಲ್ಲಿ ಬಹುಕಷ್ಟದ ಬದುಕು ನಡೆಸುತ್ತಿರುವ ಸವಿತಾ  ಅವರ ಸಂಕಷ್ಟದ ಕಥೆಯನ್ನು ಕೇಳಿ ತಿಳಿದ ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಸಂಘಟನೆಯ ಪದಾಧಿಕಾರಿಗಳು ಮಾರ್ಗದರ್ಶಕರಾದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ| ರತ್ನಾಕರ ಮಲ್ಲಮೂಲೆ ಅವರ ನೇತೃತ್ವದಲ್ಲಿ ಸವಿತಾರ ನಿವಾಸಕ್ಕೆ ತೆರಳಿದರು. 
 
ಕಾಸರಗೋಡು ತಾಲೂಕಿನ ಚೆರ್ಕಳ ಪಂಚಾಯತ್‌ನ ಪಾಡಿಯ ಮಹಾಬಲ ರೈ ಹಾಗೂ ಸುಮಿತ್ರಾ ದಂಪತಿಯ ಪುತ್ರಿ ಸವಿತಾ. 

Advertisement

ಟಾರ್ಪಾಲ್‌ ಹಾಕಿದ ಸೋರುವ ಮನೆಯಲ್ಲಿ  ಕಟ್ಟಿಗೆ ಕೂಡ ಶೇಖರಿಸಲಾಗದೆ ಒದ್ದೆ ನೆಲದಲ್ಲಿ ಒಲೆ ಉರಿಸುವ ಅವರ ದುಃಸ್ಥಿತಿಯನ್ನು ಕಂಡು ಮಾರ್ಗದರ್ಶಕರಾದ  ಡಾ| ರತ್ನಾಕರ ಮಲ್ಲಮೂಲೆ ಅವರು ತಮ್ಮ ಮನೆಯಿಂದ  ಗ್ಯಾಸ್‌ ಸಿಲಿಂಡರ್‌ನ್ನು ತಂದು ಯುವಬಳಗದ ಪದಾಧಿಕಾರಿಗಳೊಂದಿಗೆ ಸವಿತಾ ನಿವಾಸಕ್ಕೆ ತೆರಳಿ ಗ್ಯಾಸ್‌ ಒಲೆಯನ್ನು ವ್ಯವಸ್ಥೆಗೊಳಿಸಿದರು. ಯುವಬಳಗದ ಪದಾಧಿಕಾರಿಗಳಾದ ಕೀರ್ತನ್‌ ಕುಮಾರ್‌ ಸಿ.ಎಚ್‌., ಅಜಿತ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
 
ಸವಿತಾ ಅವರ ತಂದೆ ಮಾಡುವ ಕೃಷಿ ಹಾಗೂ ತಾಯಿ ಬೀಡಿ ಕಟ್ಟಿ ಲಭಿಸುವ ಸಂಪಾದನೆಯೇ ಇವರಿಗೆ ಏಕ ಆಶ್ರಯ. ಮೂವತ್ತು ವರ್ಷಕ್ಕಿಂತ ಹೆಚ್ಚು ಹಳೆಯ ಈ ಮನೆಯ ಗೋಡೆಯನ್ನು ಮಣ್ಣಿನಿಂದ ನಿರ್ಮಿಸಲಾಗಿದ್ದು, ಗೋಡೆ ಎಲ್ಲವೂ ಮಳೆನೀರಿಗೆ ಕರಗಿ ಜರಿದು ಬಿದ್ದಿದೆ. ಮನೆಯ ಮಾಡಿಗೆ ಪಕ್ಕಾಸುಗಳಾವುದೂ ಇಲ್ಲ. ಮಾಡೇ ಒಂದು ಬದಿಗೆ ಜರಿದಂತಿದೆ. ಮಣ್ಣಿನಿಂದ ನಿರ್ಮಿಸಿದ ಗೋಡೆಯ ಮೇಲೆ ಸೋಗೆ ಹಾಸಿದ್ದು ಅದರ ಮೇಲೆ ಟಾರ್ಪಾಲ್‌ ಹಾಸಲಾಗಿದೆ. ಈ ಟರ್ಪಾಲ್‌ ಹಾಗೂ ಸೋಗೆಯನ್ನು ಪ್ರತಿ ಮಳೆಗಾಲ ಆರಂಭದ ಮುನ್ನ ಇವರು ಬದಲಾಯಿಸಬೇಕಾಗುತ್ತದೆ. ಆದರೂ ಸೋರುವ ಮಾಡಿಗೆ ಮಾತ್ರ ಪರಿಹಾರವಿಲ್ಲ.
 
ಕಳೆದ ಎರಡು ಮೂರು ವಾರಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ಇವರು ಮನೆಯೊಳಗೆ ಕೊಡೆ ಬಿಡಿಸಿ ನಿಲ್ಲಬೇಕಾದ ಸ್ಥಿತಿ ಯಾರನ್ನೂ ಕಣ್ಣೀರಿಡುವಂತೆ ಮಾಡುತ್ತಿದೆ. ರಾತ್ರಿ ಹಗಲಿಡೀ ಮಳೆ ಬಂದರೆ ಸೋರುವ ಮನೆಯಲ್ಲಿ ಇವರಿಗೆ ನಿದ್ರೆ ಮಾಡಲು ವ್ಯವಸ್ಥೆಯಿಲ್ಲ. ಯಾವುದೇ ಕ್ಷಣದಲ್ಲಿ ಈ ಮನೆ ಸಂಪೂರ್ಣವಾಗಿ ಜರಿದು ಬೀಳುವ ಸ್ಥಿತಿಯಲ್ಲಿದೆ. 

ಸವಿತಾ ಬದುಕಿಗೆ ಮತ್ತಷ್ಟು ಸಹಾಯ ಬೇಕಿದೆ
ಸವಿತಾ ಅವರ ಸಹೋದರಿಯ ವಿವಾಹಕ್ಕಾಗಿ ಇವರು ಬ್ಯಾಂಕ್‌ನಲ್ಲಿ ಮಾಡಿದ ಸಾಲ ತೀರಿಸಲು ಇದುವರೆಗೆ ಸಾಧ್ಯವಾಗಿಲ್ಲ. ಒಂದೂವರೆ ಲಕ್ಷ ರೂ. ಬ್ಯಾಂಕ್‌ ಸಾಲವಿದ್ದು ಇದಕ್ಕೆ ಪ್ರತಿವರ್ಷ 20,000 ರೂ. ಬಡ್ಡಿಯನ್ನು ಪಾವತಿಸಲು ಕೂಡ ಇವರು ತುಂಬಾ ಸಂಕಷ್ಟ ಪಡುವಂತಾಗಿದೆ. ಸವಿತಾಳ ಕುಟುಂಬಕ್ಕೆ  ಇದುವರೆಗೆ ಶೌಚಾಲಯ ಸೌಕರ್ಯವಿಲ್ಲ. ಕುಡಿಯುವ ನೀರಿಗಾಗಿ ಒಂದು ಬಾವಿ ಇದೆಯಾದರೂ ಬೇಸಗೆಯಲ್ಲಿ ಇದರ ನೀರು ಬತ್ತುತ್ತದೆ. ಬೇಸಗೆ ಬಂದರೆ ಸಮೀಪದ ಮನೆಯ ಕೊಳವೆಬಾವಿಯಿಂದ ನೀರು ತರಬೇಕಾದ ದುಃಸ್ಥಿತಿ. ಸವಿತಾಳ ಕುಟುಂಬದ ದುಃಸ್ಥಿತಿಯನ್ನು ಮನಗಂಡು  ಮಂಜೇಶ್ವರ ಗೋವಿಂದ ಪೈ  ಸ್ಮಾರಕ ಸರಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಆರ್ಥಿಕವಾಗಿ ಹಿಂದುಳಿದ ಈ ಕುಟುಂಬಕ್ಕೆ ಪುಟ್ಟ ಮನೆ ನಿರ್ಮಿಸಿ ನೀಡಲು ಮುಂದಾಗಿದೆ. ಇವರಿಗೆ ಸಹಾಯ ಮಾಡಲು ಇಚ್ಛಿಸುವವರು ಕಾಲೇಜಿನ ಎನ್‌ಎಸ್‌ಎಸ್‌ ಘಟಕವನ್ನು ಅಥವಾ ಸವಿತಾ ಕುಟುಂಬವನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next